ದೇಶದ ಭವಿಷ್ಯವೂ... ಅಂಬೇಡ್ಕರ್‌ರ ಎಚ್ಚರಿಕೆಯ ನುಡಿಗಳೂ...

Update: 2021-03-24 19:30 GMT

ಸಂವಿಧಾನಸಭೆಯಲ್ಲಿ ಈ ದೇಶಕ್ಕೆ ಸಂವಿಧಾನವನ್ನು ಅರ್ಪಿಸುತ್ತಾ 1949 ನವೆಂಬರ್ 25ರಂದು ದೇಶದ ಭವಿಷ್ಯ ಕುರಿತಂತೆ ಡಾ. ಬಿ. ಆರ್. ಅಂಬೇಡ್ಕರ್ ಅವರು ತಮ್ಮ ಚಿಂತನೆಗಳನ್ನು ಹಂಚಿಕೊಳ್ಳುತ್ತಾರೆ.

ಅಂಬೇಡ್ಕರ್ ಅವರು ಹೇಳುವುದು, ‘‘1950 ಜನವರಿ 26ರಂದು ಭಾರತ ಒಂದು ಸ್ವತಂತ್ರ ದೇಶವಾಗಲಿದೆ. ಪ್ರಶ್ನೆಯೇನೆಂದರೆ ಅದರ ಈ ಸ್ವಾತಂತ್ರ್ಯ ಭವಿಷ್ಯದಲ್ಲಿ ಏನಾಗಲಿದೆ? ತನ್ನ ಸ್ವಾತಂತ್ರ್ಯವನ್ನು ಅದು ಉಳಿಸಿಕೊಳ್ಳಲಿದೆಯೇ ಅಥವಾ ಮತ್ತೆ ಕಳೆದುಕೊಳ್ಳಲಿದೆಯೇ? ನನ್ನ ಮನಸ್ಸಲ್ಲಿ ಮೂಡಿಬರುತ್ತಿರುವ ಆಲೋಚನೆಯಿದು. ಏಕೆಂದರೆ ಭಾರತ ಹಿಂದೆಂದೂ ಸ್ವತಂತ್ರ ದೇಶವಾಗಿರಲಿಲ್ಲವೇ? ಇತ್ತು. ಆದರೆ ಗಮನಿಸತಕ್ಕ ಅಂಶ ಹಿಂದೆ ತಾನು ಹೊಂದಿದ್ದ ಆ ಸ್ವಾತಂತ್ರ್ಯವನ್ನು ಅದು ಕಳೆದುಕೊಂಡಿದೆ. ಮುಂದೆ ಎರಡನೆಯ ಬಾರಿಗೆ ಕಳೆದುಕೊಳ್ಳುವುದೇ? ನನ್ನನ್ನು ಬಹಳ ಆತಂಕಕ್ಕೀಡುಮಾಡಿರುವುದೇ ಭವಿಷ್ಯದ ಬಗೆಗಿನ ಈ ಚಿಂತನೆ. ಅಂದಹಾಗೆ ನನ್ನ ಮನಸ್ಸನ್ನು ಬಹಳವಾಗಿ ಕೊರೆಯುತ್ತಿರುವ ಅಂಶ ಇಂಡಿಯಾ ಹಿಂದೆ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡಿತ್ತು ಎಂಬುದಲ್ಲ, ತನ್ನದೇ ಜನರ ದ್ರೋಹ ಮತ್ತು ವಿಶ್ವಾಸಘಾತುಕತನದಿಂದ ಅದು ಕಳೆದುಕೊಂಡಿತ್ತು ಎಂಬುದು.

