×
Ad

ಮಾನವ ಮಲ ಹೊರುವ ಪದ್ಧತಿ ದೇಶಕ್ಕೆ ಅವಮಾನ: ಜಯಾ ಬಚ್ಚನ್

Update: 2021-03-23 21:55 IST

ಹೊಸದಿಲ್ಲಿ, ಮಾ. 23: ಮಾನವ ಮಲ ಹೊರುವ ಪದ್ಧತಿ ಇನ್ನು ಕೂಡ ಮುಂದುವರಿದಿರುವುದು ದೇಶಕ್ಕೆ ಅವಮಾನ. ಈ ಸಮಸ್ಯೆಯನ್ನು ಕೇಂದ್ರ ಸರಕಾರ ಪರಿಹರಿಸುವ ಅಗತ್ಯ ಇದೆ ಎಂದು ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಅವರು ಮಂಗಳವಾರ ಹೇಳಿದ್ದಾರೆ.

ಮಲ ಹೊರುವವರ ಸಂಕಷ್ಟದ ಬಗ್ಗೆ ರಾಜ್ಯ ಸಭೆಯ ಗಮನ ಸೆಳೆದ ಬಚ್ಚನ್, ‘‘ಮಾನವ ಮಲ ಹೊರುವಿಕೆಯನ್ನು ನಮಗೆ ಇದುವರೆಗೆ ನಿಲ್ಲಿಸಲು ಸಾಧ್ಯವಾಗಿಲ್ಲ ಯಾಕೆ ? ಇತರ ಕ್ಷೇತ್ರಗಳ ಪ್ರಗತಿಯ ಬಗ್ಗೆ ಮಾತನಾಡುವಾಗ ಅವರಿಗೆ ಕನಿಷ್ಠ ಸಂರಕ್ಷಕ ಸಾಧನಗಳನ್ನು ಒದಗಿಸಲು ಸಾಧ್ಯವಾಗಿಲ್ಲ ಯಾಕೆ ?’’ ಎಂದು ಪ್ರಶ್ನಿಸಿದರು. ಈ ವಿಷಯದ ಬಗ್ಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಸರಕಾರವನ್ನು ಮನವಿ ಮಾಡಿದ ಬಚ್ಚನ್, ‘‘ನೀವು ಸ್ವಚ್ಛ ಭಾರತ ಅಭಿಯಾನ ನಡೆಸಿದ್ದೀರಿ.

ಇದು ಸ್ವಚ್ಛ ಭಾರತದ ಒಂದು ಭಾಗ’’ ಎಂದರು. ರೈಲ್ವೆ ಮಾನವ ಮಲ ಹೊರುವವರನ್ನು ನಿಯೋಜಿಸುತ್ತಿರುವ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಅವರು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಲ್ಲಿ ಮನವಿ ಮಾಡಿದರು. ಮಾನವ ಮಲ ಹೊರುವವರಿಗೆ ಗೌರವ ಹಾಗೂ ಪುನರ್ವಸತಿ ಒದಗಿಸುವ ಅಗತ್ಯ ಇದೆ ಎಂದು ಒತ್ತಿ ಹೇಳಿದ ಬಚ್ಚನ್, ಅವರಿಗೆ ಸೂಕ್ತ ಸುರಕ್ಷಾ ಸಾಧನಗಳನ್ನು ನೀಡದ ಗುತ್ತಿಗೆದಾರರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದರು.

ಸಮಾಜದಲ್ಲಿ ಮಾನವ ಮಲ ಹೊರುವವರು ಎದುರಿಸುತ್ತಿರುವ ತಾರತಮ್ಯದ ಬಗ್ಗೆ ಅವರು ಗಮನ ಸೆಳೆದರು. ‘‘ಮಾನವ ಮಲ ಹೊರುವವರ ಮಕ್ಕಳು ಇದೇ ಕೆಲಸವನ್ನು ಮಾಡಲು ಬಯಸುತ್ತಿಲ್ಲ. ಆದರೆ, ಅವರ ಬಗ್ಗೆ ತಾರತಮ್ಯ ಮಾಡಲಾಗುತ್ತಿದೆ. ಆದುದರಿಂದ ಅವರಿಗೆ ಸೂಕ್ತ ಪುನರ್ವಸತಿ ಲಭ್ಯವಾಗುತ್ತಿಲ್ಲ’’ ಎಂದು ಬಚ್ಚನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News