ವಶಪಡಿಸಿಕೊಳ್ಳಲಾದ ಇಲೆಕ್ಟ್ರಾನಿಕ್ಸ್ ಸಾಧನಗಳ ಕುರಿತು ಮಾರ್ಗದರ್ಶನ ಕೋರಿ ಶಿಕ್ಷಣ ತಜ್ಞರ ಮನವಿ

Update: 2021-03-30 18:20 GMT

ಹೊಸದಿಲ್ಲಿ, ಮಾ. 30: ವೈಯುಕ್ತಿಕ ಡಿಜಿಟಲ್, ಇಲೆಕ್ಟ್ರಾನಿಕ್ಸ್ ಸಾಧನಗಳು ಹಾಗೂ ಅದರ ಅಂಶಗಳ ವಶ, ಪರೀಕ್ಷೆ ಹಾಗೂ ಸಂರಕ್ಷಣೆ ಕುರಿತು ಪೊಲೀಸರು ಹಾಗೂ ತನಿಖಾ ಸಂಸ್ಥೆಗಳಿಗೆ ನಿರ್ದಿಷ್ಟ ಮಾರ್ಗಸೂಚಿ ನಿರ್ದೇಶನ ನೀಡುವಂತೆ ಕೋರಿ ಐವರು ಶಿಕ್ಷಣ ತಜ್ಞರು ಸಲ್ಲಿಸಿದ ಮನವಿಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸು ಜಾರಿ ಮಾಡಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕಿಷನ್ ಕೌಲ್ ಹಾಗೂ ಆರ್ ಸುಭಾಶ್ ರೆಡ್ಡಿ ಅವರನ್ನೊಳಗೊಂಡ ಪೀಠ ಮಾರ್ಚ್ 26ರಂದು ನೋಟಿಸು ಜಾರಿ ಮಾಡಿದೆ. ಅಲ್ಲದೆ, ನಾಲ್ಕು ವಾರಗಳ ಒಳಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶಿಸದೆ. ಕೇಂದ್ರ ಸರಕಾರದ ಪ್ರತಿಕ್ರಿಯೆ ದೊರಕಿದ ಬಳಿಕ ಇದೇ ರೀತಿಯ ನೋಟಿಸನ್ನು ರಾಜ್ಯ ಸರಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಲ್ಲಿಸಬೇಕೇ ಬೇಡವೇ ಎಂಬ ಬಗ್ಗೆ ನ್ಯಾಯಾಲಯ ನಿರ್ಧರಿಸಲಿದೆ. ಇಲೆಕ್ಟ್ರಾನಿಕ್ ಅಥವಾ ಡಿಜಿಟಲ್ ರೂಪದಲ್ಲಿರುವ ಅಂಶಗಳನ್ನು ಮರು ಪಡೆಯಲು ಕಾನೂನು ಅಥವಾ ಪೊಲೀಸ್ ಕೈಪಿಡಿಯಲ್ಲಿ ಯಾವುದೇ ಕಾನೂನನ್ನು ಕಡ್ಡಾಯಗೊಳಿಸಿಲ್ಲ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.

ಇತ್ತೀಚೆಗಿನ ವರ್ಷಗಳಲ್ಲಿ ತನಿಖಾ ಸಂಸ್ಥೆ ಶಿಕ್ಷಣ ಕ್ಷೇತ್ರದ ಹಲವು ವ್ಯಕ್ತಿಗಳ ಸಾಧನಗಳನ್ನು ವಶಪಡಿಸಿಕೊಂಡಿರುವುದನ್ನು ಉಲ್ಲೇಖಿಸಿರುವ ಮನವಿ, ಇದರಿಂದ ಸಂಶೋಧನ ಕೆಲಸ ನಷ್ಟವಾಗಲು ಕಾರಣವಾಗುತ್ತಿದೆ ಎಂದು ಪ್ರತಿಪಾದಿಸಿದೆ. ಶೈಕ್ಷಣಿಕ ಸಮುದಾಯವು ತನ್ನ ಸಂಶೋಧನೆ ಹಾಗೂ ಬರವಣಿಗೆಯನ್ನು ಇಲೆಕ್ಟ್ರಾನಿಕ್ಸ್ ಅಥವಾ ಡಿಜಿಟಲ್ ಮಾಧ್ಯಮದಲ್ಲಿ ಮಾಡುತ್ತದೆ ಹಾಗೂ ಸಂಗ್ರಹಿಸುತ್ತದೆ. ಇಲೆಕ್ಟ್ರಾನಿಕ್ಸ್ ಸಾಧನಗಳನ್ನು ವಶಪಡಿಸಿಕೊಳ್ಳುವ ಸಂದರ್ಭ ಶೈಕ್ಷಣಿಕ ಅಥವಾ ಸಾಹಿತ್ಯಕ ಕೆಲಸಗಳು ಅವಧಿಪೂರ್ವ ಬಹಿರಂಗ, ನಷ್ಟ, ಹಾನಿ ಉಂಟಾಗುವ ಅಪಾಯ ಇರುವುದು ಪರಿಶೀಲನೆಗೆ ಅರ್ಹವಾದುದು ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಶೈಕ್ಷಣಿಕ ಸ್ವಾತಂತ್ರ ಸಂವಿಧಾನದ ಮಾತು ಮತ್ತು ಅಭಿವ್ಯಕ್ತಿ ಸ್ವಾತಂತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಶಿಕ್ಷಣ ತಜ್ಞರು ಇಲೆಕ್ಟ್ರಾನಿಕ್ಸ್ ಸಾಧನಗಳಲ್ಲಿ ಸಂಗ್ರಹಿಸಿದ ಅಂಶಗಳ ಹಿಂದೆ ದಶಕಗಳ ಕಾಲಗಳ ವ್ಯಾಪಕ ಕ್ಷೇತ್ರ ಕಾರ್ಯ ಇರುತ್ತದೆ ಎಂದು ಮನವಿ ಪ್ರತಿಪಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News