ಭಾರತದ ಹಣದುಬ್ಬರವು ಆತಂಕಕಾರಿ ಮಟ್ಟದಲ್ಲಿ ಹೆಚ್ಚಳವಾಗಿದೆ: ಮೂಡೀಸ್ ವರದಿ

Update: 2021-03-30 18:14 GMT
ಫೈಲ್ ಚಿತ್ರ

ಹೊಸದಿಲ್ಲಿ,ಮಾ.30: ಭಾರತದಲ್ಲಿ ಹಣದುಬ್ಬರವು ಆತಂಕಕಾರಿ ಮಟ್ಟದಲ್ಲಿ ಹೆಚ್ಚಳವಾಗಿದೆಯೆಂದು ಜಾಗತಿಕ ಹಣಕಾಸು ವಿಶ್ಲೇಷಣಾ ಸಂಸ್ಥೆ ‘ಮೂಡೀಸ್ ಅನಾಲಿಟಿಕ್ಸ್’ ಮಂಗಳವಾರ ತಿಳಿಸಿದೆ.

ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಭಾರೀ ಏರಿಕೆಯು ಚಿಲ್ಲರೆ ಹಣದುಬ್ಬರದ ಮೇಲೆ ಗಂಭೀರ ಪರಿಣಾಮ ಬೀರಿದೆ. ಹಣದುಬ್ಬರದಲ್ಲಿನ ತೀವ್ರ ಹೆಚ್ಚಳದಿಂದಾಗಿ ಆರ್‌ಬಿಐ ರೆಪೊ (ಬ್ಯಾಂಕುಗಳಿಗೆ ಆರ್‌ಬಿಐ ನೀಡುವ ಸಾಲದ ಮೇಲಿನ ಬಡ್ಡಿ) ದರ ಕಡಿತವನ್ನು ಮುಂದುವರಿಸುವಂತಹ ಪರಿಸ್ಥಿತಿಯನ್ನು ಸೃಷ್ಟಿಸಿದೆ ಎಂದು ಮೂಡೀಸ್ ವರದಿ ತಿಳಿಸಿದೆ.

 ಈ ವರ್ಷದ ಜನವರಿ ಶೇ.4.1ರಷ್ಟಿದ್ದ ಚಿಲ್ಲರೆ ಹಣದುಬ್ಬರ ದರವು ಫೆಬ್ರವರಿಯಲ್ಲಿ ಶೇ.5ಕ್ಕೆ ಏರಿದೆ. ಭಾರತದ ಹಣಕಾಸು ನೀತಿಯನ್ನು ರಿಸರ್ವ್ ಬ್ಯಾಂಕ್ ಚಿಲ್ಲರೆ ಹಣದುಬ್ಬರ ದರವನ್ನು ಮುಖ್ಯವಾಗಿ ಪರಿಗಣನೆಗೆ ತೆಗೆದುಕೊಳ್ಳುತ್ತದೆ.

  ಈ ವರ್ಷದ ಜನವರಿಯಲ್ಲಿ ಶೇ.5.3ರಷ್ಟಿದ್ದ ಪ್ರಮುಖ ಹಣದುಬ್ಬರವು (ಆಹಾರ, ಇಂಧನ ಹಾಗೂ ವಿದ್ಯುತ್ ಹೊರತುಪಡಿಸಿ ) ಫೆಬ್ರವರಿ ವೇಳೆಗೆ 5.6ಕ್ಕೆ ಏರಿಕೆಯಾಗಿದೆ ಎಂದು ಮೂಡೀಸ್ ಹೇಳಿದೆ ಹಾಗೂ ಭಾರತದ ಹಣದುಬ್ಬರ ಪರಿಸ್ಥಿತಿಯು ಆತಂಕಾರಿ ಮಟ್ಟದಲಲಿದೆ ಎಂದು ಕಳವಳ ವ್ಯಕ್ತಪಡಿಸಿದೆ.

  ಏಶ್ಯದ ಬಹುತೇಕ ದೇಶಗಳಲ್ಲಿ ಹಣದುಬ್ಬರವು ದರ ಕಡಿಮೆಯಾಗಿದೆ. ಆದರೆ ಭಾರತ ಮತ್ತು ಫಿಲಿಪ್ಪೀನ್ಸ್ ಇದಕ್ಕೆ ಅಪವಾದವಾಗಿವೆ. ಈ ದೇಶಗಳಲ್ಲಿ ಹಣದುಬ್ಬರವು ಸಮಾಧಾನಕರ ಮಟ್ಟಕ್ಕಿಂತ ಅಧಿಕವಾಗಿದ್ದು,ಅವುಗಳ ನಿಯಂತ್ರಣ ಆಡಳಿತಗಾರರಿಗೆ ಸವಾಲಾಗಿ ಪರಿಣಮಿಸಿದೆ ಎಂದು ಅದು ಹೇಳಿದೆ.

   ಭಾರತದ ಹಣದುಬ್ಬರವು ಕಳವಳಕಾರಿಯೆಂದು ಪುನರುಚ್ಚರಿಸಿರುವ ಮೂಡೀಸ್, ಆಹಾರದರಗಳಲ್ಲಿ ತೀವ್ರ ಏರಿಕೆ ಹಾಗೂ ತೈಲ ಬೆಲೆಗಳಲ್ಲಿ ಹೆಚ್ಚಳದಿಂದಾಗಿ 2020ರಲ್ಲಿ ಚಿಲ್ಲರೆ ಹಣದುಬ್ಬರವು ಹಲವಾರು ಬಾರಿ ಶೇ.6ರ ಗಡಿಯನ್ನು ದಾಟಿದ್ದು, ಕೊರೋನ ಸೋಂಕಿನ ಉತ್ತುಂಗದ ಸಮಯದಲ್ಲಿ ಆರ್ಥಿಕತೆಯನ್ನು ಸಹಜಸ್ಥಿತಿಯಲ್ಲಿಡುವ ಆರ್‌ಬಿಐನ ಸಾಮರ್ಥ್ಯವನ್ನು ಪ್ರತಿಬಂಧಿಸಿದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News