ವಝೆ ಮನೆಯಲ್ಲಿ 62 ಗುಂಡುಗಳು ಪತ್ತೆ: ನ್ಯಾಯಾಲಯಕ್ಕೆ ಎನ್‌ಐಎ ಮಾಹಿತಿ
ಮುಂಬೈ, ಮಾ.25: ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕ ತುಂಬಿದ್ದ ವಾಹನ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಅಮಾನತುಗೊಂಡಿರುವ ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿ ಸಚಿನ್ ವಝೆ ನಿವಾಸದಲ್ಲಿ 62 ಅನಧಿಕೃತ ಗುಂಡುಗಳು ಪತ್ತೆಯಾಗಿವೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ಗುರುವಾರ ಇಲ್ಲಿಯ ನ್ಯಾಯಾಲಯಕ್ಕೆ ತಿಳಿಸಿದೆ. ಇದೇ ವೇಳೆ,ವಝೆಯ ಕಸ್ಟಡಿ ಅವಧಿಯನ್ನು ವಿಸ್ತರಿಸುವಂತೆ ಅದು ನ್ಯಾಯಾಲಯವನ್ನು ಕೋರಿದೆ.
ವಝೆಯವರ ಸರ್ವಿಸ್ ರಿವಾಲ್ವರ್‌ಗಾಗಿ ಇಲಾಖೆಯಿಂದ ನೀಡಲಾಗಿದ್ದ 30 ಗುಂಡುಗಳಲ್ಲಿ ಕೇವಲ ಐದು ಪತ್ತೆಯಾಗಿವೆ. ಉಳಿದ ಗುಂಡುಗಳು ಎಲ್ಲಿ ಹೋದವು ಎನ್ನುವುದನ್ನು ಅವರು ಬಾಯಿ ಬಿಡುತ್ತಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ ಎನ್‌ಐಎ,ವಝೆ ತನ್ನ ಮೊಬೈಲ್ ಫೋನ್ ಅನ್ನು ನಾಶಗೊಳಿಸಿದ್ದು,ಭಾರೀ ಪ್ರಮಾಣದ ಕರೆ ದಾಖಲೆಗಳನ್ನು ಪರಿಶೀಲಿಸುವ ಅಗತ್ಯವಿದೆ. ಹೀಗಾಗಿ ಅವರ ಕಸ್ಟಡಿ ಅವಧಿಯನ್ನು ಇನ್ನೂ 15 ದಿನಗಳ ಕಾಲ ವಿಸ್ತರಿಸಬೇಕು ಎಂದು ಕೋರಿಕೊಂಡಿತು.
ಎನ್‌ಐಎ ಬುಧವಾರ ವಝೆ ವಿರುದ್ಧ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯನ್ನು ಹೇರಿದೆ.
ವಝೆಯನ್ನು ಮಾ.13ರಂದು ಬಂಧಿಸಲಾಗಿತ್ತು. ಅವರ ಎನ್‌ಐಎ ಕಸ್ಟಡಿ ಗುರುವಾರ ಅಂತ್ಯಗೊಳ್ಳುತ್ತಿದ್ದು,ಶುಕ್ರವಾರ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಬೇಕಾಗಿದೆ.