ಬಾಂಗ್ಲಾ ವಿಮೋಚಕರಿಗೆ ಚಹಾ ಪೂರೈಸಿರುವುದು ಯಾರು ಗೊತ್ತೇನು?

Update: 2021-03-27 19:30 GMT

ಬಾ ಂಗ್ಲಾ ದೇಶದ ವಿಮೋಚನೆಗಾಗಿ ಚೌಕೀದಾರರು ಸತ್ಯಾಗ್ರಹ ನಡೆಸಿದ್ದಾರೆ ಎನ್ನುವುದನ್ನು ಕೇಳಿ ಪತ್ರಕರ್ತ ಎಂಜಲು ಕಾಸಿ ಬೆಚ್ಚಿ ಬಿದ್ದ. ಚೌಕೀದಾರರೇ ಸ್ವತಃ ಬಾಂಗ್ಲಾದಲ್ಲಿ ಹೇಳಿರುವುದರಿಂದ ಮತ್ತು ಬಾಂಗ್ಲಾದ ಪ್ರಧಾನಿ ಅದನ್ನು ವೌನವಾಗಿ ಸಹಿಸಿರುವುದರಿಂದ ನಿಜವೇ ಇರಬೇಕು ಎಂದೆನಿಸಿ ಭಾವುಕನಾದ. ಗಾಂಧಿ ಭಾರತ ವಿಮೋಚನೆಗೆ ಸತ್ಯಾಗ್ರಹ ಮಾಡಿ ಜೈಲಿಗೆ ಹೋಗಿದ್ದರೆ, ಚೌಕೀದಾರರು ಬಾಂಗ್ಲಾದ ವಿಮೋಚನೆಗಾಗಿ ಸತ್ಯಾಗ್ರಹ ಮಾಡಿ ಜೈಲಿಗೆ ಹೋಗಿದ್ದಾರೆ. ಇಷ್ಟಾದರೂ ಚೌಕೀದಾರರು ಅದನ್ನು ಈವರೆಗೆ ಯಾರಲ್ಲೂ ಹೇಳದೆ ಮುಚ್ಚಿಟ್ಟುಕೊಂಡಿರುವುದು ಅವರ ದೊಡ್ಡತನ ಎನ್ನಿಸಿ, ಅವರ ಇಂಟರ್ಯೂಗೆ ಅಂಬಾನಿ ಮನೆ ಬಾಗಿಲಿಗೆ ಹೋದರೆ,

‘‘ಅವರು ಇಲ್ಲಿಲ್ಲ, ಬಂಗಾಳದ ಚುನಾವಣೆ ಬೂತ್‌ನ ಚೌಕೀದಾರಿಕೆಗೆ ಹೋಗಿದ್ದಾರೆ’’ ಎಂಬ ಉತ್ತರ ಸಿಕ್ಕಿತು. ಇನ್ನೇನು ಮಾಡುವುದು? ಎಂದು ಅತ್ತಿತ್ತ ಓಡಾಡುತ್ತಿದ್ದಾಗ, ಕಾಂಪೌಂಡ್ ಪಕ್ಕದಲ್ಲೇ ಮಿಕ್ಸಿ ರಿಪೇರಿ ಮಾಡುವವನ ಬಳಿಗೆ ಹೋದ. ಎಲ್ಲೋ ನೋಡಿದಂತಿದೆ. ‘‘ಸಾರ್...ನೀವು ಮಂಡ್ಯದ ವಿಜ್ಞಾನಿ ಡ್ರೋನ್ ಪ್ರತಾಪ ಅಲ್ಲವೇ?’’

