"ರಾಹುಲ್‌ ಗಾಂಧಿ ಮಹಿಳಾ ಕಾಲೇಜ್‌ ಗಳಿಗೆ ಮಾತ್ರ ತೆರಳುತ್ತಾರೆ": ಅವಮಾನಕಾರಿ ಹೇಳಿಕೆ ನೀಡಿದ ಮಾಜಿ ಸಂಸದ

Update: 2021-03-30 10:34 GMT

ಇಡುಕ್ಕಿ: ಎರ್ನಾಕುಲಂನಲ್ಲಿರುವ ಸೈಂಟ್‌ ತೆರೇಸಾ ಮಹಿಳಾ ಕಾಲೇಜ್‌ ಗೆ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ತೆರಳಿದ ಕುರಿತು ಮಾಜಿ ಸಂಸದ ಜಾಯ್ಸ್‌ ಜಾರ್ಜ್‌ ಅವಹೇಳನಕಾರಿ ಮಾತುಗಳನ್ನಾಡಿದ್ದು, ಸದ್ಯ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಇದೀಗ ಈ ಕುರಿತಾದಂತೆ ಮಾತನಾಡಿದ ಸಿಎಂ ಪಿಣರಾಯಿ ವಿಜಯನ್‌ "ವೈಯಕ್ತಿಕ ದಾಳಿಗೆ ನಮ್ಮ ಸಹಮತವಿಲ್ಲ" ಎಂದು ಹೇಳಿಕೆ ನೀಡಿದ್ದಾರೆ.

ಕೇರಳದ ಉಡುಂಬಂಚೋಳ ಎಂಬಲ್ಲಿ ನಡೆದ ಎಲ್ಡಿಎಫ್ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ್ದ ಜಾಯ್ಸ್‌ ಜಾರ್ಜ್‌, "ರಾಹುಲ್‌ ಗಾಂಧಿ ಮದುವೆಯಾಗದ ವ್ಯಕ್ತಿಯಾಗಿರುವುದರಿಂದ ವಿದ್ಯಾರ್ಥಿನಿಯರು ಅವರ ಮುಂದೆ ವ್ಯಾಯಾಮ ಮಾಡುವಾಗ ಎಚ್ಚರಿಕೆಯಿಂದಿರಬೇಕು. ರಾಹುಲ್‌ ಗಾಂಧಿ ಕೇವಲ ಮಹಿಳಾ ಕಾಲೇಜುಗಳಿಗೆ ಮಾತ್ರ ತೆರಳುತ್ತಾರೆ. ಅಲ್ಲಿ ತಲುಪಿದ ಬಳಿಕ ವಿದ್ಯಾರ್ಥಿನಿಯರನ್ನು ವ್ಯಾಯಾಮದ ಹೆಸರಿನಲ್ಲಿ ಬಾಗಲು, ವಕ್ರವಾಗಲು ಕಲಿಸುತ್ತಾರೆ" ಎಂದು ಹೇಳಿಕೆ ನೀಡಿದ್ದರು.

ಮಾರ್ಚ್‌ ೨೨ರಂದು ರಾಹುಲ್‌ ಗಾಂಧಿ ಸೈಂಟ್‌ ಥೆರೇಸಾ ಕಾಲೇಜಿಗೆ ಹೋಗಿದ್ದ ಸಂದರ್ಭ ಜಪಾನ್‌ ನ ಸಮರಕಲೆ ಐಕಿಡೋದ ಕೆಲವು ಪಟ್ಟುಗಳನ್ನು ವಿದ್ಯಾರ್ಥಿನಿಯರಿಗೆ ಕಲಿಸಿದ್ದರು.

ಈ ಕುರಿತಾದಂತೆ ಮಾತನಾಡಿದ ಪಿಣರಾಯಿ ವಿಜಯನ್‌ "ರಾಹುಲ್‌ ಗಾಂಧಿಯ ರಾಜಕೀಯವನ್ನಷ್ಟೇ ನಾವು ವಿರೋಧಿಸುತ್ತೇವೆ. ನಾವು ಯಾವುದೇ ಕಾರಣಕ್ಕೂ ಅವರ ವೈಯಕ್ತಿಕ ಜೀವನವನ್ನು ಅವಹೇಳನ ಮಾಡುವುದಕ್ಕೆ ಸಹಮತ ವ್ಯಕ್ತಪಡಿಸುವುದಿಲ್ಲ" ಎಂದು ಹೇಳಿಕೆ ನೀಡಿದ್ದರು. ಸಿಪಿಎಂ ಕೂಡಾ ಈ ಕುರಿತಾದಂತೆ ಅಧಿಕೃತ ಹೇಳಿಕೆ ನೀಡಿತ್ತು.

ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್‌ ಮುಖಂಡರು, ಜಾಯ್ಸ್‌ ರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ʼಅಸಹ್ಯಕರ ಟೀಕೆಗಳನ್ನುʼ ಮಾಡಿದ್ದಕ್ಕಾಗಿ ಅವರನ್ನು ಬಂಧಿಸಬೇಕೆಂದು ರಮೇಶ್‌ ಚೆನ್ನಿತ್ತಲ ಹೇಳಿಕೆ ನೀಡಿದ್ದಾರೆ. ಇನ್ನು ಕೋಟ್ಟಯಂನಲ್ಲಿ ಮಾತನಾಡಿದ ಮಾಜಿ ಸಿಎಂ ಉಮ್ಮನ್‌ ಚಾಂಡಿ, "ಕೇರಳದಂತಹ ರಾಜ್ಯದಲ್ಲಿ ಇಂತಹಾ ಹೇಳಿಕೆಗಳು ಬರಬಾರದು. ಮಹಿಳೆಯರಿಗೆ ಉನ್ನತ ಸ್ಥಾನಮಾನ ನೀಡುವ ರಾಜ್ಯವೆಂದೇ ಕೇರಳ ಪ್ರಸಿದ್ಧಿಯಾಗಿದೆ"ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News