ಕೇರಳ: ಬಿಜೆಪಿ ಅಧಿಕಾರಕ್ಕೆ ಬಂದರೆ ದೇವಸ್ವಂ ಮಂಡಳಿಗಳ ಪುನರ್ ರಚನೆ, ಲವ್ ಜಿಹಾದ್ ವಿರುದ್ಧ ಕಾನೂನು ಜಾರಿ

Update: 2021-03-22 09:03 GMT

ತಿರುವನಂತಪುರಂ: ಬಿಜೆಪಿ ನೇತೃತ್ವದ ಎನ್‍ಡಿಎ ಕೇರಳದಲ್ಲಿ ಅಧಿಕಾರಕ್ಕೆ ಬಂದರೆ ದೇವಳಗಳ ಆಡಳಿತ ನಿರ್ವಹಿಸುವ ಉದ್ದೇಶದ ದೇವಸ್ವಂ ಮಂಡಳಿಗಳನ್ನು ಪುನರಚಿಸಲಿದೆ ಹಾಗೂ ಲವ್ ಜಿಹಾದ್ ತಡೆಯಲು ಕಾನೂನು ಜಾರಿಗೆ ತರಲಿದೆ ಎಂದು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.

ಕೇರಳದ ಎಲ್‍ಡಿಎಫ್ ಸರಕಾರದ ವಿರುದ್ಧದ 'ಚಾರ್ಜ್ ಶೀಟ್' ಬಿಡುಗಡೆಗೊಳಿಸಲು ತಿರುವನಂತಪುರಂಗೆ ಅವರು ಆಗಮಿಸಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದರೆ ತಾನು ನೀಡಿರುವ ಎಲ್ಲಾ ಆಶ್ವಾಸನೆಗಳನ್ನು   ಐದು ವರ್ಷಗಳೊಳಗೆ ಈಡೇರಿಸಲಿದೆ. ಕೇಂದ್ರದಲ್ಲಿಯೂ ಬಿಜೆಪಿ ಸರಕಾರವಿರುವುದರಿಂದ  ರಾಜ್ಯದಲ್ಲೂ ಬಿಜೆಪಿ ಸರಕಾರವನ್ನು ಆರಿಸಲು ಇಲ್ಲಿನ ಜನತೆಗೆ ಸುವರ್ಣಾವಕಾಶವಿದೆ ಎಂದು ಅವರು ಹೇಳಿದರು.

ರಾಜ್ಯದ ಎಲ್‍ಡಿಎಫ್ ಸರಕಾರದ ವಿರುದ್ಧ ಎನ್‍ಡಿಎ ಬಿಡುಗಡೆಗೊಳಿಸಿರುವ ಚಾರ್ಜ್ ಶೀಟ್‍ನಲ್ಲಿ ಹಲವು ಆರೋಪಗಳನ್ನು ಹೊರಿಸಲಾಗಿದೆ. ಶಬರಿಮಲೆ ವಿಚಾರ ಹಾಗೂ ಕೋವಿಡ್ ಸಾಂಕ್ರಾಮಿಕವನ್ನು ರಾಜ್ಯ ಸರಕಾರ ನಿಭಾಯಿಸಿದ ರೀತಿಯನ್ನು ಟೀಕಿಸಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸರ್ವಾಧಿಕಾರಿ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ, ರಾಜ್ಯದಲ್ಲಿ ರಾಜಕೀಯ ಕೊಲೆಗಳು ನಡೆಯುತ್ತಿವೆ, ಕಾನೂನು ಸುವ್ಯವಸ್ಥೆ ಮುರಿದು ಬಿದ್ದಿದೆ, ಮಹಿಳೆಯರು ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ, ಆರ್ಥಿಕ ಪ್ರಗತಿಯಾಗಿಲ್ಲ ಹಾಗೂ ಕೃಷಿ ಕ್ಷೇತ್ರ ಮತ್ತು ಸಾರ್ವಜನಿಕ ರಂಗದ  ಕ್ಷೇತ್ರಗಳು ಪ್ರಗತಿ ಹೊಂದಿಲ್ಲ ಎಂದು ಚಾರ್ಜ್ ಶೀಟ್‍ನಲ್ಲಿ ಆರೋಪಿಸಲಾಗಿದೆ.

ಕೇರಳದ ಜನ ವಿರೋಧಿ ಎಲ್‍ಡಿಎಫ್ ಸರಕಾರವನ್ನು ತಿರಸ್ಕರಿಸಿ 'ನವ ಕೇರಳ' ನಿರ್ಮಾಣಕ್ಕಾಗಿ ಬಿಜೆಪಿಯನ್ನು ಬೆಂಬಲಿಸಬೇಕೆಂದೂ ಚಾರ್ಜ್ ಶೀಟ್‍ನಲ್ಲಿ ಜನರಿಗೆ ಕರೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News