ಶ್ರೇಯಸ್ ಅಯ್ಯರ್ ಗೆ ಭುಜನೋವು, ಐಪಿಎಲ್ ನಲ್ಲಿ ಭಾಗವಹಿಸುವುದು ಅನುಮಾನ

Update: 2021-03-23 16:15 GMT

ಪುಣೆ: ಭಾರತದ ಬ್ಯಾಟ್ಸ್ ಮನ್ ಶ್ರೇಯಸ್ ಅಯ್ಯರ್ ಅವರು ಇಂಗ್ಲೆಂಡ್ ವಿರುದ್ಧ ಮಂಗಳವಾರ ಇಲ್ಲಿ ನಡೆದ ಮೊದಲ ಏಕದಿನ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದಾಗ ಅವರ ಎಡ ಭುಜಕ್ಕೆ ಗಂಭೀರ ಗಾಯವಾಗಿದೆ. ಹೀಗಾಗಿ ಅವರು ಎಪ್ರಿಲ್ 9ರಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸುವ ಕುರಿತು ಸಂಶಯ ಎದ್ದಿದೆ.

ಇಂಗ್ಲೆಂಡ್ ಇನಿಂಗ್ಸ್ ನ 8ನೇ ಓವರ್ ನಲ್ಲಿ ಘಟನೆ ನಡೆದಿದ್ದು, ವೇಗದ ಬೌಲರ್ ಶಾರ್ದೂಲ್ ಠಾಕೂರ್ ಬೌಲಿಂಗ್ ನಲ್ಲಿ ಜಾನಿ ಬೈರ್ ಸ್ಟೋವ್ ಹೊಡೆದ ಚೆಂಡನ್ನು ತಡೆಯುವ ಯತ್ನದಲ್ಲಿ ಮೇಲಕ್ಕೆ ಜಿಗಿದಾಗ ಭುಜಕ್ಕೆ ಗಂಭೀರ ಗಾಯವಾಗಿದೆ. 26ರ ಹರೆಯದ ಅಯ್ಯರ್ ಸರಣಿಯ ಉಳಿದೆರಡು ಪಂದ್ಯಗಳಲ್ಲಿ ಆಡುವ ಸಾಧ್ಯತೆ ಇಲ್ಲ.

ಶ್ರೇಯಸ್ ಅಯ್ಯರ್ ಗೆ 8ನೇ ಓವರ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಅವರ ಎಡ ಭುಜಕ್ಕೆ ಗಾಯವಾಗಿದ್ದು, ಹೆಚ್ಚಿನ ಸ್ಕ್ಯಾನಿಂಗ್ ಗೆ ಅವರನ್ನು ಕರೆದೊಯ್ಯಲಾಗಿದೆ. ಅವರು ಪಂದ್ಯದ ಉಳಿದ ಭಾಗದಲ್ಲಿ ಆಡುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ.

ಶ್ರೇಯಸ್ ಗಾಯಗೊಂಡು ಮೈದಾನವನ್ನು ತೊರೆಯುವಾಗ ವಿಪರೀತ ಭುಜನೋವು ಎದುರಿಸುತ್ತಿರುವುದು ಕಂಡುಬಂತು. ಹೀಗಾಗಿ ಅವರು ಮುಂಬರುವ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವುದು ಅನುಮಾನ.

ಕಳೆದ ಆವೃತ್ತಿಯ ಐಪಿಎಲ್ ನಲ್ಲಿ ಅಯ್ಯರ್ ಅವರು ಡೆಲ್ಲಿ ತಂಡವನ್ನು ಫೈನಲ್ ತನಕ ಮುನ್ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News