ನಮಗೊಂದು ಅವಕಾಶ ಕೊಡಿ, ಬಂಗಾಳಕ್ಕಾಗಿ ಜೀವತ್ಯಾಗ ಮಾಡಲೂ ಸಿದ್ಧ : ನರೇಂದ್ರ ಮೋದಿ

Update: 2021-03-20 16:02 GMT

 ಖರಗಪುರ(ಪ.ಬಂಗಾಳ),ಮಾ.20: ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ವಿರುದ್ಧ ಶನಿವಾರ ಇಲ್ಲಿ ತೀವ್ರ ಟೀಕಾಪ್ರಹಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು,ಬ್ಯಾನರ್ಜಿಯವರ ಸೋದರಳಿಯ ಹಾಗೂ ಸಂಸದ ಅಭಿಷೇಕ್ ರಾಜ್ಯದಲ್ಲಿಯ ಏಕಮೇವ ‘ಏಕ ಗವಾಕ್ಷಿ ’ಯಾಗಿದ್ದು, ಅದನ್ನು ದಾಟದೆ ಯಾವುದೇ ಕೆಲಸವಾಗುವುದಿಲ್ಲ ಎಂದು ಆರೋಪಿಸಿದರು.

ಬ್ಯಾನರ್ಜಿ ಹಫ್ತಾಕೋರರು ಮತ್ತು ಭ್ರಷ್ಟಜನರ ಕೂಟದ ನಾಯಕಿಯಾಗಿದ್ದಾರೆ ಎಂದೂ ಅವರು ಆರೋಪಿಸಿದರು.

ಕಾಂಗ್ರೆಸ್ ಮತ್ತು ಎಡರಂಗ ತಮ್ಮ ಅಧಿಕಾರಾವಧಿಗಳಲ್ಲಿ ರಾಜ್ಯದಲ್ಲಿ ಅಭಿವೃದ್ಧಿಗೆ ಅಡ್ಡಿಯಾಗಿದ್ದವು ಎಂದು ದೂರಿದ ಮೋದಿ,ಶುಕ್ರವಾರ ವಾಟ್ಸ್‌ಆ್ಯಪ್,ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್ 50-55 ನಿಮಿಷಗಳ ಕಾಲ ಸ್ಥಗಿತಗೊಂಡಿದ್ದವು. ಆದರೆ ಬಂಗಾಳದಲ್ಲಿ ಕಳೆದ 50-55 ವರ್ಷಗಳಿಂದಲೂ ಅಭಿವೃದ್ಧಿಯೇ ಸ್ಥಗಿತಗೊಂಡಿದೆ ಎಂದರು. ಚುನಾವಣಾ ಪ್ರಚಾರಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಬ್ಯಾನರ್ಜಿಯವರು ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ತುಷ್ಟೀಕರಣದ ಆಟದಲ್ಲಿ ತೊಡಗಿದ್ದಾರೆಂದು ಆರೋಪಿಸಿದರು. ರಾಜ್ಯದಲ್ಲಿ ಕೈಗಾರಿಕಾ ಘಟಕಗಳು ಮುಚ್ಚುತ್ತಿವೆ. ಕೈಗಾರಿಕೆಗಳಿಗೆ ಶೀಘ್ರ ಅನುಮತಿಗಳು ದೊರೆಯುವಂತಾಗಲು ಏಕ ಗವಾಕ್ಷಿ ವ್ಯವಸ್ಥೆಯನ್ನು ಸ್ಥಾಪಿಸಿರುವುದು ನಿಮಗೆಲ್ಲ ಗೊತ್ತಿದೆ. ಬಂಗಾಳದಲ್ಲಿಯೂ ಏಕ ಗವಾಕ್ಷಿಯಿದೆ. ಅದು ಸೋದರಳಿಯನ ಏಕ ಗವಾಕ್ಷಿ. ಇದನ್ನು ದಾಟದೆ ಇಲ್ಲಿ ಯಾವ ಕೆಲಸವೂ ಆಗುವುದಿಲ್ಲ ಎಂದು ಬ್ಯಾನರ್ಜಿಯವರ ಸೋದರಳಿಯ ಹಾಗೂ ಡೈಮಂಡ್ ಹಾರ್ಬರ್ ಸಂಸದ ಅಭಿಷೇಕ್ ಬ್ಯಾನರ್ಜಿಯವರನ್ನು ಹೆಸರಿಸದೆ ಅವರು ಟೀಕಿಸಿದರು.

 ‘ಕಾಂಗ್ರೆಸ್ ಮತ್ತು ಎಡರಂಗ ರಾಜ್ಯದಲ್ಲಿ ಮಾಡಿರುವ ವಿನಾಶವನ್ನು ನೀವು ನೋಡಿದ್ದೀರಿ. ಟಿಎಂಸಿ ನಿಮ್ಮ ಕನಸುಗಳನ್ನು ನುಚ್ಚುನೂರು ಮಾಡಿದೆ. ಕಳೆದ 70 ವರ್ಷಗಳಲ್ಲಿ ನೀವು ಪ್ರತಿಯೊಬ್ಬರಿಗೂ ಅವಕಾಶಗಳನ್ನು ನೀಡಿದ್ದೀರಿ. ನಮಗೆ ಐದು ವರ್ಷಗಳ ಅವಕಾಶ ನೀಡಿ. 70 ವರ್ಷಗಳ ವಿನಾಶದಿಂದ ಬಂಗಾಳವನ್ನು ನಾವು ಮುಕ್ತಗೊಳಿಸುತ್ತೇವೆ,ನಿಮಗಾಗಿ ನಮ್ಮ ಜೀವಗಳನ್ನು ತ್ಯಾಗಮಾಡುತ್ತೇವೆ’ ಎಂದು ಮತದಾರರನ್ನು ಕೋರಿಕೊಂಡರು. ತನ್ನದು ಹೊರಗಿನ ಪಕ್ಷ ಎಂಬ ಬ್ಯಾನರ್ಜಿ ಟೀಕೆಯನ್ನು ತಿರಸ್ಕರಿಸಿದ ಮೋದಿ,ಬಿಜೆಪಿ ಮಾತ್ರ ಬಂಗಾಳದ ನಿಜವಾದ ಪಕ್ಷವಾಗಿದೆ. ಶ್ಯಾಮಪ್ರಸಾದ ಮುಖರ್ಜಿ ಅವರು ಆಗಿನ ಜನಸಂಘ(ಈಗ ಬಿಜೆಪಿ)ವನ್ನು ಸ್ಥಾಪಿಸಿದ್ದರು. ಅವರು ಬಂಗಾಳದ ಸುಪುತ್ರರಾಗಿದ್ದರು ಎಂದರು. ಆಟ ಶುರುವಾಗಲಿದೆ ಎಂಬ ಬ್ಯಾನರ್ಜಿಯವರ ಘೋಷಣೆಯನ್ನು ಗೇಲಿ ಮಾಡಿದ ಮೋದಿ,ದೀದಿಯ ಆಟ ಮುಗಿಯಲಿದೆ ಮತ್ತು ಅಭಿವೃದ್ಧಿ ಪರ್ವ ಪ್ರಾರಂಭವಾಗಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News