'24 ಲಕ್ಷ ಕುಟುಂಬಗಳಿಗೆ ಮನೆ ನೀಡಿದ್ದೇವೆʼ ಎಂಬ ಪ್ರಧಾನಿಯ ಜಾಹೀರಾತಿನಲ್ಲಿರುವ ಮಹಿಳೆಗೆ ಸ್ವಂತ ಮನೆಯೇ ಇಲ್ಲ!

Update: 2021-03-20 15:06 GMT
photo: newslaundry

ಕೋಲ್ಕತ್ತಾ: ಫೆಬ್ರವರಿ 14 ಮತ್ತು 25 ರಂದು, ಕೇಂದ್ರ ಸರಕಾರವು ನೀಡಿದ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಜಾಹೀರಾತನ್ನು  ಪ್ರಮುಖ ಪತ್ರಿಕೆಗಳಾದ ಪ್ರಭಾತ್ ಖಬರ್, ಸಂಮಾರ್ಗ್ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಪ್ರಕಟಿಸಲಾಯಿತು. ಜಾಹೀರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಗುತ್ತಿರುವ ಫೋಟೋ ಜೊತೆಗೆ ಮಹಿಳೆಯೋರ್ವರ ಚಿತ್ರವೂ ಇತ್ತು. 'ಸ್ವಾವಲಂಬಿ ಭಾರತ, ಸ್ವಾವಲಂಬಿ ಬಂಗಾಳ' ಎಂಬ ಘೋಷಣೆಯೊಂದಿಗೆ, ಈ ಜಾಹೀರಾತಿನಲ್ಲಿ, 'ನಾನು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ನನ್ನ ಮನೆಯನ್ನು ಪಡೆದುಕೊಂಡಿದ್ದೇನೆ' ಎಂದು ಬರೆಯಲಾಗಿತ್ತು. "ತಲೆಯ ಮೇಲಿರುವ ಛಾವಣಿಯಿಂದಾಗಿ ಸುಮಾರು 24 ಲಕ್ಷ ಕುಟುಂಬಗಳು ಸ್ವಾವಲಂಬಿಯಾದವು. ಒಗ್ಗೂಡಿ ಸ್ವಾವಲಂಬಿ ಭಾರತದ ಕನಸನ್ನು ನನಸಾಗಿಸಿ" ಎಂದೂ ಅದರಲ್ಲಿ ಬರೆಯಲಾಗಿತ್ತು.

ಪತ್ರಿಕೆಗಳ ಮೊದಲ ಪುಟದ ಅರ್ಧಭಾಗದಲ್ಲಿ ಮುದ್ರಿಸಲಾದ ಈ ಜಾಹೀರಾತಿನಲ್ಲಿರುವ ಮಹಿಳೆಯನ್ನು ಲಕ್ಷ್ಮೀ ದೇವಿ ಎಂದು ಗುರುತಿಸಲಾಗಿದೆ. 

48 ವರ್ಷದ ಲಕ್ಷ್ಮಿ ತನ್ನ ಚಿತ್ರವನ್ನು ಪತ್ರಿಕೆಯಲ್ಲಿ ನೋಡಿದಾಗಿನಿಂದಲೂ ತೊಂದರೆಗೀಡಾಗಿದ್ದಾರೆ ಎಂದು newslaundry.com ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಅವರ ಈ ಚಿತ್ರವನ್ನು ಯಾವಾಗ ಮತ್ತು ಯಾರು ಕ್ಲಿಕ್‌ ಮಾಡಿದರು ಎಂಬುದು ಸಹ ಅವರಿಗೆ ತಿಳಿದಿಲ್ಲ. ಜಾಹೀರಾತು ಪ್ರಕಟವಾದ ಬಳಿಕ ಅವರು ಎಲ್ಲಾ ಪತ್ರಿಕೆ ಕಚೇರಿಗಳ ಸುತ್ತಲೂ ಹೋಗುತ್ತಿದ್ದರು ಮತ್ತು ನನ್ನ ಚಿತ್ರವನ್ನು ಏಕೆ ಮುದ್ರಿಸಿದ್ದೀರಿ ಎಂದು ಕೇಳುತ್ತಿದ್ದರು. ಈ ಫೋಟೋವನ್ನು ಪತ್ರಿಕೆಗಳು ಮುದ್ರಿಸಿವೆ ಎಂದು ಲಕ್ಷ್ಮಿ ಭಾವಿಸಿದರೆ, ಈ ಜಾಹೀರಾತನ್ನು ಭಾರತ ಸರ್ಕಾರವು ಬಿಡುಗಡೆ ಮಾಡಿತ್ತು.