ಕಾಸಿಯನ್ನು ನೋಡಿದ್ದೇ ‘‘ಹೌದು...ನಾನು ಸಂಶೋಧನೆಯಲ್ಲಿ ನಿರತನಾಗಿದ್ದೇನೆ....ದಯವಿಟ್ಟು ಹೋಗಿ. ಪತ್ರಕರ್ತರೆಲ್ಲ ಸೇರಿ ಒಬ್ಬ ವಿಜ್ಞಾನಿಯನ್ನು ಮಿಕ್ಸಿ ರಿಪೇರಿ ಮಾಡುವ ಮಟ್ಟಕ್ಕೆ ತಂದು ಹಾಕಿದರು. ಪ್ರತಿಭಾವಂತರಿಗೆ ಇಲ್ಲಿ ಕಾಲವಿಲ್ಲ. ನಾನೀಗ ಆತ್ಮನಿರ್ಭರ್ ಯೋಜನೆಯಡಿ ಮಿಕ್ಸಿ ರಿಪೇರಿ ಅಂಗಡಿ ಇಟ್ಟಿದ್ದೇನೆ....’’
 ‘‘ಸಾರ್...ನಿಮ್ಮ ಗುರುಗಳಾಗಿರುವ ಹೆಂಗ್ ಪುಂಗ್ಲಿ ಅವರು ಅರ್ಜೆಂಟಾಗಿ ಬೇಕಾಗಿತ್ತು. ಚೌಕೀದಾರರು ಬಾಂಗ್ಲಾ ವಿಮೋಚನೆಗೆ ಮಾಡಿದ ಸತ್ಯಾಗ್ರಹದ ಇತಿಹಾಸವನ್ನು ಅವರಿಂದ ಕೇಳಿ ಪಡೆಯಬೇಕಾಗಿತ್ತು...’’ ಕಾಸಿ ಕೇಳಿದ.

‘‘ಅವರು ಗುಜರಾತ್‌ಗೆ ಹೋಗಿದ್ದಾರೆ. ಬಾಂಗ್ಲಾ ವಿಮೋಚನೆಗಾಗಿ ಚೌಕೀದಾರರು ಸತ್ಯಾಗ್ರಹ ಮಾಡಿದ ಸ್ಥಳವನ್ನು ಗುರುತಿಸಿ ಬಿಗ್ರೇಡ್ ವತಿಯಿಂದ ಅದಕ್ಕೆ ‘ರೆಲ್ಲೋ ಪ್ಲೆಕ್ಸ್’ ಅಂಟಿಸಿ ಪ್ರವಾಸಿ ಸ್ಥಳವಾಗಿ ಘೋಷಣೆ ಮಾಡಲಿದ್ದಾರೆ. ಗುಜರಾತ್‌ನ ಯಾವುದಾದರೂ ರೈಲ್ವೆ ಸ್ಟೇಷನ್ ಪಕ್ಕ ಐತಿಹಾಸಿಕ ದಾಖಲೆಗಳಿಗಾಗಿ ಅವರು ಉತ್ಖನನ ಮಾಡುತ್ತಿರಬೇಕು...’’ ಡ್ರೋನ್ ಪ್ರತಾಪ ತಿಳಿಸಿದ. ಪಕ್ಕದಲ್ಲೇ ಇರುವ ಪಂಚತಾರ ಹೊಟೇಲಲ್ಲಿ ಯಾವುದೋ ಒಂದು ಮುಖ ಕಿಟಕಿಯಿಂದ ಇಣುಕಿದಂತಾಗಿ....ಅರೇ! ಅದು ಹೆಂಗ್ ಪುಂಗ್ಲಿ ಅಲ್ವಾ? ಎಂದು ಹೊಟೇಲ್‌ಗೇ ನುಗ್ಗಿದ. ಪೆಟ್ರೋಲ್ ಬೆಲೆಯೇರಿಕೆಯ ಲಾಭಗಳ ಬಗ್ಗೆ ಪುಂಗಿದ ದಿನದಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ತಲೆಮರೆಸಿಕೊಂಡು ಓಡಾಡುತ್ತಿರುವುದು ಕಾಸಿಗೂ ಗೊತ್ತಿತ್ತು.

‘‘ಸಾರ್...ನೀವೇನೂ ಇಲ್ಲಿ?’’ ಕಾಸಿ ಕೇಳಿದ.

