ಅನಿಲ್ ದೇಶ್ ಮುಖ್ ವಿರುದ್ಧ ತನಿಖೆಗೆ ಕೋರಿ ಸುಪ್ರೀಂ ಮೆಟ್ಟಿಲೇರಿದ ಮಾಜಿ ಮುಂಬೈ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್
ಮುಂಬೈ,ಮಾ.22: ಮಹಾರಾಷ್ಟ್ರದ ಗೃಹಸಚಿವ ಅನಿಲ್ ದೇಶಮುಖ್ ವಿರುದ್ಧ ತಾನು ಮಾಡಿರುವ ಭ್ರಷ್ಟಾಚಾರದ ಆರೋಪಗಳ ಕುರಿತು ಸಿಬಿಐ ತನಿಖೆಯನ್ನು ಕೋರಿ ಮಾಜಿ ಮುಂಬೈ ಪೊಲೀಸ್ ಆಯುಕ್ತ ಪರಮಬೀರ್ ಸಿಂಗ್ ಅವರು ಸೋಮವಾರ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದಾರೆ.
ತನ್ನ ವಿರುದ್ಧ ಮಹಾರಾಷ್ಟ್ರ ಸರಕಾರದ ಬಲವಂತದ ಕ್ರಮಗಳ ವಿರುದ್ಧ ರಕ್ಷಣೆಯನ್ನು ಕೋರಿರುವ ಸಿಂಗ್,ತನ್ನನ್ನು ಗೃಹರಕ್ಷಕ ದಳಕ್ಕೆ ವರ್ಗಾಯಿಸಿರುವ ರಾಜ್ಯ ಸರಕಾರದ ಮಾ.17ರ ಆದೇಶವನ್ನೂ ಪ್ರಶ್ನಿಸಿದ್ದಾರೆ.
ದೇಶಮುಖ ಅವರ ವಿವಿಧ ಭ್ರಷ್ಟಾಚಾರಗಳ ಬಗ್ಗೆ ಸಿಬಿಐ ತನಿಖೆಗೆ ಕೋರಿರುವ ಸಿಂಗ್,ತನಿಖೆಯು ನಿಷ್ಪಕ್ಷ ಮತ್ತು ನ್ಯಾಯಪರವಾಗಿರಬೇಕು ಎಂದು ತನ್ನ ಅರ್ಜಿಯಲ್ಲಿ ಹೇಳಿದ್ದಾರೆ.
ರಾಜ್ಯದಲ್ಲಿ ವಿಚಾರಣೆಗಳನ್ನು ನಡೆಸಲು ಸಿಬಿಐಗೆ ನೀಡಿದ್ದ ಸಾರ್ವತ್ರಿಕ ಒಪ್ಪಿಗೆಯನ್ನು ಮಹಾರಾಷ್ಟ್ರ ಸರಕಾರವು ಹಿಂದೆಗೆದುಕೊಂಡಿರುವುದರಿಂದ ಸಂವಿಧಾನದ ವಿಧಿ 32ರಡಿ ತಾನು ನೇರವಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದಾಗಿ ಸಿಂಗ್ ತಿಳಿಸಿದ್ದಾರೆ.
ಹಿರಿಯ ನ್ಯಾಯವಾದಿ ಮುಕುಲ್ ರೋಹಟ್ಗಿ ಅವರು ಪ್ರಕರಣದಲ್ಲಿ ಸಿಂಗ್ ಅವರನ್ನು ಪ್ರತಿನಿಧಿಸಲಿದ್ದಾರೆ.
ಮಾ.20ರಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದಿದ್ದ ಪತ್ರದಲ್ಲಿ ಸಿಂಗ್ ಅವರು,ದೇಶಮುಖ ಮುಂಬೈನ ಬಾರ್‌ಗಳು,ರೆಸ್ಟೋರಂಟ್‌ಗಳು ಮತ್ತು ಹುಕ್ಕಾ ಪಾರ್ಲರ್‌ಗಳಿಂದ ಹಫ್ತಾ ವಸೂಲಿಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದರು.
ಕೈಗಾರಿಕೋದ್ಯಮಿ ಮುಕೇಶ್ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕಗಳಿದ್ದ ವಾಹನ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಕ್ರೈಂ ಬ್ರಾಂಚ್ ಅಧಿಕಾರಿ ಸಚಿನ್ ವಝೆ ಅಕ್ರಮ ಮಾರ್ಗಗಳ ಮೂಲಕ ಪ್ರತಿ ತಿಂಗಳು 100 ಕೋ.ರೂ.ಗಳನ್ನು ಸಂಗ್ರಹಿಸುವಂತೆ ಗೃಹಸಚಿವರು ಸೂಚಿಸಿದ್ದಾರೆ ಎಂದು ತನಗೆ ತಿಳಿಸಿದ್ದಾಗಿ ಸಿಂಗ್ ಪತ್ರದಲ್ಲಿ ಬರೆದಿದ್ದರು.
ಗೃಹಸಚಿವರು ವಿವಿಧ ಪ್ರಕರಣಗಳಲ್ಲಿ ಪೊಲೀಸ್ ತನಿಖೆಯಲ್ಲಿ ಆಗಾಗ್ಗೆ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದೂ ಅವರು ಆರೋಪಿಸಿದ್ದರು.