500 ರೂಪಾಯಿಯ ಬಾಡಿಗೆ ಕೋಣೆಯಲ್ಲಿ ವಾಸಿಸುತ್ತಿರುವ ಲಕ್ಷ್ಮೀ:

ಜಾಹೀರಾತಿನಲ್ಲಿ, ಲಕ್ಷ್ಮಿಯ ಫೋಟೋದೊಂದಿಗೆ, ಪ್ರಧಾನ ಮಂತ್ರಿಯ ಯೋಜನೆಯಿಂದ ನಮಗೆ ಮನೆ ದೊರಕಿದೆ ಎಂದಿದ್ದರೂ, ನಿಜವಾಗಿ ಲಕ್ಷ್ಮಿ ದೇವಿಗೆ ಸ್ವಂತ ಮನೆ ಕೂಡ ಇಲ್ಲ. ಲಕ್ಷ್ಮಿ ತನ್ನ ಕುಟುಂಬದ ಐವರು ಸದಸ್ಯರೊಂದಿಗೆ 500 ರೂಪಾಯಿ ಬಾಡಿಗೆಯಿರುವ ಸಣ್ಣ ಗುಡಿಸಲೊಂದರಲ್ಲಿ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದಾರೆ.

ಮೂಲತಃ ಬಿಹಾರದ ಹಾಪ್ರಾ ಜಿಲ್ಲೆಯ ಲಕ್ಷ್ಮಿ ದೇವಿ ಬಾಲ್ಯದಲ್ಲಿ ತನ್ನ ಕುಟುಂಬ ಸದಸ್ಯರೊಂದಿಗೆ ಕೋಲ್ಕತ್ತಾಗೆ ತೆರಳಿದರು. ಕಳೆದ 40 ವರ್ಷಗಳಿಂದ ಕೋಲ್ಕತ್ತಾದ ಬಹುಗಜಾರ್ ಪೊಲೀಸ್ ಠಾಣೆ ವಲಯದ ಮಲಗಾ ಲೈನ್ ಪ್ರದೇಶದಲ್ಲಿ ಅವರ ಕುಟುಂಬವು ವಾಸಿಸುತ್ತಿದೆ. ಅವರ ಪತಿ ಬಿಹಾರದ ನಿವಾಸಿ ಚಂದ್ರದೇವ್ ಪ್ರಸಾದ್ 2009 ರಲ್ಲಿ ನಿಧನರಾದರು.

ಲಕ್ಷ್ಮೀದೇವಿಯ ಪುತ್ರ ಮತ್ತು ಸೊಸೆ

ಲಕ್ಷ್ಮಿ ದೇವಿ ಪ್ರಕಾರ, "ನನಗೆ ಹಳ್ಳಿಯಲ್ಲಿ ಜಮೀನು ಇಲ್ಲ. ಬಂಗಾಳದಲ್ಲೂ ಸ್ವಂತ ಜಮೀನು ಇಲ್ಲ. ನನ್ನ ಗಂಡನ ಮರಣದ ನಂತರ ಎಲ್ಲಾ ಜವಾಬ್ದಾರಿ ನನ್ನ ಮೇಲಿದೆ. ಮೂವರು ಪುತ್ರರು ಮತ್ತು ಮೂವರು ಪುತ್ರಿಯರಿದ್ದಾರೆ. ಇಬ್ಬರು ಗಂಡು ಮಕ್ಕಳು ನನ್ನೊಂದಿಗೆ ವಾಸಿಸುತ್ತಿದ್ದಾರೆ. ಎಲ್ಲರ ವಿವಾಹವನ್ನೂ ನೆರವೇರಿಸಿದ್ದೇನೆ. ಅವರು ಪ್ರತಿದಿನ 200 ರಿಂದ 300 ರೂಪಾಯಿಗಳನ್ನು ಗಳಿಸುತ್ತಾರೆ." ಎಂದು ಹೇಳುತ್ತಾರೆ