‘‘ನಿಮಗೆ ಗೊತ್ತೇನು? ಚೌಕೀದಾರರು ಬಾಂಗ್ಲಾ ವಿಮೋಚನೆಗೆ ಹೋರಾಡಿದ ಕಥನವನ್ನು ಸಂಶೋಧನೆ ಮಾಡುತ್ತಿದ್ದೇನೆ. ಈಗಾಗಲೇ ಗೂಗಲ್‌ನಲ್ಲಿ 100 ಅಡಿ ಉತ್ಖನನ ಮಾಡಿದ್ದೇನೆೆ....ಅಪಾರ ಮಾಹಿತಿಗಳು ಸಿಕ್ಕಿವೆ....ಇದು ಭಾರತ ಮತ್ತು ಬಾಂಗ್ಲಾ ನಡುವಿನ ಸಂಬಂಧಕ್ಕೆ ಬಹುದೊಡ್ಡ ಕೊಡುಗೆಯಾಗುತ್ತೇರಿ....’’ ಹೆಂಗ್ ಪುಂಗ್ಲಿ ವಿವರಿಸಿದರು.

‘‘ಸಾರ್...ಉತ್ಖನನದಲ್ಲಿ ಏನೇನು ಸಿಕ್ಕಿವೆೆ ....’’ ಕಾಸಿ ಕುತೂಹಲದಿಂದ ಕೇಳಿದ.

‘‘ಬಾಂಗ್ಲಾ ವಿಮೋಚನೆಯ ಹೋರಾಟಗಾರರಿಗೆ ಚಹಾವನ್ನು ಪೂರೈಸಿರುವುದು ಚೌಕೀದಾರು ಎನ್ನುವುದು ಗೊತ್ತಾಗಿದೆ. ಒಮ್ಮೆ ಬಾಂಗ್ಲಾ ವಿಮೋಚನಾಗಾರರು ಇವರ ಟೀ ಅಂಗಡಿಯಲ್ಲಿ ಚಹಾ ಕುಡಿಯಲು ಬಂದರಂತೆ. ಚಹಾ ಕುಡಿದು ‘ಅಚ್ಛಾ...’ ಎಂದುಊ ಅವರು ದುಡ್ಡು ಕೊಡಲು ಹೊರಟಾಗ ಈ ಪುಟ್ಟ ಬಾಲಕ ಏನೆಂದರು ಗೊತ್ತೇನು.... ನೀವು ಬಾಂಗ್ಲಾ ವಿಮೋಚಕರು. ಪಾಕಿಸ್ತಾನದ ವಿರುದ್ಧ ಹೋರಾಡುತ್ತಿದ್ದೀರಿ. ಚಹಾ ನಿಮ್ಮ ಹೋರಾಟಕ್ಕೆ ನನ್ನ ಅಲ್ಪ ಕಾಣಿಕೆ ಎಂದರಂತೆ....’’ ಹೆಂಗ್ ಪುಂಗ್ಲಿ ಅವರು ಪುಂಗ ತೊಡಗಿದರು.

‘‘ಸಾರ್...ಅವರು ಸತ್ಯಾಗ್ರಹ ಮಾಡಿ ಜೈಲಿಗೆ ಹೋದರಂತಲ್ಲ....?’’

 ‘‘ಒಂದು ವಾರ ಉಪವಾಸ ಸತ್ಯಾಗ್ರಹ ಮಾಡಿದರು. ಇವರ ಉಪವಾಸ ಸತ್ಯಾಗ್ರಹಕ್ಕೆ ಪಾಕಿಸ್ತಾನ ಬೆವರಿ ಬಿಟ್ಟಿತು. ಹೀಗೆ ಬಿಟ್ಟರೆ ಬಾಂಗ್ಲಾ ವಿಮೋಚನೆಯಾಗುತ್ತದೆ ಎಂದು ಗೊತ್ತಾಗಿ ತಕ್ಷಣ ಅವರನ್ನು ಬಂಧಿಸಿತು....’’ ಪುಂಗ್ಲಿ ಭಾವುಕರಾಗಿ ಕಣ್ಣೀರು ಹಾಕತೊಡಗಿದರು.

