×
Ad

ಏಸುಕ್ರಿಸ್ತನಿಗೆ ಜೂದಸ್‌ ದ್ರೋಹಗೈದಂತೆ ಪಿಣರಾಯಿ ಕೇರಳಕ್ಕೆ ದ್ರೋಹ ಮಾಡುತ್ತಿದ್ದಾರೆ: ನರೇಂದ್ರ ಮೋದಿ

Update: 2021-03-30 16:16 IST

ತಿರುವನಂತಪುರಂ: "ಬೆಳ್ಳಿಯ ಕೆಲ ತುಂಡುಗಳಿಗಾಗಿ ಏಸು ಕ್ರಿಸ್ತನಿಗೆ ಜುಡಾಸ್ ವಿಶ್ವಾಸದ್ರೋಹಗೈದಿದ್ದ.  ಎಲ್‍ಡಿಎಫ್ ಕೂಡ ಕೆಲ ಚಿನ್ನದ ತುಂಡುಗಳಿಗಾಗಿ ಕೇರಳದ ಜನತೆಯ ವಿಶ್ವಾಸದ್ರೋಹಗೈದಿದೆ" ಎಂದು  ಪಾಲಕ್ಕಾಡ್‍ನಲ್ಲಿ ಇಂದು ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಕೇರಳದ ಚಿನ್ನದ ಸ್ಮಗ್ಲಿಂಗ್ ಹಗರಣವನ್ನು ಉಲ್ಲೇಖಿಸಿ ಹೇಳಿದರು.

"ಯುಡಿಎಫ್ ಹಾಗೂ ಎಲ್‍ಡಿಎಫ್ ನಡುವಿನ ಸ್ನೇಹಮಯ ಒಪ್ಪಂದವು ಹಲವು ವರ್ಷಗಳ ಕಾಲ ಕೇರಳ ರಾಜಕೀಯದ ಅತ್ಯಂತ ಕೆಟ್ಟ ರಹಸ್ಯವಾಗಿತ್ತು. ಈಗ ಕೇರಳದ ಪ್ರಥಮ ಬಾರಿಯ ಮತದಾರರು `ಇದೆಂತಹ ಮ್ಯಾಚ್ ಫಿಕ್ಸಿಂಗ್?' ಎಂದು ಕೇಳುತ್ತಿದ್ದಾರೆ. ಐದು ವರ್ಷ ಒಬ್ಬರು ಲೂಟಿಗೈದರೆ ಇನ್ನೈದು ವರ್ಷ ಇನ್ನೊಬ್ಬರು ಲೂಟಿಗೈಯ್ಯುತ್ತಾರೆ. ರೈತರ ಅಭಿವೃದ್ಧಿಗಾಗಿ ನಾವು ಉತ್ತಮ ಹೆಜ್ಜೆಗಳನ್ನು ಕೈಗೊಂಡಿದ್ದೇವೆ. ರೈತರಿಗಾಗಿ ಇದುವರೆಗೆ ಹೆಚ್ಚಿಸದ ಕನಿಷ್ಠ ಬೆಂಬಲ ಬೆಲೆಯನ್ನು ನಾವು ಹೆಚ್ಚಿಸಿದ್ದೇವೆ" ಎಂದು ಮೋದಿ ಹೇಳಿದರು.

"ಎರಡೂ ರಂಗಗಳು ಹಣ ಮಾಡುವ ಕ್ಷೇತ್ರಗಳನ್ನು ಗುರುತಿಸಿಕೊಂಡಿವೆ. ಯುಡಿಎಫ್ ಸೂರ್ಯನ ಕಿರಣಗಳನ್ನೂ ಬಿಟ್ಟಿಲ್ಲ" ಎಂದು ಅವರು ಹೇಳಿದರು.

ಪಾಲಕ್ಕಾಡ್‍ನಿಂದ ಬಿಜೆಪಿ ಟಿಕೆಟ್‍ನಿಂದ ಸ್ಪರ್ಧಿಸುತ್ತಿರುವ 88 ವರ್ಷದ ಮೆಟ್ರೋ ಮ್ಯಾನ್ ಇ ಶ್ರೀಧರನ್ ಅವರನ್ನು ಉಲ್ಲೇಖಿಸಿದ ಪ್ರಧಾನಿ "ಮೆಟ್ರೋ ಮ್ಯಾನ್ ಶ್ರೀಧರನ್ ಜೀ ಅವರು ಭಾರತವನ್ನು ಆಧುನೀಕರಿಸಲು ಹಾಗೂ ಸಂಪರ್ಕಗಳನ್ನು ಸುಧಾರಿಸಲು ಮಹತ್ವದ ಕೆಲಸ ಮಾಡಿದ್ದಾರೆ. ಅವರನ್ನು ಎಲ್ಲಾ ವರ್ಗದ ಜನರು  ಗೌರವಿಸುತ್ತಾರೆ ಹಾಗೂ ಅವರು ಕೇರಳದ ಪ್ರಗತಿಗೆ ತಮ್ಮನ್ನು ಮುಡಿಪಾಗಿಸಿದ್ದಾರೆ. ಕೇರಳದ ನೈಜ ಪುತ್ರನಾಗಿ ಅವರು ಅಧಿಕಾರದಾಚೆ ಯೋಚಿಸಿ ಕೇರಳಕ್ಕಿರುವ ತಮ್ಮ ಬದ್ಧತೆಗೆ ಅಂಟಿಕೊಂಡಿದ್ದಾರೆ" ಎಂದು ವೇದಿಕೆಯಲ್ಲಿದ್ದ ಶ್ರೀಧರನ್ ಅವರನ್ನು ಮೋದಿ ಹೊಗಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News