"ಪ್ರಧಾನಿಯ ಬಾಂಗ್ಲಾ ಭೇಟಿಯು ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ": ಚುನಾವಣಾ ಆಯೋಗಕ್ಕೆ ಪತ್ರ ಬರೆದ ಟಿಎಂಸಿ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯ ಇತ್ತೀಚಿಗಿನ ಬಾಂಗ್ಲಾದೇಶ ಭೇಟಿ ಪಶ್ಚಿಮ ಬಂಗಾಳ ಚುನಾವಣೆ ಸಂಬಂಧ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಹಾಗೂ ಆ ದೇಶದಲ್ಲಿ ಪ್ರಧಾನಿಯ ಕೆಲ ಕಾರ್ಯಕ್ರಮಗಳು ರಾಜ್ಯದ ಕೆಲ ಕ್ಷೇತ್ರಗಳಲ್ಲಿ ಮತದಾನದ ಮೇಲೆ ಪ್ರಭಾವ ಬೀರುವ ಉದ್ದೇಶ ಹೊಂದಿದ್ದವು ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.
ಮಾರ್ಚ್ 28ರಂದು ಬರೆಯಲಾಗಿರುವ ಈ ಪತ್ರವನ್ನು ತೃಣಮೂಲ ಕಾಂಗ್ರೆಸ್ ಇಂದು ಬಿಡುಗಡೆಗೊಳಿಸಿದೆ. ಟಿಎಂಸಿಯ ರಾಷ್ಟ್ರೀಯ ವಕ್ತಾರ ಹಾಗೂ ರಾಜ್ಯಸಭಾ ಸಂಸದ ಡೆರೆಕ್ ಒ'ಬ್ರಿಯೆನ್ ಈ ಪತ್ರ ಬರೆದಿದ್ದಾರೆ.
"ಬಾಂಗ್ಲಾದೇಶ ವಿಮೋಚನೆಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದ್ದರಿಂದ ಪ್ರಧಾನಿಯ ಬಾಂಗ್ಲಾ ಭೇಟಿಗೆ ಪಕ್ಷದ ವಿರೋಧವಿಲ್ಲದೇ ಇದ್ದರೂ ಮಾರ್ಚ್ 27ರಂದು ಬಾಂಗ್ಲಾದೇಶದಲ್ಲಿ ಪ್ರಧಾನಿಯ ಕಾರ್ಯಕ್ರಮಗಳು ಬಾಂಗ್ಲಾದೇಶ ಸ್ವಾತಂತ್ರ್ಯೋತ್ಸವದ 50ನೇ ವರ್ಷಾಚರಣೆಗೆ ಹಾಗೂ ಬಂಗಬಂಧು ಅವರ ಜನ್ಮಶತಮಾನೋತ್ಸವಕ್ಕೆ ಸಂಬಂಧವಿರಲಿಲ್ಲ, ಬದಲು ಪಶ್ಚಿಮ ಬಂಗಾಳದ ಕೆಲ ಕ್ಷೇತ್ರಗಳ ಮತದಾನದ ಮೇಲೆ ಪ್ರಭಾವ ಬೀರುವ ಉದ್ದೇಶ ಹೊಂದಿತ್ತು. ವಿದೇಶಿ ನೆಲದಲ್ಲಿ ತಮ್ಮ ಪಕ್ಷಕ್ಕಾಗಿ ಪರೋಕ್ಷ ಪ್ರಚಾರದಲ್ಲಿ ತೊಡಗಿ ಈ ರೀತಿ ಯಾವುದೇ ಭಾರತೀಯ ಪ್ರಧಾನಿ ಈ ಹಿಂದೆ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿಲ್ಲ ಹಾಗು ಅಪ್ರಜಾಸತ್ತಾತ್ಮಕ ಕಾರ್ಯದಲ್ಲಿ ತೊಡಗಿರಲಿಲ್ಲ" ಎಂದು ಪತ್ರದಲ್ಲಿ ಬರೆಯಲಾಗಿದೆ.
"ಪ್ರಧಾನಿ ತಮ್ಮ ಜತೆ ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ಶಂತನು ಠಾಕೂರ್ ಅವರನ್ನು ಕರೆದುಕೊಂಡು ಹೋಗಿರುವುದು ಅವರ ಭೇಟಿಯ ಹಿಂದಿನ ರಾಜಕೀಯ ಉದ್ದೇಶವನ್ನು ಬಹಿರಂಗಗೊಳಿಸಿದೆ" ಎಂದೂ ಪತ್ರದಲ್ಲಿ ಬರೆಯಲಾಗಿದೆ.