‘‘ಸಾರ್...ಅವರು ಪಾಕಿಸ್ತಾನಕ್ಕೆ ಹೋಗಿ ಸತ್ಯಾಗ್ರಹ ಮಾಡಿದ್ದೋ...ಗುಜರಾತ್‌ನಲ್ಲಿ ಸತ್ಯಾಗ್ರಹ ಮಾಡಿದ್ದೋ...’’

  ‘‘ಎಲ್ಲಿ ಮಾಡಿದರೇನು ಅವರು ಸತ್ಯಾಗ್ರಹ ಮಾಡಿದ್ದಾರೆ....ಮತ್ತು ಜೈಲಿಗೆ ಹೋಗಿದ್ದಾರೆ ಎನ್ನುವುದು ಮುಖ್ಯ...’’ ಹೆಂಗ್ ಪುಂಗ್ಲಿ ಗಟ್ಟಿ ಧ್ವನಿಯಲ್ಲಿ ಹೇಳಿದರು.

‘‘ಯಾವ ಜೈಲಿನಲ್ಲಿ ಅವರನ್ನು ಬಂಧಿಸಿಡಲಾಗಿತ್ತು ಸಾರ್?’’ ಕಾಸಿ ಕೇಳಿದ.

‘‘ಅವರನ್ನು ಬಂಧಿಸಿಟ್ಟ ಜೈಲು ಈಗ ಪಾಕಿಸ್ತಾನದಲ್ಲಿದೆ. ಅದನ್ನು ಅಂತರ್‌ರಾಷ್ಟ್ರೀಯ ಸ್ಮಾರಕವಾಗಿ ಮಾರ್ಪಡಿಸಬೇಕು ಎಂದು ಸದ್ಯದಲ್ಲೇ ವಿಶ್ವಸಂಸ್ಥೆಯ ಮುಂದೆ ದೇಶ ಮನವಿ ಮಾಡಲಿದೆ....’’ ಪುಂಗ್ಲಿ ತಿಳಿಸಿದರು.

‘‘ಆದರೆ ಇಂದಿರಾ ಗಾಂಧಿ ಸೇನೆ ಕಳುಹಿಸಿ ಬಾಂಗ್ಲಾ ವಿಮೋಚನೆಗೆ ಸಹಕರಿಸಿದರು ಎಂದು ಹೇಳುತ್ತಾರಲ್ಲ?’’ ಕಾಸಿ ಅನುಮಾನ ವ್ಯಕ್ತಪಡಿಸಿದ.

‘‘ಸುಭಾಶ್ಚಂದ್ರ ಬೋಸರು ಮಾರು ವೇಷದಲ್ಲಿ ಜರ್ಮನಿ ತಲುಪಿದ ಹಾಗೆ, ಚೌಕೀದಾರರು ಮಾರು ವೇಷದಲ್ಲಿ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ನಮೋ ಬ್ರಿಗೇಡ್ ಸಿದ್ಧಪಡಿಸಿ ಗುಟ್ಟಾಗಿ ಹೋರಾಟ ನಡೆಸಿದರು. ಅವರ ಸೇನೆಯಲ್ಲಿ ನಾನು ಕೆಲವು ಸಮಯ ಕೆಲಸ ಮಾಡಿದ್ದೇನೆ....ನಮ್ಮ ಬ್ರಿಗೇಡ್‌ನಲ್ಲಿರುವ ಎಲ್ಲರೂ ಬಾಂಗ್ಲಾ ವಿಮೋಚನೆಗೆ ಹೋರಾಟ ಮಾಡಿದ್ದಾರೆ. ನಮಗೆಲ್ಲರಿಗೂ ಸ್ವಾತಂತ್ರ ಹೋರಾಟದ ಪಿಂಚಣಿಯನ್ನು ನೀಡಬೇಕು ಎಂದು ನಾವು ಸರಕಾರವನ್ನು ಒತ್ತಾಯಿಸುತ್ತಿದ್ದೇವೆ.....’’

