“ಕೊರೋನ ನಿಯಮ ಉಲ್ಲಂಘಿಸುವ ಪ್ರಯಾಣಿಕರಿಗೆ ಸ್ಥಳದಲ್ಲೇ ದಂಡ ವಿಧಿಸುವ ಬಗ್ಗೆ ಪರಿಶೀಲಿಸಿ”

Update: 2021-03-30 18:23 GMT

ಹೊಸದಿಲ್ಲಿ, ಮಾ. 30: ಮಾಸ್ಕ್ ಧರಿಸುವಿಕೆ ಹಾಗೂ ಸುರಕ್ಷಿತ ಅಂತರ ಕಾಯ್ದುಕೊಳ್ಳುವಿಕೆಯಂತಹ ಕೊರೋನ ವೈರಸ್‌ಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಅನುಸರಿಸದೇ ಇರುವವರಿಗೆ ಪೊಲೀಸರ ನೆರವಿನಿಂದ ಸ್ಥಳದಲ್ಲೇ ದಂಡ ವಿಧಿಸುವ ಬಗ್ಗೆ ಪರಿಶೀಲಿಸಿ ಎಂದು ನಾಗರಿಕ ವಿಮಾನ ಯಾನದ ಪ್ರಧಾನ ನಿರ್ದೇಶನಾಲಯ (ಡಿಜಿಸಿಎ) ಮಂಗಳವಾರ ವಿಮಾನ ನಿಲ್ದಾಣಗಳಿಗೆ ಸೂಚಿಸಿದೆ.

ಕೋವಿಡ್ -19 ಶಿಷ್ಟಾಚಾರವನ್ನು ಉಲ್ಲಂಘಿಸುವುದನ್ನು ನಿಯಂತ್ರಿಸುವ ಸಲುವಾಗಿ ಕಾನೂನಿಗೆ ಅನುಗುಣವಾಗಿ ಸ್ಥಳದಲ್ಲೇ ದಂಡ ವಿಧಿಸುವಂತಹ ದಂಡನಾತ್ಮಕ ಕ್ರಮ ತೆಗೆದುಕೊಳ್ಳುವ ಸಾಧ್ಯತೆಯ ಬಗ್ಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಡಿಜಿಸಿಎ ಸುತ್ತೋಲೆ ತಿಳಿಸಿದೆ. ಕೊರೋನ ವೈರಸ್ ನಿಯಮಗಳನ್ನು ಅನುಸರಿಸುವ ಬಗ್ಗೆ ಖಾತರಿ ನೀಡಲು ಕಣ್ಗಾವಲು ಹೆಚ್ಚಿಸಲು ವಿಮಾನ ನಿಲ್ದಾಣಗಳಿಗೆ ಡಿಜಿಸಿಎ ಈ ನಿರ್ದೇಶನಗಳನ್ನು ನೀಡಿದೆ.

ಕೆಲವು ವಿಮಾನ ನಿಲ್ದಾಣಗಳಲ್ಲಿ ಕಣ್ಗಾವಲಿನ ಸಂದರ್ಭ ಕೊರೋನ ವೈರಸ್ ಶಿಷ್ಟಾಚಾರದ ಅನುಸರಣೆ ತೃಪ್ತಿಪಕರವಾಗಿ ಕಂಡು ಬಂದಿಲ್ಲ ಎಂದು ಸುತ್ತೋಲೆ ಹೇಳಿದೆ. ಮಾರ್ಚ್ 13 ಹಾಗೂ 15ರಂದು ಹೊರಡಿಸಲಾದ ಡಿಜಿಸಿಎಯ ಆದೇಶವನ್ನು ವಿಮಾನ ನಿಲ್ದಾಣಗಳು ಹಾಗೂ ವಿಮಾನ ಯಾನ ಸಂಸ್ಥೆಗಳು ಅನುಸರಿಸದ ಹಿನ್ನೆಲೆಯಲ್ಲಿ ಈ ಹೊಸ ನಿರ್ದೇಶನಗಳನ್ನು ಜಾರಿಗೊಳಿಸಲಾಗಿದೆ ಎಂದು ಸುತ್ತೋಲೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News