"ನನ್ನ ಪತಿ ಬಂಗಾಳ ಬಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಅವರ ಮರಣದ ನಂತರ, 10 ವರ್ಷಗಳ ಕಾಲ ನನಗೆ ಕೆಲಸ ಸಿಗಲಿಲ್ಲ. ಅದರ ನಂತರ, ಸಿಕ್ಕ ಸಿಕ್ಕ ಕ್ಲೀನಿಂಗ್ ಕೆಲಸವನ್ನು ಪ್ರಾರಂಭಿಸಿದೆ. ಇದೀಗ ನಾನು ಉದ್ಯಾನವನದಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದೇನೆ. ಅಲ್ಲಿ ನಾನು ತಿಂಗಳಿಗೆ 500 ರೂಪಾಯಿಗಳನ್ನು ಪಡೆಯುತ್ತೇನೆ. ನನ್ನ ಗಂಡನ ಮರಣದ ನಂತರ ನನಗೆ ಎರಡು ಸಾವಿರ ರೂಪಾಯಿ ಪಿಂಚಣಿ ಕೂಡ ಸಿಗುತ್ತದೆ ಎಂದು ಅವರು ಹೇಳಿದ್ದಾರೆ.

ಲಕ್ಷ್ಮೀದೇವಿಯ ಬಾಡಿಗೆ ಮನೆಗೆ ಹೋಗುವ ದಾರಿ

ನೀವು ಮನೆ ಹೊಂದಿದ್ದೀರಾ? ಈ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮಿ, "ನನಗೆ ಎಲ್ಲಿ ಮನೆ ಇದೆ. ನಾನು 500 ರೂಪಾಯಿ ಹರಕು ಗುಡಿಸಲಿನಲ್ಲಿ ವಾಸಿಸುತ್ತಿದ್ದೇನೆ. ಇದರಲ್ಲಿ ನನ್ನ ಇಬ್ಬರು ಗಂಡು ಮಕ್ಕಳು, ಅಳಿಯ ಮತ್ತು ಅವರ ಇಬ್ಬರು ಮಕ್ಕಳು ವಾಸಿಸುತ್ತಿದ್ದಾರೆ. ನಾವು ಒಂದೇ ಮನೆಯಲ್ಲಿ ಮಲಗುತ್ತೇವೆ. ಅದು ಕಡ್ಡಾಯವಾದಂತಹ ಪರಿಸ್ಥಿತಿಯಾಗಿ ಮಾರ್ಪಟ್ಟಿದೆ" ಎಂದು ಲಕ್ಷ್ಮೀ ದೇವಿ ಹೇಳುತ್ತಾರೆ.