‘‘ನಿಮಗೆ ಸ್ವಾತಂತ್ರ ಹೋರಾಟದ ಪಿಂಚಣಿಯನ್ನು ಬಾಂಗ್ಲಾ ನೀಡಬೇಕೋ? ಭಾರತ ನೀಡಬೇಕೋ?’’ ಕಾಸಿ ಅರ್ಥವಾಗದೇ ಕೇಳಿದ.

‘‘ಯಾರು ಕೊಟ್ಟರೂ ತೊಂದರೆಯಿಲ್ಲ. ಕೊಟ್ಟರೆ ಸಾಕು ಅಥವಾ ಪ್ರಧಾನಿಯವರ ಕೊರೋನಾ ಪರಿಹಾರ ನಿಧಿಯಿಂದ ಕೊಟ್ಟರೂ ಆಗಬಹುದು...’’ ಪುಂಗ್ಲಿ ಉತ್ತರಿಸಿದರು.

‘‘ಸಾರ್...ಚೌಕೀದಾರರು ಭಾರತದ ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗಿರುವ ಬಗ್ಗೆ ಯಾವುದಾದರೂ ದಾಖಲೆ ಇದೆಯೇ?’’ ಕಾಸಿ ಆಸೆಯಿಂದ ಕೇಳಿದ.

‘‘ಮುಂದಿನ ದಿನಗಳಲ್ಲಿ ಅದನ್ನು ಚೌಕೀದಾರರೇ ಬಹಿರಂಗಪಡಿಸಲಿದ್ದಾರೆ. ಅದಕ್ಕಾಗಿಯೂ ನಮ್ಮ ಬ್ರಿಗೇಡ್‌ನಿಂದ ಗೂಗಲ್ ಉತ್ಖನನ ನಡೆಯುತ್ತಿದೆ. ಫೇಕ್ ಐಟಿ ಪಡೆಯೂ ಕಾರ್ಯಾಚರಣೆಯನ್ನು ನಡೆಸುತ್ತಿದೆ....ವಿವರಗಳು ಸಿಕ್ಕಿದಾಕ್ಷಣ ನಿಮಗೆ ತಲುಪಿಸುತ್ತೇವೆ....’’ ಪುಂಗ್ಲಿ ಭರವಸೆ ನೀಡಿದರು.

‘‘ಬಾಂಗ್ಲಾವನ್ನು ವಿಮೋಚನೆಗೊಳಿಸಿ ಭಾರತಕ್ಕೆ ಮರಳಿ ಸೇರಿಸಬಹುದಿತ್ತಲ್ಲ ಚೌಕೀದಾರರು...ಅಖಂಡ ಭಾರತದ ಭಾಗವಾಗಿ ಬಿಡುತ್ತಿತ್ತಲ್ಲ?’’ ಕಾಸಿ ಮತ್ತೆ ಅನುಮಾನ ವ್ಯಕ್ತಪಡಿಸಿದ.

‘‘ಚೌಕೀದಾರರು ಮಾರುವೇಷದಲ್ಲಿ ಹೋದ ಉದ್ದೇಶವೇ ಅದಾಗಿತ್ತು. ಆದರೆ ಇಂದಿರಾ ಗಾಂಧಿ ಬಿಡಲಿಲ್ಲ. ಅವರು ಚೌಕೀದಾರರ ಪ್ರಯತ್ನವನ್ನು ವಿಫಲಗೊಳಿಸಿದರು....’’ ಪುಂಗ್ಲಿ ಕರುಳು ಕಿತ್ತು ಬರುವಂತೆ ಗೋಳಾಡತೊಡಗಿದರು. ಎಲ್ಲಿ ತನ್ನ ಕಿಡ್ನಿ ಕಿತ್ತು ಬಂದಿತೋ ಎಂದು ಹೆದರಿದ ಕಾಸಿ ಅಲ್ಲಿಂದ ಕಾಲ್ಕಿತ್ತ.

Writer - ಚೇಳಯ್ಯ chelayya@gmail.com

contributor

Editor - ಚೇಳಯ್ಯ chelayya@gmail.com

contributor

Similar News