ಮುಂದುವರಿದ ಅಧ್ಯಾಯ: ಮೊದಲ ಪುಟಕೂ ಕೊನೆಯ ಪುಟಕೂ ನಡುವೆ ಇನಿತೇ ಅಂತರ!

Update: 2021-03-20 19:30 GMT

ನನಗೆ ಕತೆ ಓದುವುದಕ್ಕಿಂತ ಕೇಳುವುದಕ್ಕೆ ಇಷ್ಟ ಅನ್ನುತ್ತಾನೆ ನಾಯಕ. ಚಿತ್ರದಲ್ಲಿ ನಾಯಕ ಪೊಲೀಸ್ ಅಧಿಕಾರಿ. ತಾನು ತನಿಖೆ ನಡೆಸುತ್ತಿರುವ ಅಪರಾಧಿ ಕೃತ್ಯದ ಕುರಿತಾದ ವಿವರಣೆಯನ್ನು ಕತೆ ಎನ್ನುವಂತೆ ಕೇಳುವುದೇ ನೈಜತೆಗೆ ದೂರವಾದ ಮಾತು. ಈ ತನಿಖೆಯನ್ನು ಚಿತ್ರದ ನಾಯಕನಿಗೆ ಒಪ್ಪಿಸುವ ಗೃಹಮಂತ್ರಿ ಕೂಡ, ಇಂತಹ ಒಳ್ಳೆಯ ಥ್ರಿಲ್ಲಿಂಗ್ ಸ್ಟೋರಿ ಸಿಗುತ್ತೆ ಅಂದರೆ ಅವನು ಬಂದೇ ಬರುತ್ತಾನೆ ಅಂತಾರೆ! ಅಲ್ಲಿಗೆ ನಿರ್ದೇಶಕರು ಇದನ್ನೊಂದು ನೈಜ ಘಟನೆ ಮಾದರಿಯ ಚಿತ್ರಣವಾಗಿ ತೋರಿಸುವ ಬದಲು ಒಂದು ಕತೆಯ ವೀಡಿಯೊ ನಿರೂಪಣೆಗಷ್ಟೇ ಸಿನೆಮಾ ಮಾಡಿದ್ದಾರೆ ಎನ್ನುವುದು ಸಾಬೀತಾಗುತ್ತದೆ.

ಸಿನೆಮಾ ಆರಂಭವಾದ ಅರ್ಧ ಗಂಟೆಯ ಬಳಿಕ ಚಿತ್ರದ ನಾಯಕ ಪೊಲೀಸ್ ಅಧಿಕಾರಿ ‘ಬಾಲ’ನ ಆಗಮನವಾಗುತ್ತದೆ. ಇನ್ನು ಅರ್ಧ ಗಂಟೆಯ ಬಳಿಕ ಅದುವರೆಗೆ ನಡೆದ ಒಟ್ಟು ಕತೆಯ ಗೋಜಲುಗಳನ್ನು ನಿವಾರಿಸುವ ರೀತಿಯಲ್ಲಿ ಬಾಲ ವಿವರಿಸುತ್ತಾರೆ. ಅಂದರೆ ಮಧ್ಯಂತರದ ಹೊತ್ತಿಗೆ ಸಿನೆಮಾ ನೋಡಲು ಶುರು ಮಾಡಿದರೆ ಗೋಜಲುಗಳಿಲ್ಲದೆ ಸಿನೆಮಾ ನೋಡಿಕೊಂಡು ಹೋಗಬಹುದು ಎಂದಾಯಿತು. ಆದರೆ ವಿರಾಮ ಸಮಯ ದಾಟಿ ಬಳಿಕ ಬಂದು ನೋಡಿದರೆ ಮತ್ತಷ್ಟು ಗೋಜಲುಗಳು ಹಾಗೂ ಅಂತ್ಯದಲ್ಲಿ ಅವುಗಳಿಗೂ ಆದಿತ್ಯ ನೀಡುವ ವಿವರವಾದ ಮಾಹಿತಿಯೊಂದಿಗೆ ಸಿನೆಮಾ ಕೊನೆಯಾಗುತ್ತದೆ. ಒಟ್ಟಿನಲ್ಲಿ ಸಿನೆಮಾ ದೃಶ್ಯ ರೂಪದ ನಿರೂಪಣೆಗಿಂತ ಕತೆ ಹೇಳುವ ರೀತಿಯಲ್ಲೇ ಪರಿಪೂರ್ಣತೆ ಮೂಡಿಸುವಂತಿದೆ. ಬಹುಶಃ ಇದಕ್ಕೆ ನಿರ್ದೇಶಕರು ಒಬ್ಬ ಕತೆಗಾರರಾಗಿ, ಬರಹಗಾರರಾಗಿದ್ದು ಸಿನೆಮಾದಲ್ಲಿ ಪ್ರಥಮ ಪ್ರಯತ್ನ ನಡೆಸಿರುವುದೇ ಕಾರಣ ಇರಬಹುದು.

