ನರೇಂದ್ರ ಮೋದಿ ಕೇಜ್ರಿವಾಲ್ ಜನಪ್ರಿಯತೆಗೆ ಬೆದರಿದ್ದಾರೆ: ಮನೀಶ್ ಸಿಸೋಡಿಯಾ

Update: 2021-03-25 17:46 GMT

ಹೊಸದಿಲ್ಲಿ, ಮಾ. 25: ದಿಲ್ಲಿಯನ್ನು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅಭಿವೃದ್ಧಿಗೊಳಿಸುವುದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಬಯಸಿದ್ದಾರೆ. ಅದಕ್ಕಾಗಿ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಹೆಚ್ಚಿನ ಅಧಿಕಾರ ನೀಡುವ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಆರೋಪಿಸಿದ್ದಾರೆ.

‘‘ಪ್ರತಿಯೊಬ್ಬರೂ ಮೋದಿ ಮಾದರಿ (ಅಭಿವೃದ್ಧಿ) ಬಗ್ಗೆ ಮಾತನಾಡುತ್ತಿದ್ದಾರೆ. ಮೋದಿ ಮಾದರಿ ವಿಫಲವಾಗುತ್ತಿದೆ. ಆದುದರಿಂದ ಅರವಿಂದ ಕೇಜ್ರಿವಾಲ್ ಅವರ ಮಾದರಿ ಪರ್ಯಾಯವಾಗಬಹುದು ಎಂಬ ಬಗ್ಗೆ ಜನರು ಮಾತನಾಡುತ್ತಿದ್ದಾರೆ. ಕೇಜ್ರಿವಾಲ್ ಟೋಕನಿಸಂ ಮಾಡುವುದಿಲ್ಲ. ಅದಕ್ಕಾಗಿಯೇ ಅವರು (ಮೋದಿ) ನಿದ್ರೆ ಕಳೆದುಕೊಂಡಿದ್ದಾರೆ’’ ಎಂದು ಸಿಸೋಡಿಯಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ದಿಲ್ಲಿಯ ಅಭಿವೃದ್ಧಿ ತಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ಮಸೂದೆ ಅಂಗೀಕರಿಸಿದ್ದಾರೆ. ಅವರು ಭಾರತದ ಪ್ರಧಾನ ಮಂತ್ರಿ. ಅವರು ಎಲ್ಲಿ ಕೂಡ ಉತ್ತಮ ಕೆಲಸ ಮಾಡಬಹುದು. ಆದರೆ, ಅವರು ಮಾಡುವುದಿಲ್ಲ ಎಂದು ಅವರು ಹೇಳಿದರು.

ಕೇಜ್ರಿವಾಲ್ ಮಾಡುವ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿ ಉಂಟು ಮಾಡಲು ಅವರು ಬಯಸುತ್ತಿದ್ದಾರೆ. ಆದರೆ, ಕೇಜ್ರಿವಾಲ್ ಹೋರಾಟಗಾರರು. ಅಡ್ಡಿಯ ಕಾರಣಕ್ಕೆ ಅವರು ಎಂದಿಗೂ ತನ್ನ ಕಾರ್ಯ ಸ್ಥಗಿತಗೊಳಿಸಲಾರರು ಎಂದು ಸಿಸೋಡಿಯಾ ಹೇಳಿದರು.

ಪ್ರಧಾನ ಮಂತ್ರಿ ಅವರ ಹುದ್ದೆ ದೇಶದ ಪಿತನಂತೆ. ಯಾವುದೇ ರಾಜಕಾರಣಿ ಅಥವಾ ಪಕ್ಷದ ಕಾರ್ಯವನ್ನು ಪ್ರಧಾನಿ ಅವರು ಪ್ರಶಂಸಿಸಬೇಕು. ಆದರೆ, ಮೋದಿ ಅವರು ನಕಾರಾತ್ಮಕ ರಾಜಕೀಯದಲ್ಲಿ ತೊಡಗಿದ್ದಾರೆ. ಅವರು ಶಾಲೆ, ಆಸ್ಪತ್ರೆ, ಕ್ಲಿನಿಕ್‌ಗಳನ್ನು ಬಂದ್ ಮಾಡಲು ಬಯಸುತ್ತಿದ್ದಾರೆ. ಅವರು ಕೇಜ್ರಿವಾಲ್ ಅವರ ಜನಪ್ರಿಯತೆಗೆ ಬೆದರಿದ್ದಾರೆ ಎಂದು ಅವರು ಹೇಳಿದರು.

 ಪ್ರತಿಪಕ್ಷ ಈ ಮಸೂದೆಯನ್ನು ಅಸಾಂವಿಧಾನಿಕ ಎಂದು ಹೇಳಿದೆ ಹಾಗೂ ಅದನ್ನು ಪರಿಶೀಲನೆಗೆ ಆಯ್ಕೆ ಸಮಿತಿಗೆ ಕಳುಹಿಸುವಂತೆ ಆಗ್ರಹಿಸಿದೆ. ಮಸೂದೆ ರಾಜ್ಯ ಸಭೆಯಲ್ಲಿ ಬುಧವಾರ ಧ್ವನಿ ಮತದ ಮೂಲಕ ಅಂಗೀಕಾರವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News