ಮಹಾರಾಷ್ಟ್ರದ ಮರಾಠಾ ಮೀಸಲಾತಿ ಕಾನೂನು ಸಂವಿಧಾನಬದ್ಧವಾಗಿದೆ :ಸುಪ್ರೀಮ್‌ಗೆ ಕೇಂದ್ರ ಸರಕಾರ ಹೇಳಿಕೆ

Update: 2021-03-24 15:29 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಮಾ.24: ಮರಾಠಾ ಸಮುದಾಯಕ್ಕೆ ಮೀಸಲಾತಿಯನ್ನು ಒದಗಿಸಲು ಮಹಾರಾಷ್ಟ್ರ ವಿಧಾನಸಭೆಯು ಅಂಗೀಕರಿಸಿರುವ ಕಾನೂನು ಸಂವಿಧಾನಬದ್ಧವಾಗಿದೆ ಎಂದು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

ಮರಾಠಾ ಮೀಸಲಾತಿಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ನಡೆಸುತ್ತಿದೆ. ಮರಾಠಾಗಳಿಗೆ ಉದ್ಯೋಗಗಳಲ್ಲಿ ಶೇ.12 ಮತ್ತು ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶಗಳಲ್ಲಿ ಶೇ.13ರಷ್ಟು ಮೀಸಲಾತಿಯನ್ನು ಒದಗಿಸಿರುವುದು ಸರ್ವೋಚ್ಚ ನ್ಯಾಯಾಲಯವು ತನ್ನ 1992ರ ಚಾರಿತ್ರಿಕ ತೀರ್ಪಿನಲ್ಲಿ ವಿಧಿಸಿದ್ದ ಮೀಸಲಾತಿಯ ಶೇ.50ರ ಗರಿಷ್ಠ ಮಿತಿಯನ್ನು ಉಲ್ಲಂಘಿಸಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಮಂಗಳವಾರ ವಿಚಾರಣೆ ಸಂದರ್ಭದಲ್ಲಿ ಕೇಂದ್ರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು,ಸಂವಿಧಾನದ 102ನೇ ತಿದ್ದುಪಡಿಯು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ವರ್ಗಗಳ ತನ್ನ ಪಟ್ಟಿಯನ್ನು ಘೋಷಿಸುವ ರಾಜ್ಯದ ಅಧಿಕಾರವನ್ನು ಕಿತ್ತುಕೊಳ್ಳುವುದಿಲ್ಲ ಎಂದು ಹೇಳಿದರು. ಈ ತಿದ್ದುಪಡಿಯ ಬಗ್ಗೆ ಕೇಂದ್ರದ ಅಭಿಪ್ರಾಯವನ್ನು ನ್ಯಾಯಾಲಯವು ಕೇಳಿತ್ತು.

ಸಂವಿಧಾನಕ್ಕೆ 102ನೇ ತಿದ್ದುಪಡಿ ಅಂಗೀಕಾರಗೊಂಡ ಬಳಿಕ ಈವರೆಗೂ ಕೇಂದ್ರವು ಸಂವಿಧಾನದ ವಿಧಿ 342 ಎ ಅಡಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಅಧಿಸೂಚನೆಯನ್ನೇಕೆ ಹೊರಡಿಸಿಲ್ಲ ಎಂದು ನ್ಯಾಯಾಲಯವು ಬೆಟ್ಟು ಮಾಡಿತು.

102ನೇ ತಿದ್ದುಪಡಿಯ ಬಳಿಕ 342ಎ ವಿಧಿಯು ರಾಜ್ಯಪಾಲರೊಂದಿಗೆ ಸಮಾಲೋಚಿಸಿ ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ವರ್ಗಗಳನ್ನು ನಿರ್ದಿಷ್ಟಗೊಳಿಸಲು ರಾಷ್ಟ್ರಪತಿಗಳಿಗೆ ಅಧಿಕಾರವನ್ನು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News