ಉತ್ತರ ಪ್ರದೇಶ: ನಾಪತ್ತೆಯಾಗಿದ್ದ ಇಬ್ಬರು ಯುವತಿಯರ ಮೃತದೇಹ ಪತ್ತೆ

Update: 2021-03-24 15:50 GMT

ಪಿಲಿಭಿತ್,ಮಾ.24: ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ಬಿಲ್ಸಂದಾ ಪ್ರದೇಶದಿಂದ ನಾಪತ್ತೆಯಾಗಿದ್ದ 20ರ ಹರೆಯದ ಯುವತಿ ಮತ್ತು ಆಕೆಯ 17ರ ಹರೆಯದ ಸೋದರಿ ಕೆಲವೇ ಗಂಟೆಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಈ ಸೋದರಿಯರು ರೆಪಡಿಯಲ್ಲಿ ವಾಸವಿದ್ದು,ಸೋಮವಾರ ನಾಪತ್ತೆಯಾಗಿದ್ದರು. ಕುಟುಂಬದವರು ಹುಡುಕಾಡಿದಾಗ ಮಧ್ಯರಾತ್ರಿಯ ಸುಮಾರಿಗೆ ಕಬ್ಬಿನ ಗದ್ದೆಯೊಂದರಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿದ್ದ ಹಿರಿಯ ಸೋದರಿಯ ಶವವು ಪತ್ತೆಯಾಗಿತ್ತು. ಮಂಗಳವಾರ ಬೆಳಿಗ್ಗೆ ಕಿರಿಯ ಸೋದರಿಯ ಶವವು ಮನೆಯಿಂದ ಸುಮಾರು 200 ಮೀ.ದೂರದ ಗದ್ದೆಯಲ್ಲಿ ಕಂಡುಬಂದಿತ್ತು.

 ಅತ್ಯಾಚಾರದ ಸಾಧ್ಯತೆಯನ್ನು ತಳ್ಳಿಹಾಕಿದ ಪಿಲಿಭಿತ್ ಎಸ್‌ಪಿ ಜೈಪ್ರಕಾಶ ಅವರು, ಮರಣೋತ್ತರ ಪರೀಕ್ಷೆಯ ವರದಿಯಂತೆ ಕುತ್ತಿಗೆಯನ್ನು ಹೊರತುಪಡಿಸಿ ಶರೀರದ ಬೇರೆ ಯಾವುದೇ ಭಾಗಗಳಲ್ಲಿ ಗಾಯಗಳಿರಲಿಲ್ಲ. ಕಿರಿಯ ಸೋದರಿಯ ಸಾವು ಉಸಿರುಗಟ್ಟಿಸುವಿಕೆಯಿಂದ ಸಂಭವಿಸಿದ್ದರೆ,ಹಿರಿಯ ಸೋದರಿಯ ಸಾವು ನೇಣಿನಿಂದ ಉಂಟಾಗಿದೆ ಎಂದು ವರದಿಯು ತಿಳಿಸಿದೆ ಎಂದರು.

ಪುತ್ರಿಯರ ಸಾವುಗಳಿಗೆ ಕುಟುಂಬವು ಯಾರನ್ನೂ ದೂರಿಲ್ಲ ಮತ್ತು ಅತ್ಯಾಚಾರ ನಡೆದಿರುವ ಆರೋಪವನ್ನೂ ಮಾಡಿಲ್ಲ ಎಂದ ಅವರು,ಮೇಲ್ನೋಟಕ್ಕೆ ಯುವತಿಯರ ಸಾವಿನಲ್ಲಿ ಕುಟುಂಬದ ಕೈವಾಡವಿರುವ ಶಂಕೆಯಿದೆ ಮತ್ತು ಈ ಬಗ್ಗೆ ಪರಿಶೀಲಿಸಲಾಗುತ್ತಿದೆ. ಸೋಮವಾರ ರಾತ್ರಿ ಓರ್ವಳ ಶವ ಪತ್ತೆಯಾದ ಬಳಿಕವೂ ಕುಟುಂಬವು ನೆರೆಯವರು ಸೇರಿದಂತೆ ಯಾರಿಗೂ ತಿಳಿಸಿರಲಿಲ್ಲ. ಇನ್ನೋರ್ವಳ ಶವವು ಮಂಗಳವಾರ ಬೆಳಿಗ್ಗೆ ಪತ್ತೆಯಾದ ಬಳಿಕವೂ ಕುಟುಂಬವು ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ಸ್ಥಳೀಯ ನಿವಾಸಿಯೋರ್ವ ಮಾಹಿತಿ ನೀಡಿದ ಬಳಿಕವೇ ಪೊಲೀಸರಿಗೆ ವಿಷಯ ಗೊತ್ತಾಗಿತ್ತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News