ಸಚಿನ್ ವಝೆ ಪ್ರಕರಣದಲ್ಲಿ ಎನ್ಐಎ ಸಾಕ್ಷ್ಯ ಮುಚ್ಚಿಡುತ್ತಿದೆ: ಕಾಂಗ್ರೆಸ್ ಆರೋಪ
ಮುಂಬೈ,ಮಾ.27: ಸಚಿನ್ ವಝೆ ಪ್ರಕರಣದಲ್ಲಿ ತನಿಖೆಯನ್ನು ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ಸಾಕ್ಷವನ್ನು ಮುಚ್ಚಿಡುತ್ತಿದೆ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಅವರು, ಕ್ರೈಂ ಬ್ರಾಂಚ್ ಎಪಿಐ ವಝೆಯವರ ಕಚೇರಿಯು ಆಗಿನ ಮುಂಬೈ ಪೊಲೀಸ್ ಆಯುಕ್ತ ಪರಮಬೀರ್ ಸಿಂಗ್ ಅವರ ಕಚೇರಿಯಿಂದ 200 ಅಡಿ ಅಂತರದಲ್ಲಿತ್ತು. ಸಿಂಗ್ ಜೊತೆ ನೇರ ಸಂಪರ್ಕಕ್ಕೆ ವಝೆಗೆ ಅವಕಾಶವಿತ್ತು. ಆದರೆ ಬಾಂಬ್ ಬೆದರಿಕೆ ಪ್ರಕರಣದಲ್ಲಿ ಸಿಂಗ್ ಅವರನ್ನು ಮತ್ತು ವಝೆಯವರ ಮೇಲಾಧಿಕಾರಿಗಳನ್ನು ಎನ್‌ಐಎ ತನಿಖೆಗೊಳಪಡಿಸಿಲ್ಲ. ಅದು ಉದ್ದೇಶಪೂರ್ವಕವಾಗಿ ಕೆಲವು ಸಾಕ್ಷಗಳನ್ನು ಮುಚ್ಚಿಡುತ್ತಿದೆ ಎಂದು ಆರೋಪಿಸಿದರು.
ಫೆ.25ರಂದು ಕೈಗಾರಿಕೋದ್ಯಮಿ ಮುಕೇಶ್ ಅಂಬಾನಿಯವರ ನಿವಾಸದ ಸಮೀಪ ಸ್ಫೋಟಕಗಳಿದ್ದ ವಾಹನ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಝೆಯವರನ್ನು ಎನ್‌ಐಎ ಬಂಧಿಸಿದೆ.
ಮಾ.5ರಂದು ಥಾಣೆ ಜಿಲ್ಲೆಯ ಕಲ್ವಾದ ಖಾಡಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದ ಥಾಣೆಯ ಉದ್ಯಮಿ ಮನ್ಸುಖ್ ಹಿರೇನ್ ಕೊಲೆಯಲ್ಲಿ ವಝೆ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ.