ಪ.ಬಂಗಾಳ: ಗುರುವಾರ ನಂದಿಗ್ರಾಮದಲ್ಲಿ ಮತದಾನ

Update: 2021-03-31 18:15 GMT

ಕೋಲ್ಕತಾ, ಮಾ.31: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಅತ್ಯಂತ ಪ್ರತಿಷ್ಠಿತ ಮತ್ತು ಕುತೂಹಲ ಹುಟ್ಟಿಸಿರುವ ಕ್ಷೇತ್ರವಾದ ನಂದಿಗ್ರಾಮ ವಿಧಾನಸಭೆ ಕ್ಷೇತ್ರಕ್ಕೆ ಗುರುವಾರ(ಎಪ್ರಿಲ್ 1) ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಬಿಗು ಭದ್ರತೆ ವ್ಯವಸ್ಥೆಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಟಿಎಂಸಿ ನಾಯಕಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿಯ ಸುವೇಂದು ಅಧಿಕಾರಿ ನಡುವಿನ ಜಿದ್ದಾಜಿದ್ದಿನ ಹೋರಾಟದ ಕಣವಾಗಿರುವ ನಂದಿಗ್ರಾಮದಲ್ಲಿ ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆಯಾಗದಂತೆ ಭಾರೀ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಮತದಾರರು ಭೀತಿಯಿಲ್ಲದೆ ಮುಕ್ತವಾಗಿ ಮತ ಚಲಾಯಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ಹೆಲಿಕಾಪ್ಟರ್ ಮೂಲಕ ಗಸ್ತು ನಡೆಸಿದ್ದಾರೆ. ಇದು ಅತ್ಯಂತ ಸೂಕ್ಷ್ಮ ಕ್ಷೇತ್ರವಾಗಿರುವುದರಿಂದ ಇಲ್ಲಿಯ ಮತದಾರರಲ್ಲದ ಯಾವುದೇ ವ್ಯಕ್ತಿಗೂ ಕೇತ್ರದ ಒಳಗೆ ಪ್ರವೇಶಿಸಲು ಅವಕಾಶವಿಲ್ಲ.

ಕ್ಷೇತ್ರದ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಐದು ಅಥವಾ ಹೆಚ್ಚು ಜನ ಗುಂಪು ಸೇರುವಂತಿಲ್ಲ ಎಂದು ಸೂಚಿಸಲಾಗಿದೆ. ಕೇಂದ್ರ ಪಡೆಗಳ 22 ತುಕಡಿಗಳನ್ನು ನಿಯೋಜಿಸಲಾಗಿದೆ. ನಂದಿಗ್ರಾಮ ಕ್ಷೇತ್ರದಲ್ಲಿರುವ 355 ಮತಗಟ್ಟೆಗಳಲ್ಲಿ 75ಶೇ. ಮತಗಟ್ಟೆಗಳಲ್ಲಿ ನೇರಪ್ರಸಾರದ ವ್ಯವಸ್ಥೆಯಿದೆ. ಪ್ರದೇಶದ ಪ್ರಮುಖ ಗಡಿ ಕೇಂದ್ರಗಳಲ್ಲಿ ಪೊಲೀಸರು ಈಗಾಗಲೇ ತಪಾಸಣೆ ಕಾರ್ಯ ಆರಂಭಿಸಿದ್ದಾರೆ. ವಾಹನಗಳನ್ನು ಕೂಲಂಕುಷ ತಪಾಸಣೆಯ ಬಳಿಕವೇ ನಂದಿಗ್ರಾಮ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತದೆ.

ಗಲಭೆ ಸೃಷ್ಟಿಸಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಗುರುವಾರ 22 ಸದಸ್ಯರನ್ನು ಹೊಂದಿರುವ ಕ್ಷಿಪ್ರ ಕಾರ್ಯಪಡೆಯನ್ನು ಸ್ಥಳದಲ್ಲಿ ನಿಯೋಜಿಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಬಂಧನದ ವಾರಂಟ್ ಪಡೆದವರನ್ನು ಬುಧವಾರ ರಾತ್ರಿಯೊಳಗೆ ಬಂಧಿಸುವಂತೆ ಚುನಾವಣಾ ಆಯೋಗ ಸ್ಥಳೀಯ ಆಡಳಿತಕ್ಕೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News