ರಾಷ್ಟ್ರ ಧ್ವಜವಿದ್ದ ಕೇಕ್ ಕತ್ತರಿಸುವುದು ದೇಶಭಕ್ತಿಯಿಲ್ಲದ ಕೃತ್ಯವಲ್ಲ: ಮದ್ರಾಸ್ ಹೈಕೋರ್ಟ್

Update: 2021-03-23 15:47 GMT

ಚೆನ್ನೈ, ಮಾ.23: ತ್ರಿವರ್ಣಧ್ವಜ ಮತ್ತು ಅಶೋಕ ಚಕ್ರದ ಪ್ರತಿಕೃತಿ ಇರಿಸಿದ್ದ ಕೇಕ್ ಕತ್ತರಿಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಮದ್ರಾಸ್ ಹೈಕೋರ್ಟ್ ಇದು ದೇಶಭಕ್ತಿಯಿಲ್ಲದ ಕೆಲಸ ಮತ್ತು ರಾಷ್ಟೀಯ ಗೌರವಕ್ಕೆ ಮಾಡಿರುವ ಅಪಮಾನ ಎಂಬ ವಾದವನ್ನು ತಳ್ಳಿಹಾಕಿದೆ.

ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ರಾಷ್ಟ್ರೀಯತೆ ಅತ್ಯಂತ ಮಹತ್ವದ್ದು ಎಂಬುದರಲ್ಲಿ ಸಂಶಯವಿಲ್ಲ. ಆದರೆ ಅತಿಯಾದ ಹಾಗೂ ಅತಿರೇಕದ ರಾಷ್ಟ್ರೀಯತೆ ನಮ್ಮ ದೇಶದ ಗತವೈಭವಕ್ಕೆ ವಿರುದ್ಧವಾಗಿದೆ ಎಂದು ಹೈಕೋರ್ಟ್ ಹೇಳಿದೆ.

ಕೊಯಂಬತ್ತೂರಿನಲ್ಲಿ 2013ರಲ್ಲಿ ಕ್ರಿಸ್‌ಮಸ್ ಸಂದರ್ಭ ನಡೆದಿದ್ದ ಔತಣಕೂಟವೊಂದರಲ್ಲಿ ಭಾರತದ ಭೂಪಟ ಹಾಗು ಧ್ವಜವಿದ್ದ ಬೃಹತ್ ಕೇಕ್ ಅನ್ನು ಕತ್ತರಿಸಿ 2,500 ಅತಿಥಿಗಳು ತಿಂದಿದ್ದರು. ಕೊಯಂಬತ್ತೂರು ಜಿಲ್ಲಾಧಿಕಾರಿ, ಪೊಲೀಸ್ ಉಪ ಆಯುಕ್ತರು, ಹಲವು ಧಾರ್ಮಿಕ ಮುಖಂಡರು, ಸಂಘಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಆದರೆ ತ್ರಿವರ್ಣ ಧ್ವಜವಿದ್ದ ಕೇಕ್ ಕತ್ತರಿಸಿರುವುದು ‘1971ರ ರಾಷ್ಟ್ರಗೌರವಕ್ಕೆ ಅಪಮಾನ ತಡೆ ಕಾಯ್ದೆಯ’ ಸೆಕ್ಷನ್ 2ರಡಿ ಅಪರಾಧವಾಗಿದೆ ಎಂದು ಹಿಂದು ಪಬ್ಲಿಕ್ ಪಾರ್ಟಿಯ ಡಿ ಸೆಂಥಿಲ್‌ಕುಮಾರ್ ದೂರು ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿ ವಿಚಾರಣೆ ಆರಂಭಿಸಲಾಗಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿಯನ್ನು ಸೋಮವಾರ ವಿಚಾರಣೆಗೆತ್ತಿಕೊಂಡ ನ್ಯಾಯಾಲಯ, ಕ್ರಿಮಿನಲ್ ಪ್ರಕರಣ ದಾಖಲಿಸುವಲ್ಲಿ ನ್ಯಾಯಾಧೀಶರು ಅನುಸರಿಸಿದ ಕಾರ್ಯವಿಧಾನ ಸ್ಪಷ್ಟವಾಗಿ ಕಾನೂನು ಬಾಹಿರವಾಗಿದೆ ಎಂದು ಹೇಳಿದೆ.

ದೇಶಭಕ್ತಿಯನ್ನು ದೈಹಿಕ ಕ್ರಿಯೆಯಿಂದ ನಿರ್ಧರಿಸಲಾಗದು, ಬದಲಾಗಿ ಕೃತ್ಯದ ಹಿಂದಿನ ಉದ್ದೇಶಕ್ಕೆ ಸಂಬಂಧಿಸಿದ್ದಾಗಿದೆ ಎಂದು ನ್ಯಾಯಮೂರ್ತಿ ವೆಂಕಟೇಶ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ, ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅತಿಥಿಗಳು ಕೇಕ್ ಕತ್ತರಿಸುವ ಮೂಲಕ ದೇಶದ ಹೆಮ್ಮೆಗೆ ಕುಂದುಂಟು ಮಾಡಲು ಪ್ರಯತ್ನಿಸಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಈ ಮಹಾನ್ ದೇಶದ ಪ್ರಜೆಗಳೆಂಬ ಹೆಮ್ಮೆ ಅವರಲ್ಲಿದೆಯೇ ಅಥವಾ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿದ ಮಾತ್ರಕ್ಕೆ ಭಾರತದ ಗೌರವಕ್ಕೆ ಧಕ್ಕೆಯಾಗಿದೆಯೇ ಎಂಬ ಎರಡು ಪ್ರಶ್ನೆ ಇಲ್ಲಿ ಮೂಡುತ್ತದೆ ಮತ್ತು ಇದಕ್ಕೆ ಉತ್ತರ ಮೊದಲಿನ ಪ್ರಶ್ನೆಯೇ ಆಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

 “ಧ್ವಜ ಹಾರಿಸುವುದು ಮಾತ್ರ ದೇಶಾಭಿಮಾನವಲ್ಲ”

ರಾಷ್ಟ್ರಭಕ್ತಿ ಎಂಬುದು ಅತಿರೇಕಕ್ಕೆ ಹೋಗಬಾರದು. ಧ್ವಜ ಹಾರಿಸಿದವ ಅಥವಾ ತನ್ನ ಬಟ್ಟೆಯ ಮೇಲೆ ರಾಷ್ಟ್ರಧ್ವಜದ ಚಿತ್ರ ಬರೆದುಕೊಂಡು ರಾಷ್ಟ್ರೀಯ ಗೌರವವನ್ನು ಪ್ರದರ್ಶಿಸುವುದು ಮಾತ್ರ ದೇಶಾಭಿಮಾನವಲ್ಲ. ಉತ್ತಮ ಆಡಳಿತವನ್ನು ಸಮರ್ಥಿಸಿಕೊಳ್ಳುವುದೂ ದೇಶಭಕ್ತಿಯಾಗಿದೆ. ರಾಷ್ಟ್ರೀಯ ಹೆಮ್ಮೆಯ ಸಂಕೇತವು ದೇಶಭಕ್ತಿಗೆ ಸಮಾನಾರ್ಥಕವಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News