"ಪಿಣರಾಯಿ ಸರ್ಕಾರವು ನಿಜವಾದ ಚಿನ್ನವಾಗಿರುವ ಕೇರಳದ ಜನರನ್ನು ಗುರುತಿಸುವಲ್ಲಿ ವಿಫಲವಾಗಿದೆ"

Update: 2021-03-30 13:36 GMT

ಕೊಲ್ಲಂ: ಪಕ್ಷದ "ಕಮ್ಯುನಿಸ್ಟ್ ಮ್ಯಾನಿಫೆಸ್ಟೋ" ವಾಸ್ತವವಾಗಿ "ಕಾರ್ಪೊರೇಟ್ ಮ್ಯಾನಿಫೆಸ್ಟೋ" ಆಗಿ ಮಾರ್ಪಟ್ಟಿದೆ ಮತ್ತು ಅವರು ತಮ್ಮ ಭರವಸೆಗಳನ್ನು ಉಳಿಸಿಕೊಂಡಿಲ್ಲ ಎಂದು ಕೇರಳದ ಪಿಣರಾಯಿ ನೇತೃತ್ವದ ಎಲ್ಡಿಎಫ್ ಸರ್ಕಾರವನ್ನು ಕಾಂಗ್ರೆಸ್ ಮುಖಂಡ ಪ್ರಿಯಾಂಕಾ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೊಲ್ಲಂ ಮತ್ತು ಕುಂದರಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳಾದ ಬಿಂದು ಕೃಷ್ಣ ಮತ್ತು ಪಿಸಿ ವಿಶ್ವನಾಥ್ ಅವರನ್ನು ಬೆಂಬಲಿಸಲು ಕರುನಾಗಪಲ್ಲಿಗೆ ಆಗಮಿಸಿದ ನಂತರ ಅವರು ಕೊಲ್ಲಂನಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಕಳೆದ ವರ್ಷದಲ್ಲಿ ಅನೇಕ ಸಿಪಿಎಂ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದ ಚಿನ್ನದ ಕಳ್ಳಸಾಗಣೆ ಪ್ರಕರಣದಕುರಿತು ಮಾತನಾಡಿದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ, "ಕೇರಳ ಸರ್ಕಾರವು ಕೇರಳದ ನಿಜವಾದ ಚಿನ್ನವಾಗಿರುವ ಕೇರಳದ ಜನರನ್ನು ಗುರುತಿಸುವಲ್ಲಿ ವಿಫಲವಾಗಿದೆ" ಎಂದು ಆರೋಪಿಸಿದರು.

"ಬದಲಾಗಿ, ಅವರು ವಿದೇಶಿ ಚಿನ್ನ ಮತ್ತು ಚಿನ್ನದ ಕಳ್ಳಸಾಗಣೆ ಹಾಗೂ ಬಹುರಾಷ್ಟ್ರೀಯ ಕಂಪನಿಗಳಿಗೆ ಮೀನುಗಾರಿಕೆ ಒಪ್ಪಂದಗಳನ್ನು ನೀಡುವಲ್ಲಿ ವ್ಯಸ್ತರಾಗಿದ್ದರು" ಎಂದು ಅವರು ಹೇಳಿದರು. ಅಮೆರಿಕದ ಕಂಪನಿ ಇಎಂಸಿಸಿ ಇಂಟರ್‌ನ್ಯಾಷನಲ್ ‌ನೊಂದಿಗಿನ ಕೇರಳ ಸರ್ಕಾರದ ಒಪ್ಪಂದವನ್ನು ಉಲ್ಲೇಖಿಸಿ ಪ್ರಿಯಾಂಕಾ ಮಾತನಾಡಿದರು.

ಕೇರಳ ಸರ್ಕಾರವನ್ನು "ಬಹುತೇಕ ಫ್ಯಾಸಿಸ್ಟ್" ಎಂದು ಕರೆದ ಕಾಂಗ್ರೆಸ್ ನಾಯಕಿ, "ನೀವು  ಧ್ವನಿ ಎತ್ತಲು ಪ್ರಯತ್ನಿಸಿದಾಗ, ಅದನ್ನು ಸರಕಾರವು ನಿಗ್ರಹಿಸಲು ಪ್ರಯತ್ನಿಸುತ್ತದೆ. ಸರ್ಕಾರದ ವಂಚನೆಗಳ ಕುರಿತು ಪ್ರಶ್ನಿಸಿದಾಗ, ಈ ಕುರಿತು ನಿಮಗೆ ಉತ್ತರಿಸುವುದಿಲ್ಲ ಎಂದು ಸಿಎಂ ಹೇಳುತ್ತಾರೆ" ಎಂದು ಪ್ರಿಯಾಂಕಾ ಆಕ್ರೋಶ ವ್ಯಕ್ತಪಡಿಸಿದರು.

ಒಟ್ಟು ಎರಡು ದಿನಗಳಲ್ಲಿ ತ್ರಿಶೂರ್, ಕೊಲ್ಲಂ ಮತ್ತು ತಿರುವನಂತಪುರಂಗಳಲ್ಲಿ ಪ್ರಿಯಾಂಕಾ ಗಾಂಧಿ ಪ್ರಚಾರ ನಡೆಸಲಿದ್ದಾರೆ. ಇನ್ನೊಂದೆಡೆ, ಪ್ರಧಾನಿ ನರೇಂದ್ರ ಮೋದಿಯೂ ಕೇರಳದಲ್ಲಿ ರ್ಯಾಲಿ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News