ಅಮೆರಿಕ ಸಂಸತ್‌ನಲ್ಲಿ ಗೂಗಲ್, ಫೇಸ್‌ಬುಕ್ ಮುಖ್ಯಸ್ಥರ ವಿಚಾರಣೆ

Update: 2021-03-26 15:45 GMT
photo: Mark Zuckerberg (facebook) | Sundar Pichai (twitter)

ವಾಶಿಂಗ್ಟನ್, ಮಾ. 26: ಫೇಸ್‌ಬುಕ್ ಮತ್ತು ಗೂಗಲ್ ಕಂಪೆನಿಗಳ ಸಾಮಾಜಿಕ ಮಾಧ್ಯಮ ಸೇವೆಗಳು ಮಕ್ಕಳ ಮೇಲೆ ಬೀರುವ ಪರಿಣಾಮಕ್ಕೆ ಸಂಬಂಧಿಸಿ ಅಮೆರಿಕದ ಸಂಸತ್ ಸದಸ್ಯರು ಗುರುವಾರ ಈ ಬೃಹತ್ ತಂತ್ರಜ್ಞಾನ ಕಂಪೆನಿಗಳನ್ನು ತರಾಟೆಗೆ ತೆಗೆದುಕೊಂಡರು.

 ಮಕ್ಕಳಿಗಾಗಿ ಹೊಸ ಆ್ಯಪೊಂದನ್ನು ಆರಂಭಿಸುವ ಫೇಸ್‌ಬುಕ್‌ನ ಯೋಜನೆ ಮತ್ತು ನಿರಂತರವಾಗಿ ವೀಡಿಯೊಗಳನ್ನು ಪ್ರಸಾರ ಮಾಡುವ ಗೂಗಲ್‌ನ ಯೂಟ್ಯೂಬ್‌ನ ಹೊಸ ಸೇವೆಯ ಬಗ್ಗೆ ಸಂಸದರು ಆಕ್ಷೇಪಗಳನ್ನು ವ್ಯಕ್ತಪಡಿಸಿದರು.

ಸಾಮಾಜಿಕ ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿ ಮತ್ತು ಉಗ್ರವಾದವನ್ನು ಹರಡಲಾಗುತ್ತಿದೆ ಎನ್ನುವ ಕಳವಳಕ್ಕೆ ಸಂಬಂಧಿಸಿ ಸಂಸತ್‌ನಲ್ಲಿ ಗುರುವಾರ ನಡೆದ ವಿಚಾರಣೆಯ ವೇಳೆ ಸಂಸದರು ತಮ್ಮ ಆಕ್ಷೇಪಗಳನ್ನು ಹರಿಯಬಿಟ್ಟರು.

ನಿಮ್ಮ ಉತ್ಪನ್ನಗಳನ್ನು ಮಕ್ಕಳನ್ನು ಸಾಮಾಜಿಕ ಮಾಧ್ಯಮಗಳ ವ್ಯಸನಿಗಳನ್ನಾಗಿಸಲು ವಿನ್ಯಾಸಗೊಳಿಸಲಾಗಿದೆಯೇ ಹಾಗೂ ಅದು ಅವರ ಸುರಕ್ಷತೆಗೆ ಬೆದರಿಕೆಯೊಡ್ಡುತ್ತದೆಯೇ ಎಂಬ ಪ್ರಶ್ನೆಗಳನ್ನು ಸಂಸದರು ಫೇಸ್‌ಬುಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್ ಝುಕರ್‌ಬರ್ಗ್ ಮತ್ತು ಗೂಗಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ್ ಪಿಚೈಗೆ ಕೇಳಿದರು.

ಈವರೆಗೆ ತಂತ್ರಜ್ಞಾನ ಕಂಪೆನಿಗಳು ತಮ್ಮ ಹೊಸ ಯೋಜನೆಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.

ಆನ್‌ಲೈನ್ ಮೂಲಕ ನಡೆದ ಸಂಸತ್ ವಿಚಾರಣೆಯಲ್ಲಿ ಟ್ವಿಟರ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಾಕ್ ಡೊರ್ಸಿ ಕೂಡ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News