ಠಾಣೆಯ ಸಿಸಿ ಕ್ಯಾಮರಾ ನಿಷ್ಕ್ರಿಯವಾಗಿತ್ತೆಂದು ನ್ಯಾಯಾಲಯಕ್ಕೆ ದಿಲ್ಲಿ ಪೊಲೀಸರ ಅಫಿಡವಿಟ್

Update: 2021-03-23 15:16 GMT
ಫೈಲ್ ಚಿತ್ರ 

ಹೊಸದಿಲ್ಲಿ,ಮಾ.21: 2020ರ ಫೆಬ್ರವರಿಯಲ್ಲಿ ನಡೆದ ಈಶಾನ್ಯ ದಿಲ್ಲಿ ಗಲಭೆಯ ಸಂದರ್ಭ, ಪೊಲೀಸ್ ಅಧಿಕಾರಿಗಳಿಂದ ಥಳಿಸಲ್ಪಟ್ಟ ಬಳಿಕ, ಆತನನ್ನು ಬಂಧಿಸಿಡಲಾಗಿದ್ದ ಪೊಲೀಸ್‌ಠಾಣೆಯಲ್ಲಿ ಸಿಸಿಟಿವಿ ಕ್ಯಾಮರಾಗಳು ತಾಂತ್ರಿಕಲೋಪದ ಕಾರಣದಿಂದ ಕಾರ್ಯ ನಿರ್ವಹಿಸುತ್ತಿರಲಿಲ್ಲವೆಂದು ದಿಲ್ಲಿ ಪೊಲೀಸರು ಮಂಗಳವಾರ ಹೈಕೋರ್ಟ್‌ಗೆ ತಿಳಿಸಿದ್ದಾರೆ. ದಿಲ್ಲಿ ಗಲಭೆ ಸಂದರ್ಭ ಫೆಬ್ರವರಿ 24ರಂದು ದುಷ್ಕರ್ಮಿಗಳ ದಾಳಿಯಿಂದ ಗಾಯಗೊಂಡು ಬಿದ್ದಿದ್ದ 23 ವರ್ಷ ವಯಸ್ಸಿನ ಫೈಝಾನ್ ಹಾಗೂ ಇನ್ನೋರ್ವ ಮುಸ್ಲಿಂ ವ್ಯಕ್ತಿಯನ್ನು ಪೊಲೀಸರು ಬಲವಂತದಿಂದ ರಾಷ್ಟ್ರಗೀತೆ ಹಾಡಿಸಿದ ವಿಡಿಯೋ ದೃಶ್ಯಗಳು ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಫೆಬ್ರವರಿ 26ರಂದು ಜೈಲಿನಿಂದ ಬಿಡುಗಡೆಗೊಂಡ ಕೆಲವೇ ತಾಸುಗಳಲ್ಲಿ ಫೈಝಾನ್ ಕೊನೆಯುಸಿರೆಳೆದಿದ್ದ. ತನ್ನ ಪುತ್ರನಿಗೆ ಪೊಲೀಸರು ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸಿದ್ದರಿಂದ ಆತ ಸಾವನ್ನಪ್ಪಿದ್ದಾನೆಂದು ಫೈಝಾನ್ ರ ತಾಯಿ ಆಪಾದಿಸಿದ್ದರು.

 ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಯೋಗೇಶ್ ಖನ್ನಾ ಅವರಿಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಫೈಝಾನ್ ಹಾಗೂ ಆತನ ಸಹವರ್ತಿಯನ್ನು ಇರಿಸಲಾಗಿದ್ದ ಜ್ಯೋತಿನಗರ ಪೊಲೀಸ್ ಠಾಣೆಯಲ್ಲಿ ತಾಂತ್ರಿಕ ಕಾರಣಗಳಿಂದಾಗಿ ಸಿಸಿಟಿವಿ ಕ್ಯಾಮರಾಗಳು ಕಾರ್ಯನಿರ್ವಹಿಸುತ್ತಿರಲಿಲ್ಲವೆಂದು ತಿಳಿಸಿದರು. ಸಿಸಿ ಕ್ಯಾಮರಾಗಳನ್ನು ತಿರುಚಲಾಗಿಲ್ಲವೆಂಬುದನ್ನು ಅವುಗಳ ರಿಪೇರಿಗಾಗಿ ಆಗಮಿಸಿದ್ದ ತಂತ್ರಜ್ಞ ಕೂಡಾ ಗಮನಿಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ತನ್ನ ಪುತ್ರನ ಸಾವಿನ ಬಗ್ಗೆ ಸಿಟ್ ತನಿಖೆಗೆ ಆಗ್ರಹಿಸಿ ಫೈಝಾನ್ ತಾಯಿ ನ್ಯಾಯಾಲಯದ ಮೆಟ್ಟಲೇರಿದ್ದರು. ಪೊಲೀಸ್ ಠಾಣೆಯಲ್ಲಿ ಫೈಝಾನ್‌ನನ್ನು ಅಕ್ರಮವಾಗಿ ಬಂಧಿಸಿಡಲಾಗಿತ್ತು ಹಾಗೂ ಆತನ ಪರಿಸ್ಥಿತಿ ತೀರಾ ಚಿಂತಾಜನಕಗೊಂಡ ತನಕವೂ ವೈದ್ಯಕೀಯ ಸೌಲಭ್ಯವನ್ನು ನಿರಾಕರಿಸಲಾಗಿತ್ತು ಎಂದು ಆಕೆ ಅರ್ಜಿಯಲ್ಲಿ ಆಪಾದಿಸಿದ್ದರು.

 ಫೈಝಾನ್ ಸಾವಿಗೀಡಾದ ಕೆಲವೇ ತಾಸುಗಳಿಗೆ ಮುನ್ನ ಆತನನ್ನು ಜೈಲಿನಿಂದ ಬಿಡುಗಡೆಗೊಳಿಸಿದ ಮಾತ್ರಕ್ಕೆ ಆತನನ್ನು ಕೊಲೆ ಮಾಡಿದ ಆರೋಪದಿಂದ ಪೊಲೀಸರು ಮುಕ್ತರಾಗಲು ಸಾಧ್ಯವಿಲ್ಲವೆಂದು ಆಕೆ ಪ್ರತಿಪಾದಿಸಿದ್ದರು.

ಕಳೆದ ಸಲದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು, ಫೈಝಾನ್ ಬಂಧನದ ಸಂದರ್ಭದಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಯ ಸಿಸಿಟಿವಿ ಕ್ಯಾಮರಾಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದವೇ ಎಂಬ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ದಿಲ್ಲಿ ಪೊಲೀಸರಿಗೆ ತಿಳಿಸಿತ್ತು. ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಕೂಡಾ ಸಲ್ಲಿಸುವಂತೆಯೂ ಅದು ತಾಕೀತು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News