ಸೈರಸ್ ಮಿಸ್ತ್ರಿ ವಜಾ ಆದೇಶ ಎತ್ತಿಹಿಡಿದ ಸುಪ್ರೀಂಕೋರ್ಟ್

Update: 2021-03-26 17:34 GMT

ಹೊಸದಿಲ್ಲಿ, ಮಾ.26: ಟಾಟಾ ಗ್ರೂಪ್ ನ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿಯನ್ನು ವಜಾಗೊಳಿಸಿರುವ ಕ್ರಮವನ್ನು ಸುಪ್ರೀಂಕೋರ್ಟ್ ಶುಕ್ರವಾರ ಎತ್ತಿಹಿಡಿದಿದ್ದು ಕಾನೂನು ಹೋರಾಟದಲ್ಲಿ ಟಾಟಾ ಸಂಸ್ಥೆಗೆ ಬಹುದೊಡ್ಡ ಗೆಲುವು ದೊರೆತಂತಾಗಿದೆ. ಅಲ್ಲದೆ ಮಿಸ್ತ್ರಿಯನ್ನು ಅಧ್ಯಕ್ಷ ಸ್ಥಾನಕ್ಕೆ ಮರುನೇಮಿಸಬೇಕೆಂದು ಕಂಪೆನಿ ಕಾನೂನು ನ್ಯಾಯಮಂಡಳಿ ನೀಡಿದ್ದ ಆದೇಶವನ್ನೂ ಸುಪ್ರೀಂಕೋರ್ಟ್ ತಳ್ಳಿಹಾಕಿದೆ. ಸೈರಸ್ ಮಿಸ್ತ್ರಿಯನ್ನು ವಜಾಗೊಳಿಸುವ ನಿರ್ಧಾರ ಸರಿ. ಕಾನೂನಿಗೆ ಸಂಬಂಧಿಸಿದ ಎಲ್ಲಾ ಅಂಶಗಳೂ ಟಾಟಾ ಗ್ರೂಪ್ ಪರವಾಗಿಯೇ ಇದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೋಬ್ಡೆ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅಲ್ಲದೆ, ಸಂಸ್ಥೆಯ ಶೇರುಗಳಿಗೆ ಸಂಬಂಧಿಸಿದ ವ್ಯಾಜ್ಯವನ್ನು ಇತ್ಯರ್ಥಗೊಳಿಸಲು ಇತರ ಕಾನೂನು ಪ್ರಕ್ರಿಯೆಯತ್ತ ಗಮನ ಹರಿಸುವಂತೆ ರತನ್ ಟಾಟಾ ಮತ್ತು ಮಿಸ್ತ್ರಿ ಪರ ವಕೀಲರಿಗೆ ಸುಪ್ರೀಂಕೋರ್ಟ್ ಸೂಚಿಸಿದೆ. ಇದು ಸೋಲು ಅಥವಾ ಗೆಲುವಿನ ವಿಷಯವಲ್ಲ. ನಮ್ಮ ಸಮಗ್ರತೆ ಮತ್ತು ಸಮೂಹಸಂಸ್ಥೆಯ ನೈತಿಕ ನಡವಳಿಕೆಯ ಮೇಲಿನ ನಿರಂತರ ದಾಳಿಯ ಬಳಿಕ, ನಮ್ಮ ಸಂಸ್ಥೆಯ ನಿಲುವನ್ನು ಎತ್ತಿಹಿಡಿದಿರುವುದು ಸಂಸ್ಥೆ ಪಾಲಿಸಿಕೊಂಡು ಬಂದಿರುವ ನೈತಿಕತೆ ಮತ್ತು ಸಿದ್ಧಾಂತ ಮೌಲ್ಯಕ್ಕೆ ದೊರೆತ ಸಮರ್ಥನೆಯಾಗಿದೆ ಎಂದು ಟಾಟಾ ಸಂಸ್ಥೆಯ ಮಾಜಿ ಅಧ್ಯಕ್ಷ ರತನ್ ಟಾಟಾ ಟ್ವೀಟ್ ಮಾಡಿದ್ದಾರೆ. ರತನ್ ಟಾಟಾ ನಿವೃತ್ತರಾದ ಬಳಿಕ 2012ರಲ್ಲಿ ಟಾಟಾ ಸಮೂಹದ ಅಧ್ಯಕ್ಷರನ್ನಾಗಿ ಸೈರಸ್ ಮಿಸ್ತ್ರಿಯನ್ನು ನೇಮಿಸಲಾಗಿತ್ತು. ಆದರೆ 4 ವರ್ಷದ ಬಳಿಕ ಅವರನ್ನು ನಾಟಕೀಯವಾಗಿ ಅಧ್ಯಕ್ಷ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ರತನ್ ಟಾಟಾ ಮತ್ತು ಮಿಸ್ತ್ರಿ ನಡುವಿನ ಭಿನ್ನಾಭಿಪ್ರಾಯ ಇದಕ್ಕೆ ಕಾರಣ ಎನ್ನಲಾಗಿದೆ. ಇದನ್ನು ಪ್ರಶ್ನಿಸಿ ಮಿಸ್ತ್ರಿ ‘ನ್ಯಾಷನಲ್ ಲಾ ಅಪಲೆಟ್ ಟಿಬ್ಯುನಲ್(ಎನ್‌ಸಿಎಲ್‌ಎಟಿ)ಗೆ ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಟ್ರಿಬ್ಯುನಲ್, ಮಿಸ್ತ್ರಿಯನ್ನು ಸಮೂಹ ಸಂಸ್ಥೆಯ ಅಧ್ಯಕ್ಷರನ್ನಾಗಿ ಮರುನೇಮಿಸುವಂತೆ 2019ರ ಡಿಸೆಂಬರ್ 18ರಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಟಾಟಾ ಸಂಸ್ಥೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ಕಳೆದ ವರ್ಷದ ಡಿಸೆಂಬರ್ 17ರಂದು ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ್ದ ಸುಪ್ರೀಂಕೋರ್ಟ್ , ತೀರ್ಪು ಕಾಯ್ದಿರಿಸಿತ್ತು. ಇದೀಗ ತೀರ್ಪು ಟಾಟಾ ಸಂಸ್ಥೆಯ ಪರವಾಗಿ ಹೊರಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News