ಹತ್ಯೆಯ ಮುನ್ನ ಮನ್ಸುಖ್ ಹಿರೇನ್‌ಗೆ ಕ್ಲೊರೋಫಾರ್ಮ್: ಎಟಿಎಸ್ ಶಂಕೆ

Update: 2021-03-25 18:00 GMT
ಸಾಂದರ್ಭಿಕ ಚಿತ್ರ | PTI

ಮುಂಬೈ, ಮಾ.25: ಥಾಣೆ ಮೂಲದ ಉದ್ಯಮಿ ಮನ್ಸುಖ್ ಹಿರೇನ್‌ರನ್ನು ಹತ್ಯೆ ಮಾಡುವ ಮೊದಲು ಅವರಿಗೆ ಬಲವಂತವಾಗಿ ಕ್ಲೊರೋಫಾರ್ಮ್ ನೀಡಿರುವ ಶಂಕೆಯಿದೆ ಎಂದು ಮಹಾರಾಷ್ಟ್ರ ಭಯೋತ್ಪಾದನ ನಿಗ್ರಹ ದಳ(ಎಟಿಎಸ್)ದ ಅಧಿಕಾರಿಗಳು ಹೇಳಿದ್ದಾರೆ.

ಫೆಬ್ರವರಿ 25ರಂದು ಉದ್ಯಮಿ ಮುಕೇಶ್ ಅಂಬಾನಿ ಮನೆ ಬಳಿ ಸ್ಫೋಟಕ ತುಂಬಿದ್ದ ಕಾರು ಪತ್ತೆಯಾಗಿತ್ತು. ಈ ಕಾರಿನ ಮಾಲಕ ಥಾಣೆ ಮೂಲದ ಉದ್ಯಮಿ ಮನ್ಸುಖ್ ಹಿರೇನ್ ಎಂದು ತನಿಖೆಯ ಸಂದರ್ಭ ಬೆಳಕಿಗೆ ಬಂದಿತ್ತು. ಈ ಮಧ್ಯೆ, ಮಾರ್ಚ್ 5ರಂದು ಮುಂಬೈ ಬಳಿಯ ರಾಷ್ಟ್ರೀಯ ಹೆದ್ದಾರಿಯ ಚರಂಡಿಯಲ್ಲಿ ಹಿರೇನ್ ಮೃತದೇಹ ಪತ್ತೆಯಾಗಿತ್ತು.

ಸಾಯುವ ಮೊದಲೇ ವ್ಯಕ್ತಿಯ ಮುಖದ ಎಡಭಾಗದಲ್ಲಿ ಹಾಗೂ ಮೂಗಿನ ಹೊಳ್ಳೆ(ನಾಸರಂದ್ರ)ದಲ್ಲಿ ಹೊಡೆತದಿಂದ ಆದ ಗಾಯವಿತ್ತು. ಅಲ್ಲದೆ ಬಲಗೆನ್ನೆ ಮತ್ತು ಬಲಕಣ್ಣಿನ ಬಳಿಯೂ ಗಾಯವಾಗಿದೆ. ಅವರ ಬಹುತೇಕ ಅವಯವ ಹಾಗೂ ತಲೆಬುರುಡೆ ಸುಸ್ಥಿತಿಯಲ್ಲಿತ್ತು ಎಂದು ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬಹುಷಃ ಬಲವಂತದಿಂದ ಕ್ಲೊರೋಫಾರ್ಮ್ ನೀಡುವುದನ್ನು ಹಿರೇನ್ ತಡೆಯಲು ಪ್ರಯತ್ನಿಸಿದಾಗ ಅವರ ಮೇಲೆ ಹಲ್ಲೆ ನಡೆದಿದೆ. ಕ್ಲೊರೋಫಾರ್ಮ್ ನೀಡಿದ ಕೆಲ ನಿಮಿಷಗಳಲ್ಲೇ ಹಿರೇನ್ ಪ್ರಜ್ಞೆ ಕಳೆದುಕೊಂಡಿದ್ದು ಆ ಬಳಿಕ ಆರೋಪಿಗಳು ಸುಲಭವಾಗಿ ಹಿರೇನ್‌ರನ್ನು ಸಾಯಿಸಿದ್ದಾರೆ ಎಂದು ಎಟಿಎಸ್ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News