ಸಿಂಧ್ ಪ್ರಾಂತವನ್ನು ಮುಹಮ್ಮದ್ ಬಿನ್ ಖಾಸಿಂ ಆಕ್ರಮಿಸಲು ಬಂದಾಗ ರಾಜ ದಾಹಿರನ ಸೈನ್ಯದ ಸೇನಾಧಿಪತಿಗಳು ಮುಹಮ್ಮದ್ ಬಿನ್ ಖಾಸಿಂನಿಂದ ಲಂಚ ಪಡೆದು ರಾಜ ದಾಹಿರನ ಪರ ಹೋರಾಡಲು ನಿರಾಕರಿಸಿದರು. ಪೃಥ್ವಿರಾಜ್ ಚೌಹಾಣನ ವಿರುದ್ಧ ಹೋರಾಡಿ ಭಾರತವನ್ನು ಆಕ್ರಮಿಸಲು ಮುಹಮ್ಮದ್ ಘೋರಿಯನ್ನು ಭಾರತಕ್ಕೆ ಆಹ್ವಾನಿಸಿದ್ದು ರಾಜ ಜಯಚಂದ್ರ. ಈ ಸಂದರ್ಭದಲ್ಲಿ ಜಯಚಂದ್ರ ಮುಹಮ್ಮದ್ ಘೋರಿಗೆ ತನ್ನ ಸಹಾಯವನ್ನಷ್ಟೇ ಅಲ್ಲ ಇಡೀ ಸೋಳಂಕಿ ರಾಜರ ಬೆಂಬಲವನ್ನು ಒದಗಿಸುವುದಾಗಿ ಭರವಸೆ ಇತ್ತಿದ್ದ. ಇನ್ನು ಶಿವಾಜಿ ಹಿಂದೂಗಳ ವಿಮೋಚನೆಗಾಗಿ ಹೋರಾಡುತ್ತಿದ್ದರೆ ಮರಾಠರ ಕೆಲವು ಶ್ರೇಷ್ಠ ವ್ಯಕ್ತಿಗಳು ಮತ್ತು ರಜಪೂತ ರಾಜರು ಯುದ್ಧದಲ್ಲಿ ಮೊಗಲ್ ಚಕ್ರವರ್ತಿಗಳ ಪರ ಹೋರಾಡುತ್ತಿದ್ದರು. ಅದೇ ರೀತಿ ಬ್ರಿಟಿಷರು ಸಿಖ್ ಆಡಳಿತಗಾರರನ್ನು ಸರ್ವನಾಶಗೊಳಿಸಲು ಯತ್ನಿಸುತ್ತಿದ್ದರೆ ಅತ್ತ ಸಿಖ್ಖರ ಪ್ರಮುಖ ದಂಡನಾಯಕ ಗುಲಾಬ್ ಸಿಂಗ್ ಮೌನವಾಗಿ ಕುಳಿತಿದ್ದ, ಸಿಖ್ಖರ ಸಾಮ್ರಾಜ್ಯವನ್ನು ಉಳಿಸಲು ಆತ ಸಹಾಯ ಮಾಡಲಿಲ್ಲ. ದುರಂತವೆಂದರೆ 1857ರಲ್ಲಿ ಭಾರತದ ಬಹುತೇಕ ಭಾಗವು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಯುದ್ಧ ಘೋಷಿಸಿದ್ದರೆ ಸಿಖ್ಖರು ಒಂದೆಡೆ ನಿಂತು ಇಡೀ ಯುದ್ಧವನ್ನು ಸುಮ್ಮನೆ ನೋಡುತ್ತಾ ಮೂಕಪ್ರೇಕ್ಷಕರಂತಿದ್ದರು.

