×
Ad

ಗುರುದ್ವಾರದಲ್ಲಿ ಕತ್ತಿ ಝಳಪಿಸುತ್ತಾ ಮುನ್ನುಗ್ಗಿದ ಯುವಕರ ಗುಂಪು: ನಾಲ್ವರು ಪೊಲೀಸರಿಗೆ ಗಾಯ

Update: 2021-03-30 13:07 IST
photo: ANI

ಮುಂಬೈ: ಮಹಾರಾಷ್ಟ್ರದಲ್ಲಿ ಏರುತ್ತಿರುವ ಕೋವಿಡ್  ಪ್ರಕರಣಗಳ ಹಿನ್ನೆಲೆಯಲ್ಲಿ ಪೊಲೀಸರು ಧಾರ್ಮಿಕ ಮೆರವಣಿಗೆ ನಿಷೇಧಿಸಿದ್ದನ್ನು ಪ್ರತಿಭಟಿಸಿ ನಾಂದೇಡ್‍ನ ಗುರುದ್ವಾರ ಒಂದರಲ್ಲಿ ಸೋಮವಾರ ಸಂಜೆ ಕೈಗಳಲ್ಲಿ ಕತ್ತಿಗಳೊಂದಿಗೆ ಬ್ಯಾರಿಕೇಡ್‍ ಗಳನ್ನು ಮುರಿದು ಮುನ್ನುಗ್ಗಿದ ಸಿಖ್ ಪ್ರತಿಭಟನಾಕಾರರು ಪೊಲೀಸರ ಮೇಲೆ ದಾಳಿ ನಡೆಸಿದ ಪರಿಣಾಮ ನಾಲ್ವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಪ್ರಕರಣ ಸಂಬಂಧ ಸುಮಾರು 18 ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೈಗಳಲ್ಲಿ ಕತ್ತಿಗಳನ್ನು ಝಳಪಿಸುತ್ತಾ ದೊಡ್ಡ ಸಂಖ್ಯೆಯ ಜನರು ಬ್ಯಾರಿಕೇಡ್ ಹಾಕಿ ನಿಂತಿದ್ದ ಪೊಲೀಸರತ್ತ ಮುನ್ನುಗ್ಗುತ್ತಿರುವ ದೃಶ್ಯ ಭಯ ಹುಟ್ಟಿಸುತ್ತದೆ. ಗಾಯಾಳುಗಳ ಪೈಕಿ ಓರ್ವ ಪೊಲೀಸ್ ಅಧಿಕಾರಿಯೂ ಸೇರಿದ್ದು ಕೆಲ ಪೊಲಿಸ್ ವಾಹನಗಳಿಗೂ  ಘಟನೆ ವೇಳೆ ಹಾನಿಯಾಗಿದೆ.

ಕೋವಿಡ್ ನಿರ್ಬಂಧಗಳ ಹಿನ್ನೆಲೆಯಲ್ಲಿ ʼಹೊಲ ಮೊಹಲ್ಲʼ ಮೆರವಣಿಗೆಗೆ ಅನುಮತಿಯಿಲ್ಲ ಎಂದು ಪೊಲೀಸರು ಮುಂಚಿತವಾಗಿಯೇ ಗುರುದ್ವಾರ ಆಡಳಿತಕ್ಕೆ ತಿಳಿಸಿದ್ದರು ಹಾಗೂ ಆಡಳಿತ ಮಂಡಳಿಯೂ ಇದಕ್ಕೆ ಒಪ್ಪಿತ್ತು.

ಸಂಜೆ 4 ಗಂಟೆಗೆ ಸರಳ ಸಮಾರಂಭ ಆರಂಭಗೊಳ್ಳುತ್ತಿದ್ದಂತೆಯೇ ತಾಳ್ಮೆ ಕಳೆದುಕೊಂಡ  ಕೆಲ ಯುವಕರು ಇಂತಹ ಕೃತ್ಯ ಎಸಗಿದ್ದಾರೆಂದು ಆರೋಪಿಸಲಾಗಿದೆ. ಸಂಪ್ರದಾಯದಂತೆ ಹೊಲ ಮೊಹಲ್ಲ ಮೆರವಣಿಗೆಯಲ್ಲಿ ಸಿಖ್ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News