newslaundry.com ತಂಡವು ಅಂಧೇರಿ ಬೀದಿಯಲ್ಲಿರುವ ಅವರ ಮನೆಗೆ ಭೇಟಿ ನೀಡಿತು. ಮನೆಯು ಸಂಪೂರ್ಣ ಕೆಟ್ಟ ಸ್ಥಿತಿಯಲ್ಲಿತ್ತು. ಗೋಡೆಯು ಅನೇಕ ಸ್ಥಳಗಳಲ್ಲಿ ಕಳಪೆ ಸ್ಥಿತಿಯಲ್ಲಿತ್ತು. ಕೋಣೆಯ ಒಂದು ಮೂಲೆಯಲ್ಲಿ ಬಟ್ಟೆಗಳನ್ನು ನೇತುಹಾಕಲಾಗಿತ್ತು, ಪಾತ್ರೆಗಳನ್ನು ಇನ್ನೊಂದು ಮೂಲೆಯಲ್ಲಿ ಇರಿಸಲಾಗಿತ್ತು. "ನಾವು ತುಂಬಾ ತೊಂದರೆಯಲ್ಲಿ ವಾಸಿಸುತ್ತಿದ್ದೇವೆ. ಸೀಮೆಎಣ್ಣೆಯನ್ನು ಲೀಟರ್‌ಗೆ 100 ರೂ.ಗೆ ಖರೀದಿಸಿ ಒಲೆಯ ಮೇಲೆ ಆಹಾರ ಬೇಯಿಸುತ್ತಿದ್ದೇವೆ" ಎಂದು ಲಕ್ಷ್ಮಿ ದೇವಿಯ ಸೊಸೆ ಅನಿತಾ ದೇವಿ ಹೇಳುತ್ತಾರೆ.

ಲಕ್ಷ್ಮಿಯ ಕಿರಿಯ ಮಗ ರಾಹುಲ್ ಪ್ರಸಾದ್ ಕೂಡ ಮನೆಯಲ್ಲಿ ಉಪಸ್ಥಿತರಿದ್ದರು. ನಾಲ್ಕನೇ ತರಗತಿಯವರೆಗೆ ಅಧ್ಯಯನ ಮಾಡಿರುವ 25 ವರ್ಷದ ರಾಹುಲ್, "ನಾವು ಸರ್ಕಾರದಿಂದ ಅನಿಲವನ್ನು ಪಡೆಯಲಿಲ್ಲ ಮತ್ತು ನಾವು ಕೊಳೆಗೇರಿಯಲ್ಲಿ ವಾಸಿಸುತ್ತಿರುವುದರಿಂದ ಸ್ವಂತವಾಗಿ ಖರೀದಿಸಲು ಸಾಧ್ಯವಾಗಲಿಲ್ಲ" ಎಂದು  ಹೇಳುತ್ತಾರೆ.

ಲಕ್ಷ್ಮಿ ದೇವಿಯ ಕುಟುಂಬದ ಜನರು ಮಲವಿಸರ್ಜನೆಗಾಗಿ ಹತ್ತಿರದ ನಿಗಮದ ಶೌಚಾಲಯಕ್ಕೆ ಹೋಗುತ್ತಾರೆ. "ನಮಗೆ ಮನೆಯೇ ಇಲ್ಲದಿದ್ದರೆ, ಶೌಚಾಲಯ ಹೇಗೆ ಇರುತ್ತದೆ" ಎಂದು ರಾಹುಲ್ ಹೇಳುತ್ತಾರೆ. ಕಾರ್ಪೊರೇಷನ್ ಶೌಚಾಲಯವನ್ನು ಹತ್ತಿರದಲ್ಲೇ ನಿರ್ಮಿಸಲಾಗಿದೆ, ಒಮ್ಮೆ ಅಲ್ಲಿಗೆ ಹೋಗಲು ಐದು ರೂಪಾಯಿ ವೆಚ್ಚವಾಗುತ್ತದೆ ಎಂದು ಅವರು ಹೇಳುತ್ತಾರೆ.

ಪತ್ರಿಕೆಯ ಫೋಟೋ ಮುದ್ರಿಸಿದ ಕಥೆ

ಲಕ್ಷ್ಮಿ ದೇವಿ ಅವರ ಚಿತ್ರ ಯಾವಾಗ ತೆಗೆದುಕೊಂಡರು ಎಂಬುದು ಸಹ ತಿಳಿದಿಲ್ಲ. ಅವರ ಚಿತ್ರವನ್ನು ಮುದ್ರಿಸಿದಾಗಿನಿಂದ ಅವರು ಅಸಮಾಧಾನಗೊಂಡಿದ್ದಾರೆ ಎನ್ನುವುದು ಸತ್ಯ.