ಪ್ರಶ್ನೆಯೇನೆಂದರೆ, ಇತಿಹಾಸ ಪುನರಾವರ್ತನೆ ಆಗಲಿದೆಯೇ? ನನ್ನ ಮನಸ್ಸಿನಲ್ಲಿ ತುಂಬಿರುವ ಆತಂಕದ ಪ್ರಶ್ನೆಯಿದು. ಕೆಲವು ವಾಸ್ತವಗಳನ್ನು ಅರಿತುಕೊಂಡಾಗ ಈ ಆತಂಕ ನನ್ನನ್ನು ಇನ್ನೂ ಆಳಕ್ಕಿಳಿಸುತ್ತದೆ. ಯಾಕೆಂದರೆ ಈಗಾಗಲೇ ಇರುವ ನಮ್ಮ ಹಳೆಯ ಶತ್ರುಗಳಾದ ಜಾತಿಗಳು ಮತ್ತು ಧಾರ್ಮಿಕ ನಂಬಿಕೆಗಳ ಜೊತೆಗೆ ಮುಂದೆ ನಾವು ಪರಸ್ಪರ ವೈರುಧ್ಯದ, ವೈವಿಧ್ಯದ ರಾಜಕೀಯ ಚಿಂತನೆಗಳನ್ನು ಒಳಗೊಂಡ ಹಲವು ರಾಜಕೀಯ ಪಕ್ಷಗಳನ್ನು ಒಳಗೊಳ್ಳಲಿದ್ದೇವೆ. ಭಾರತೀಯರು ತಮ್ಮ ಧಾರ್ಮಿಕ ನಂಬಿಕೆಗಳನ್ನು ಮೀರಿ ತಮ್ಮ ದೇಶವನ್ನು ಎತ್ತಿಹಿಡಿಯುವರೇ ಅಥವಾ ತಮ್ಮ ದೇಶಕ್ಕಿಂತ ತಮ್ಮ ಧಾರ್ಮಿಕ ನಂಬಿಕೆಗಳೇ ಶ್ರೇಷ್ಠ ಎನ್ನುವರೇ? ನನಗೆ ತಿಳಿಯುತ್ತಿಲ್ಲ. ಆದರೆ ಒಂದಂತೂ ನಿಜ, ರಾಜಕೀಯ ಪಕ್ಷಗಳು ದೇಶಕ್ಕಿಂತ ತಮ್ಮ ಧಾರ್ಮಿಕ ನಂಬಿಕೆಗಳೇ ಶ್ರೇಷ್ಠ ಎಂದರೆ ನಮ್ಮ ಸ್ವಾತಂತ್ರ್ಯ ಗಂಡಾಂತರಕ್ಕೆ ಸಿಲುಕಲಿದೆ. ಎರಡನೇ ಬಾರಿಗೆ ಸಿಲುಕಲಿದೆ. ಬಹುಶಃ ನಾವು ಅದನ್ನು ಶಾಶ್ವತವಾಗಿ ಕಳೆದುಕೊಳ್ಳಲಿದ್ದೇವೆ. ಈ ಹಿನ್ನೆಲೆಯಲ್ಲಿ ಇಂತಹ ಸಂಭವನೀಯತೆಯನ್ನು ತಪ್ಪಿಸಲು ನಾವೆಲ್ಲರೂ ತಡೆಗೋಡೆಯಂತೆ ದೃಢ ನಿಶ್ಚಯದಿಂದಿರಬೇಕಾಗುತ್ತದೆ. ನಮ್ಮ ರಕ್ತದ ಕೊನೆ ಹನಿ ಇರುವವರೆಗೂ ನಮ್ಮ ಸ್ವಾತಂತ್ರ್ಯವನ್ನು ರಕ್ಷಿಸಿಕೊಂಡೇ ತೀರುತ್ತೇವೆ ಎಂಬ ದೃಢಸಂಕಲ್ಪವನ್ನು ನಾವು ತಾಳಬೇಕಾಗಿದೆ.’’

