ಮ್ಯಾನ್ಮಾರ್ ನಿರಾಶ್ರಿತರಿಗೆ ಆಹಾರ, ಆಸರೆ ಕೊಡಬೇಡಿ : ಮಣಿಪುರ ಸರ್ಕಾರ ಆದೇಶ

Update: 2021-03-30 05:57 GMT

ಗುವಾಹತಿ: ಮ್ಯಾನ್ಮಾರ್ ನಿರಾಶ್ರಿತರಿಗೆ ಸ್ಥಳೀಯ ಸಂಸ್ಥೆಗಳು ಅಥವಾ ನಾಗರಿಕ ಸಮಾಜ ಆಹಾರ ಅಥವಾ ಆಶ್ರಯ ನೀಡುವುದನ್ನು ನಿಷೇಧಿಸಿ ಮಣಿಪುರ ಸರ್ಕಾರ ಆದೇಶ ಹೊರಡಿಸಿದೆ.

ಈ ಆದೇಶದ ಪ್ರಕಾರ ತೀವ್ರ ಗಾಯಾಳುಗಳಿಗೆ "ಮಾನವೀಯತೆ ಆಧಾರದಲ್ಲಿ" ವೈದ್ಯಕೀಯ ಚಿಕಿತ್ಸೆ ಮಾತ್ರ ನೀಡಬಹುದಾಗಿದೆ. ಈ ಆದೇಶವನ್ನು ಚಂಡೇಲ್, ತೆಂಗುನೋಪಾಲ್, ಕಾಮಜೊಂಗ್, ಉಖ್ರೂಲ್ ಮತ್ತು ಚುರಾಚಂದಪುರ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದ್ದು, "ಮ್ಯಾನ್ಮಾರ್ ಪ್ರಜೆಗಳು ಅಕ್ರಮವಾಗಿ ಗಡಿಯೊಳಕ್ಕೆ ನುಸುಳದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು" ಎಂದು ಆದೇಶಿಸಲಾಗಿದೆ.

ದೇಶದಲ್ಲಿ ಮಾನವೀಯ ಸಂಘರ್ಷ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ನಿರಾಶ್ರಿತರಿಗೆ ಆಶ್ರಯ ಕಲ್ಪಿಸಬೇಕು ಎಂದು ವಿಶ್ವಸಂಸ್ಥೆಯ ಮ್ಯಾನ್ಮಾರ್ ರಾಯಭಾರಿ ಮನವಿ ಮಾಡಿದ್ದರು. "ಉಭಯ ದೇಶಗಳು ಸುಧೀರ್ಘ ಇತಿಹಾಸ ಹಂಚಿಕೊಂಡಿದ್ದು, ಇದನ್ನು ಮರೆಯದಿರೋಣ" ಎಂದು ಮನವಿ ಮಾಡಿದ್ದಾರೆ.

ದೇಶದ ಒಂಬತ್ತು ನಾಗರಿಕ ಪ್ರದೇಶಗಳಲ್ಲಿ ಪ್ರತಿಭಟನಾಕಾರರ ಮೇಲೆ ಮ್ಯಾನ್ಮಾರ್ ಸೇನಾ ಸರ್ಕಾರ ಗುಂಡು ಹಾರಿಸಿದ ಹಿನ್ನೆಲೆಯಲ್ಲಿ ನೆರೆರಾಷ್ಟ್ರದಿಂದ ದೊಡ್ಡ ಸಂಖ್ಯೆಯ ನಿರಾಶ್ರಿತರು ಭಾರತದ ಗಡಿಯೊಳಕ್ಕೆ ನುಸುಳಬಹುದು ಎಂದು ನಿರೀಕ್ಷಿಸಲಾಗಿದೆ. ಯಂಗೂನ್ ಸೇರಿದಂತೆ ವಿವಿಧೆಡೆ ನಡೆದ ಗುಂಡಿನ ದಾಳಿಯಲ್ಲಿ ಮಕ್ಕಳೂ ಸೇರಿದಂತೆ 90ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ನಿರಾಶ್ರಿತರಿಗೆ ಆಹಾರ ಅಥವಾ ಆಸರೆ ನೀಡುವ ಉದ್ದೇಶದಿಂದ ಜಿಲ್ಲಾಡಳಿತವಾಗಲೀ, ನಾಗರಿಕ ಸಮಾಜ ಸಂಘಟನೆಗಳಾಗಲೀ ಯಾವುದೇ ಶಿಬಿರಗಳನ್ನು ಆರಂಭಿಸಬಾರದು ಎಂದು ಸೂಚಿಸಲಾಗಿದೆ. ಆಸರೆ ಬಯಸುವ ಅಥವಾ ಪ್ರವೇಶಿಸಲು ಪ್ರಯತ್ನಿಸುವ ನಿರಾಶ್ರಿತರನ್ನು ವಿನಯದಿಂದ ವಾಪಾಸು ಕಳುಹಿಸಿ ಎಂದು ಆದೇಶದಲ್ಲಿ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News