ಪತ್ರಿಕೆಯಲ್ಲಿ ಮುದ್ರಿಸಲಾದ ಫೋಟೋ ಕುರಿತಾದಂತೆ ಲಕ್ಷ್ಮಿ, "ಈ ಚಿತ್ರವನ್ನು ಯಾವಾಗ ಮತ್ತು ಯಾರು ತೆಗೆದುಕೊಂಡಿದ್ದಾರೆಂದು ನನಗೆ ನೆನಪಿಲ್ಲ" ಎಂದು ಹೇಳುತ್ತಾರೆ. ನಾನು ಬೆಳಗ್ಗೆ ನಿದ್ರೆಯಿಂದ ಎಚ್ಚರವಾದಾಗ, ನೆರೆಹೊರೆಯ ಜನರು ನನಗೆ ಪತ್ರಿಕೆಯಲ್ಲಿ ಒಂದು ಚಿತ್ರವನ್ನು ತೋರಿಸಿದರು ಮತ್ತು ಅದು ನೀವೇ ಎಂದು ಹೇಳಿದರು. ನಾನು ಚಿತ್ರವನ್ನು ನೋಡಿದಾಗಿನಿಂದ ಅಸಮಾಧಾನಗೊಂಡಿದ್ದೇನೆ. ನನಗೆ ಏನೂ ಗೊತ್ತಿಲ್ಲ." ಎಂದು ಅವರು ಹೇಳುತ್ತಾರೆ.

"ಗಂಗಾಸಾಗರ ಮೇಳ (ಡಿಸೆಂಬರ್ ಕೊನೆಯ ವಾರದಿಂದ ಜನವರಿ 14 ರವರೆಗೆ ನಡೆಯುತ್ತದೆ) ಬಾಬುಘಾಟ್‌ನಲ್ಲಿ ನಡೆಯಿತು. ಅಲ್ಲಿ ನಾನು ಶೌಚಾಲಯದಲ್ಲಿ ಸ್ವಚ್ಛಗೊಳಿಸುವ ಕೆಲಸವನ್ನು ೧೦ ದಿನಗಳ ಕಾಲ ಮಾಡಿದ್ದೇನೆ. ಈ ಚಿತ್ರವನ್ನು ಅಲ್ಲಿಯೇ ತೆಗೆಯಲಾಗಿದೆ ಎಂದು ನಾನು ಭಾವಿಸುತ್ತೇನೆ. ಆದರೆ ನನಗೆ ಈ ಕುರಿತು ಏನೂ ಗೊತ್ತಿಲ್ಲ. ನಾನು ಪತ್ರಿಕೆ ಮುದ್ರಿಸಿದ ಸ್ಥಳಕ್ಕೆ ಹೋದೆ. ಈ ಫೋಟೋ ಎಲ್ಲಿಂದ ಬಂತು ಎಂದು ಕೇಳಿದೆ. ಈ ವೇಳೆ ಅದು ಸರ್ಕಾರದಿಂದ ಬಂದಿದೆ ಎಂದು ಹೇಳಿದರೆಂದು ಲಕ್ಷ್ಮೀ ಹೇಳುತ್ತಾರೆ.

ನಿಮ್ಮ ಚಿತ್ರವನ್ನು ಅವರೊಂದಿಗೆ ಮುದ್ರಿಸಲಾಗಿದೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ನೀವು ಏನನ್ನಾದರೂ ಹೇಳಲು ಬಯಸುತ್ತೀರಾ? ಎಂದು ಮಾಧ್ಯಮ ತಂಡವು ಲಕ್ಷ್ಮಿಯನ್ನು ಪ್ರಶ್ನಿಸಿದಾಗ, ಆಶ್ಚರ್ಯಚಕಿತರಾದ ಅವರು, "ನಾನು ಅಂತಹ ದೊಡ್ಡ ಮನುಷ್ಯನಿಗೆ ಏನು ಹೇಳಬಲ್ಲೆ? ನಾನು ಅವರೊಂದಿಗೆ ಹೇಗೆ ಮಾತನಾಡಬಲ್ಲೆ? ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ.