ಡಾ. ಅಂಬೇಡ್ಕರ್ ಅವರ ಈ ಎಚ್ಚರಿಕೆಯ ನುಡಿಗಳನ್ನು ಪ್ರತಿಯೊಬ್ಬರೂ ಗಂಭೀರವಾಗಿ ಗಮನಿಸಬೇಕು. ಯಾಕೆಂದರೆ ಹಿಂದೆ ಇಲ್ಲಿ ಇದ್ದಂತಹ ಧಾರ್ಮಿಕ ಮತ್ತು ಸಮುದಾಯವಾರು ವಿಭಿನ್ನತೆ, ಅವರಲ್ಲಿ ಇದ್ದಂತಹ ಪರಸ್ಪರ ಅಸಹನೆ, ಕಚ್ಚಾಟ ಪರೋಕ್ಷವಾಗಿ ಪರಕೀಯರು ಇಲ್ಲಿ ನೆಲೆಯೂರಲು ಕಾರಣವಾಯಿತು ಎಂಬುದಕ್ಕೆ. ಇನ್ನು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಅಂಬೇಡ್ಕರ್‌ರವರು ಪ್ರಜಾಪ್ರಭುತ್ವ ವ್ಯವಸ್ಥೆ ಭಾರತದಲ್ಲಿ ಬಹಳ ದಿನಗಳ ಹಿಂದೆಯೇ ಬುದ್ಧನ ಕಾಲದಲ್ಲಿ ಬಿಕ್ಕು ಸಂಘಗಳ ನಡುವೆ ಇತ್ತು ಎನ್ನುತ್ತಾ, ‘‘ಇಂತಹ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಭಾರತ ಕಳೆದುಕೊಂಡಿತು. ಪ್ರಶ್ನೆ ಎಂದರೆ ಅದು ಎರಡನೇ ಬಾರಿಗೆ ಕಳೆದುಕೊಳ್ಳುವುದೇ? ನನಗೆ ತಿಳಿಯುತ್ತಿಲ್ಲ. ಆದರೆ ಭಾರತದಂತಹ ದೇಶದಲ್ಲಿ ಅಂತಹದ್ದು ಮತ್ತೆ ಸಂಭವಿಸುವ ಸಾಧ್ಯತೆ ಇದ್ದೇ ಇದೆ. ಏಕೆಂದರೆ ನೂತನ ಸಂವಿಧಾನ ಜಾರಿಯಾಗುತ್ತಿರುವ ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅನೇಕ ದಿನಗಳಿಂದ ಬಳಸದೆ ಇರುವುದರಿಂದ ಅದು ಭಾರತಕ್ಕೆ ತೀರಾ ಹೊಸದಾಗಿ ಕಾಣುವ ಸಾಧ್ಯತೆ ಇದೆ. ಪರಿಣಾಮ ಪ್ರಜಾಪ್ರಭುತ್ವ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡುವ ಅಪಾಯ ಇದೆ. ಹೇಗೆಂದರೆ ಈ ಪ್ರಜಾಪ್ರಭುತ್ವ ತನ್ನ ಆ ಮೂಲ ರೂಪ ಉಳಿಸಿಕೊಂಡೂ ಸರ್ವಾಧಿಕಾರಕ್ಕೆಡೆಮಾಡಿಕೊಡುವ ಸಾಧ್ಯತೆ ಇದೆ. ಭಾರೀ ಬಹುಮತವಿರುವ ಸರಕಾರ ಬಂದರೆ ಖಂಡಿತ ಅಂತಹ ಒಂದು ಸಾಧ್ಯತೆ ವಾಸ್ತವವಾಗುವ ಅಪಾಯ ನಿಚ್ಚಳವಾಗಿದೆ.’’

