ಮತಗಟ್ಟೆ ಏಜೆಂಟ್ ನಿಯೋಜನೆ ನಿಯಮ ಹಿಂಪಡೆಯುವಂತೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಟಿಎಂಸಿ ಪತ್ರ

Update: 2021-03-28 18:26 GMT

ಹೊಸದಿಲ್ಲಿ, ಮಾ. 28: ಮತಗಟ್ಟೆ ಏಜೆಂಟ್ ನಿಯೋಜನೆಯಲ್ಲಿ ನಿಯಮ ಸಡಿಲಗೊಳಿಸಿದ ಇತ್ತೀಚೆಗಿನ ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿ ತೃಣಮೂಲ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಅಲ್ಲದೆ, ಬಿಜೆಪಿಗೆ ನೆರವಾಗಲು ಚುನಾವಣಾ ಆಯೋಗ ಈ ಕ್ರಮ ತೆಗೆದುಕೊಂಡಿದೆ ಎಂದು ಆರೋಪಿಸಿದೆ.

 ಚುನಾವಣಾ ಆಯೋಗದ 2009 ಮಾರ್ಚ್‌ನ ನಿಯಮದ ಪ್ರಕಾರ ಸ್ಪರ್ಧಿಸುತ್ತಿರುವ ಅಭ್ಯರ್ಥಿ ನಿಯೋಜಿಸುವ ಮತಗಟ್ಟೆ ಏಜೆಂಟ್ ಅದೇ ಮತಗಟ್ಟೆಯ ಮತದಾರನಾಗಿರಬೇಕು ಅಥವಾ ಅದೇ ಕ್ಷೇತ್ರದ ನೆರೆಯ ಮತಗಟ್ಟೆಯ ಮತದಾರನಾಗಿರಬೇಕು.

 ಆದರೆ, ವಿಧಾನ ಸಭಾ ಕ್ಷೇತ್ರದ ಯಾವುದೇ ಭಾಗದ ಮತದಾರನನ್ನು ಮತಗಟ್ಟೆ ಏಜೆಂಟ್ ಆಗಿ ನಿಯೋಜಿಸುವುದಕ್ಕೆ ಅವಕಾಶ ನೀಡುವಂತೆ ನಿಯಮಕ್ಕೆ ತಿದ್ದುಪಡಿ ಮಾಡಲಾಗಿದೆ.

ಬಿಜೆಪಿಯ ಅಭ್ಯರ್ಥಿಗೆ ಲಾಭ ಮಾಡುವ ಉದ್ದೇಶದಿಂದ ನೂತನ ಸೂಚನೆ ನೀಡಲಾಗಿದೆ ಎಂದು ತೃಣಮೂಲ ಕಾಂಗ್ರೆಸ್‌ನ ಪತ್ರ ಪ್ರತಿಪಾದಿಸಿದೆ.

ಪಶ್ಚಿಮಬಂಗಾಳದಲ್ಲಿ ಚುನಾವಣೆ ನಡೆಯಲಿರುವ ದಿನಾಂಕಕ್ಕಿಂತ ಮುನ್ನ ಚುನಾವಣಾ ಆಯೋಗ ಇಂತಹ ಸೂಚನೆಗಳನ್ನು ಜಾರಿ ಮಾಡಿರುವುದು ನಿರಂಕುಶ, ಪ್ರೇರಿತ ಹಾಗೂ ಪಕ್ಷಪಾತ ಎಂದು ಅದು ಆರೋಪಿಸಿದೆ. ಅಲ್ಲದೆ, ಈ ನಿಯಮವನ್ನು ಹಿಂಪಡೆಯುವಂತೆ ಹಾಗೂ ಈ ಹಿಂದಿನ ನಿಯಮವನ್ನು ಮರು ಜಾರಿಗೊಳಿಸುವಂತೆ ಆಗ್ರಹಿಸಿದೆ. ಕೋಲ್ಕತಾದಲ್ಲಿ ಮುಖ್ಯ ಚುನಾವಣಾ ಅಧಿಕಾರಿ ಆರಿಝ್ ಅಫ್ತಾಬ್ ಅವರೊಂದಿಗೆ ಶನಿವಾರ ನಡೆದ ಮಾತುಕತೆ ಸಂದರ್ಭ ಸಂಸದ ಸುದೀಪ್ ಬಂದೋಪಾಧ್ಯಾಯ ನೇತೃತ್ವದ ಟಿಎಂಸಿ ನಿಯೋಗ ಈ ಬಗ್ಗೆ ಪ್ರಶ್ನೆ ಎತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News