ಪ್ರಧಾನಿ ಮೋದಿಯವರನ್ನು ಸಹೋದರ ಎಂದು ಲಕ್ಷ್ಮಿ ಪರಿಗಣಿಸಿದ್ದು, "ವೃದ್ಧಾಪ್ಯದಲ್ಲಿ ನಾನು ಮನೆಯಲ್ಲಿಯೇ ಇರಲು ಮೋದಿಜಿ ನನಗೆ ಮನೆ ಕೊಡಬೇಕೆಂದು ನಾನು ಬಯಸುತ್ತೇನೆ" ಎಂದು ಅವರು ಹೇಳುತ್ತಾರೆ.

ಲಕ್ಷ್ಮಿ ದೇವಿ ವಾಸಿಸುವ ಪ್ರದೇಶ ಉತ್ತರ ಕೋಲ್ಕತ್ತಾದಲ್ಲಿರುವ ಕಾರಣ ಈ ಬಗ್ಗೆ ತಿಳಿಯಲು ʼನ್ಯೂಸ್‌ಲ್ಯಾಂಡ್ರಿʼ ಉತ್ತರ ಕೋಲ್ಕತ್ತಾದ ಬಿಜೆಪಿ ಜಿಲ್ಲಾಧ್ಯಕ್ಷ ಶಿವಾಜಿ ಸಿಂಘಾ ರಾಯ್ ಅವರನ್ನು ಸಂಪರ್ಕಿಸಿತು. ರಾಯ್ ಅವರಿಗೆ ಹಿಂದಿ ಮಾತನಾಡಲು ಸಾಧ್ಯವಾಗುವುದಿಲ್ಲವೆಂದು ಅವರು ತಮ್ಮ ಕಾರ್ಯದರ್ಶಿಯೊಂದಿಗೆ ಮಾತನಾಡಲು ಹೇಳಿದರು. ನಾವು ಇಡೀ ವಿಷಯವನ್ನು ಕಾರ್ಯದರ್ಶಿಗೆ ಹೇಳಿದಾಗ, "ಟಿಕೆಟ್ ಮೇಲಿನ ಗಲಾಟೆ ಇಲ್ಲಿ ನಡೆಯುತ್ತಿದೆ. ಎಲ್ಲರೂ ಶಾಂತವಾಗಿದ್ದಾಗ ನಿಮ್ಮ ಪ್ರಶ್ನೆಗೆ ನಾವು ಉತ್ತರಿಸುತ್ತೇವೆ" ಎಂದು ಹಾರಿಕೆಯ ಉತ್ತರ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

ಪಶ್ಚಿಮ ಬಂಗಾಳದ ಬಿಜೆಪಿಯ ಮಾಧ್ಯಮ ಮುಖ್ಯಸ್ಥ ಸಪ್ತರ್ಶಿ ಚೌಧರಿ ಅವರೊಂದಿಗೆ ಮಾತನಾಡಿದಾಗ ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು.

ಈ ಹಿಂದೆಯೂ ಇದೇ ರೀತಿಯಲ್ಲಿ ಹಲವಾರು ಫೋಟೊಗಳನ್ನು ಪ್ರಕಟಿಸಿ ಬಿಜೆಪಿ ನಗೆಪಾಟಲಿಗೀಡಾಗಿದ್ದು ಮಾತ್ರವಲ್ಲದೇ ಜನರಿಂದ ಆಕ್ರೋಶ ವ್ಯಕ್ತವಾಗಿತ್ತು. ರೈತರು ಸಂತೋಷದಲ್ಲಿದ್ದಾರೆಂದು ಓರ್ವ ನಟನನ್ನು ಬಳಸಿ ಫೋಟೊಶೂಟ್‌ ಮಾಡಿದ್ದು ಇತ್ತೀಚೆಗೆ ಸುದ್ದಿಯಾಗಿತ್ತು.

ಕೃಪೆ: newslaundry.com

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News