ಅಂಬೇಡ್ಕರರ ಈ ಮಾತನ್ನು ನಾವು ಮತ್ತೂ ಸೂಕ್ಷ್ಮವಾಗಿ ಗಮನಿಸಬೇಕಿದೆ. ಸಾಧ್ಯವಾದರೆ ವರ್ತಮಾನದ ಬೆಳವಣಿಗೆಗಳನ್ನು ಅಂಬೇಡ್ಕರ್‌ರ ಆ ನುಡಿಗಳೊಡನೆ ಹೋಲಿಸಬಹುದು. ಹಾಗೆಯೇ ಹಾಗಿದ್ದರೆ ಇವುಗಳೆಲ್ಲವನ್ನು ಅಂದರೆ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ನಾವು ಉಳಿಸಿಕೊಳ್ಳುವುದು ಹೇಗೆ? ಅಂಬೇಡ್ಕರರು ಹೇಳುವುದು, ‘‘ನಾವು ಪ್ರಜಾಪ್ರಭುತ್ವವನ್ನು ಕೇವಲ ರೂಪದಲ್ಲಷ್ಟೇ ಅಲ್ಲದೆ ವಾಸ್ತವವಾಗಿಯೂ ಉಳಿಸಿಕೊಳ್ಳಬೇಕೆಂದರೆ, ನನ್ನ ಪ್ರಕಾರ ನಮ್ಮ ಸಾಮಾಜಿಕ ಮತ್ತು ಆರ್ಥಿಕ ಉದ್ದೇಶಗಳನ್ನು ಸಾಧಿಸಿಕೊಳ್ಳಲು ಸಾಂವಿಧಾನಿಕ ಮಾರ್ಗಗಳನ್ನು ಅನುಸರಿಸುತ್ತೇವೆ ಎಂಬ ತತ್ವಕ್ಕೆ ಬದ್ಧರಾಗಬೇಕು, ಕ್ರಾಂತಿಯ ರಕ್ತಪಾತದ ಮಾರ್ಗಗಳನ್ನು ಬಿಡಬೇಕು. ಜೊತೆಗೆ ಸತ್ಯಾಗ್ರಹ, ಅಸಹಕಾರ ಮತ್ತು ನಾಗರಿಕ ಅವಿಧೇಯತೆಯಂತಹ ವಿಧಾನಗಳನ್ನು ಅನುಸರಿಸಲೇಬಾರದು.

