ಮಹಾರಾಷ್ಟ್ರದಲ್ಲಿ ಎರಡನೇ ಸಂಪೂರ್ಣ ಲಾಕ್‌ಡೌನ್ ಸಾಧ್ಯತೆ
ಮುಂಬೈ:ಮಹಾರಾಷ್ಟ್ರದಲ್ಲಿ ಕೋವಿಡ್ -19 ಪ್ರಕರಣಗಳು ಕ್ಷಿಪ್ರವಾಗಿ ಹೆಚ್ಚುತ್ತಿರುವ ಕಾರಣ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ರಾಜ್ಯದಲ್ಲಿ ಎರಡನೇ ಸಂಪೂರ್ಣ ಲಾಕ್ ಡೌನ್ ಹೇರಲು ಯೋಜನೆ ರೂಪಿಸುವಂತೆ ಅಧಿಕಾರಿಗಳನ್ನು ಕೋರಿದ್ದಾರೆ.
ಮಹಾರಾಷ್ಟ್ರದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿ ತ್ವರಿತ ಏರಿಕೆ ಮತ್ತು ಆಸ್ಪತ್ರೆಯ ಹಾಸಿಗೆಗಳು ಮತ್ತು ಆರೋಗ್ಯ ಸೌಲಭ್ಯಗಳ ಅಸಮರ್ಪಕತೆಯ ನಡುವೆಯೂ ಮುಂದಿನ ಕೆಲವು ದಿನಗಳಲ್ಲಿ ಎರಡನೇ ಸಂಪೂರ್ಣ ಲಾಕ್‌ಡೌನ್ ಹೇರಲು ರಾಜ್ಯ ಸರಕಾರ ಗಂಭೀರವಾಗಿ ಚಿಂತಿಸುತ್ತಿದೆ.
ಈ ನಿಟ್ಟಿನಲ್ಲಿ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಯೋಜಿತ ರೀತಿಯಲ್ಲಿ ಕ್ರಮ ಕೈಗೊಳ್ಳಲು ಹಾಗೂ ಕಾರ್ಯವಿಧಾನಗಳನ್ನು ಸಿದ್ಧಪಡಿಸುವಂತೆ ಅಧಿಕಾರಿಗಳನ್ನು ಕೋರಿದ್ದಾರೆ.
ರವಿವಾರ ನಡೆದ ಸಭೆಯಲ್ಲಿ, ಮಹಾರಾಷ್ಟ್ರದಲ್ಲಿ ಎರಡನೇ ಲಾಕ್ ಡೌನ್ ವಿಧಿಸಿದರೆ ಆಹಾರ ಧಾನ್ಯಗಳು, ಔಷಧಿಗಳು, ಅಗತ್ಯ ಸೇವೆಗಳು ಮತ್ತು ವೈದ್ಯಕೀಯ ಸೌಲಭ್ಯಗಳ ಪೂರೈಕೆಯ ಕುರಿತು ಯೋಜನೆ ತಯಾರಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಯಿತು. ಸಾಂಕ್ರಾಮಿಕ ಸಮಯದಲ್ಲಿ ಆರ್ಥಿಕತೆಯನ್ನು ಉತ್ತಮಪಡಿಸಲು ಸರಕಾರ ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದ್ದರೂ ಸಹ, ಜನರ ಆರೋಗ್ಯವನ್ನು ಕಾಪಾಡುವುದು ತನ್ನ ಆದ್ಯತೆಯಾಗಿದೆ ಎಂದು ಠಾಕ್ರೆ ಹೇಳಿದ್ದಾರೆ.