ಸಾಮಾನ್ಯವಾಗಿ ಪತ್ತೇದಾರಿ ಕತೆಯೊಂದು ನಮಗೆ ಇಷ್ಟವಾಗಬೇಕಾದರೆ ಮೊದಲು ಆ ಪಾತ್ರಗಳ ಜೊತೆಗೆ ನಮ್ಮ ಪ್ರಯಾಣ ಇರಬೇಕು ಅಥವಾ ಸಿನೆಮಾದಲ್ಲಾದರೆ ಆ ಪಾತ್ರಧಾರಿಗಳ ಬಗ್ಗೆಯಾದರೂ ನಮಗೆ ಅಂತಹ ಆಸಕ್ತಿ ಇರಬೇಕು. ಆದರೆ ಚಿತ್ರದಲ್ಲಿ ಕತೆಯ ಆರಂಭವನ್ನೇ ಗೋಜಲುಗೊಳಿಸಿರುವುದು ಮಾತ್ರವಲ್ಲ, ಪಾತ್ರಗಳಾಗಿ ಯಾವ ಜನಪ್ರಿಯ ತಾರೆಗಳು ಕೂಡ ಕಾಣಿಸುವುದಿಲ್ಲ. ಹಾಗಾಗಿ ಸಾಮಾನ್ಯ ಪ್ರೇಕ್ಷಕನ ದೃಷ್ಟಿಯಲ್ಲಿ ಪತ್ತೆಯಾಗಲಿರುವ ಆರೋಪಿಗಳ ಬಗ್ಗೆ ಯಾವ ಕುತೂಹಲವೂ ಉಳಿದಿರುವುದಿಲ್ಲ. ಪೊಲೀಸ್ ಅಧಿಕಾರಿ ಬಾಲನಾಗಿ ಆದಿತ್ಯ ನಟಿಸಿದ್ದಾರೆ. ಪೊಲೀಸ್‌ಗೆ ಹೊಂದುವ ದೇಹ ಪ್ರಕೃತಿಯನ್ನು ಹೊರತು ಪಡಿಸಿ ಯಾವ ರೀತಿಯಿಂದಲೂ ಅವರು ಪಾತ್ರಕ್ಕೆ ಹೊಂದಿಕೊಂಡಂತೆ ಕಾಣಿಸುವುದಿಲ್ಲ.

ಚಿತ್ರದಲ್ಲಿ ಉಳಿದ ಪ್ರಮುಖ ಪಾತ್ರಗಳಾಗಿ ಅಜಯ್ ರಾಜ್, ಆಶಿಕಾ ಸೋಮಶೇಖರ್ ನಟಿಸಿದ್ದಾರೆ. ಚಿಂತನ್ ಎನ್ನುವ ಗಾಯಕನಾಗಿ ಅಜಯ್ ರಾಜ್ ನಟಿಸಿದ್ದರೆ, ಚಿಂತನ್ ಪ್ರೇಯಸಿಯಾಗಿ ಪತ್ರಕರ್ತೆ ಸಾಕ್ಷಿಯ ಪಾತ್ರದಲ್ಲಿ ಆಶಿಕಾ ಇದ್ದಾರೆ. ಗೃಹಮಂತ್ರಿಯಾಗಿ ಮುಖ್ಯಮಂತ್ರಿ ಚಂದ್ರು, ಪೊಲೀಸ್ ಅಧಿಕಾರಿಯಾಗಿ ಜೈಜಗದೀಶ್ ಅವರದು ಅತಿಥಿ ಪಾತ್ರ ಎಂದು ಹೇಳಬಹುದು. ತಾಂತ್ರಿಕ ವಿಚಾರಕ್ಕೆ ಬಂದರೆ ಅನೂಪ್ ಸೀಳಿನ್ ಅವರು ನೀಡಿರುವ ಹಿನ್ನೆಲೆ ಸಂಗೀತವೊಂದೇ ಆಕರ್ಷಕ ಎನ್ನಬಹುದು. ಉಳಿದಂತೆ ಪತ್ತೇದಾರಿ ಕಾದಂಬರಿ ಪ್ರಿಯರಿಗೆ ಇಷ್ಟವಾಗುವಂತಹ ಚಿತ್ರ ಇದು ಎನ್ನಬಹುದು.

ತಾರಾಗಣ: ಆದಿತ್ಯ, ಅಜಯ್ ರಾಜ್
ನಿರ್ದೇಶನ: ಬಾಲು ಚಂದ್ರಶೇಖರ್
ನಿರ್ಮಾಣ: ಕಣಜ ಎಂಟರ್‌ಪ್ರೈಸಸ್

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News