ಈ ದಿಸೆಯಲ್ಲಿ ನಾವು ಮತ್ತೊಂದು ಕೆಲಸ ಮಾಡಬೇಕಾಗಿರುವುದು, ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಸಿದ್ಧ ಪ್ರಜಾಪ್ರಭುತ್ವವಾದಿ ಜಾನ್ ಸ್ಟುವರ್ಟ್ ಮಿಲ್ ಹೇಳಿರುವ ಈ ಕೆಳಗಿನ ಎಚ್ಚರಿಕೆಯ ನುಡಿಗಳನ್ನು ಗಮನಿಸುವುದು. ಮಿಲ್ ಹೇಳುತ್ತಾನೆ, ‘ಯಾವುದೇ ಶ್ರೇಷ್ಠ ವ್ಯಕ್ತಿಯ ಪಾದಗಳಡಿಯಲ್ಲಿ ನಮ್ಮ ಸ್ವಾತಂತ್ರವನ್ನು ಇರಿಸಬಾರದು ಅಥವಾ ನಮ್ಮ ಸಂಸ್ಥೆಗಳನ್ನು ಬುಡಮೇಲು ಮಾಡಲು ಸಾಧ್ಯವಾಗುವಂತಹ ಅಧಿಕಾರಗಳನ್ನು ಅಂತಹವರಿಗೆ ನೀಡಬಾರದು.’ ನಿಜ, ದೇಶಕ್ಕೆ ಜೀವನ ಪೂರ್ತಿ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ ಕೃತಜ್ಞರಾಗಿರುವುದರಲ್ಲಿ ತಪ್ಪೇನಿಲ್ಲ. ಆದರೆ ಅಂತಹ ಕೃತಜ್ಞತೆಗೆ ಮಿತಿ ಇದೆ. ಇದನ್ನು ಒಂದೆಡೆ ಅತ್ಯಂತ ಸುಂದರ ಪದಗಳಲ್ಲಿ ಐರಿಶ್ ದೇಶದ ಸ್ವಾತಂತ್ರ್ಯ ಪ್ರೇಮಿ ಡೇನಿಯಲ್ ಓಕಾನೆಲ್ ಹೇಳುತ್ತಾನೆ, ‘ತನ್ನ ಗೌರವದ ಬೆಲೆತೆತ್ತು ಯಾವುದೇ ಮನುಷ್ಯ ಮತ್ತೊಬ್ಬರಿಗೆ ಕೃತಜ್ಞನಾಗಿರಲು ಸಾಧ್ಯವಿಲ್ಲ. ತನ್ನ ಶೀಲದ ಬೆಲೆ ತೆತ್ತು ಯಾವುದೇ ಮಹಿಳೆ ಮತ್ತೊಬ್ಬರಿಗೆ ಕೃತಜ್ಞಳಾಗಿರಲು ಸಾಧ್ಯವಿಲ್ಲ. ಹಾಗೆಯೇ ತನ್ನ ಸ್ವಾತಂತ್ರ್ಯದ ಬೆಲೆ ತೆತ್ತು ಯಾವುದೇ ರಾಷ್ಟ್ರ ಮತ್ತೊಂದಕ್ಕೆ ಕೃತಜ್ಞವಾಗಿರಲು ಸಾಧ್ಯವಿಲ್ಲ.’ ಈ ಎಚ್ಚರಿಕೆ ಬೇರೆಲ್ಲ ದೇಶಗಳಿಗಿಂತ ಭಾರತಕ್ಕೆ ಸಂಬಂಧಿಸಿದಂತೆ ಬಹಳ ಅತ್ಯಗತ್ಯವಾದದ್ದು. ಏಕೆಂದರೆ ಬೇರೆಲ್ಲಾ ದೇಶಗಳಿಗಿಂತ ಭಾರತದಲ್ಲಿ ಭಕ್ತಿ ಅಥವಾ ವ್ಯಕ್ತಿಪೂಜೆ ರಾಜಕೀಯ ಕ್ಷೇತ್ರದಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಈ ನಿಟ್ಟಿನಲ್ಲಿ ಯಾವುದಾದರೊಂದು ಧರ್ಮದಲ್ಲಿ ಭಕ್ತಿ ಇಟ್ಟುಕೊಂಡರೆ ಅದು ಆತ್ಮಕ್ಕೆ ಮುಕ್ತಿ ನೀಡಬಹುದೇನೋ. ಆದರೆ ರಾಜಕಾರಣದಲ್ಲಿ ಭಕ್ತಿ ಅಥವಾ ವ್ಯಕ್ತಿಪೂಜೆ ಅದು ಇಡೀ ವ್ಯವಸ್ಥೆಯನ್ನು ತಳಮಟ್ಟಕ್ಕೆ ತಳ್ಳಲಿಕ್ಕೆ ದಾರಿಯಾಗಲಿದೆ. ಪರಿಣಾಮ ಅದು ಸರ್ವಾಧಿಕಾರಕ್ಕೆ ದಾರಿಮಾಡಿಕೊಡಲಿದೆ.’’

 ಈ ಸಂದರ್ಭದಲ್ಲಿ ದೇಶದ ಪ್ರತಿಯೊಬ್ಬರೂ ದೇಶದ ಭವಿಷ್ಯದ ಕುರಿತಂತೆ ಅಂಬೇಡ್ಕರ್ ಹೇಳಿರುವ ಈ ಎಚ್ಚರಿಕೆಯ ನುಡಿಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಆ ಮೂಲಕ ಈ ದೇಶದ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಅಂತಃಸತ್ವವನ್ನು ಉಳಿಸಿಕೊಳ್ಳಲು ಪಣತೊಡಬೇಕು, ಕಂಕಣಬದ್ಧರಾಗಬೇಕು.

Writer - ರಘೋತ್ತಮ ಹೊ. ಬ.

contributor

Editor - ರಘೋತ್ತಮ ಹೊ. ಬ.

contributor

Similar News