ಮಹಿಳೆಯರ ವೇತನರಹಿತ ಮನೆ ದುಡಿಮೆಯ ಹೊರೆಗೆ ಏನು ಪರಿಹಾರ?

Update: 2021-03-31 18:58 GMT

ವಿಶ್ವದ ಎಲ್ಲೆಡೆ ಮಹಿಳೆಯರು ವೇತನರಹಿತ ಕೆಲಸದ ದುಡಿಮೆಯ ಹೊರೆ ಹೊರುತ್ತಾರೆ. ಮನೆಗೆಲಸಗಳು ಮಕ್ಕಳ ಹಾಗೂ ಹಿರಿಯರ ಆರೈಕೆ ಮಾಡುವುದೇ ಈ ವೇತನ ರಹಿತ ದುಡಿಮೆ. ಮನೆಗಳ ಮಟ್ಟದಲ್ಲಿ ಹಾಗೂ ಸಾಮೂಹಿಕವಾಗಿ ರಾಷ್ಟ್ರಮಟ್ಟದಲ್ಲಿ ಈ ದುಡಿಮೆ ಒಟ್ಟು ಸಮಾಜದ ಒಳಿತಿಗೆ ಕಲ್ಯಾಣಕ್ಕೆ ತನ್ನ ಕೊಡುಗೆಯನ್ನು ನೀಡುತ್ತದಾದರೂ, ರಾಷ್ಟ್ರೀಯ ದತ್ತಾಂಶಗಳಲ್ಲಿ ಹಾಗೂ ನಿರ್ದಿಷ್ಟವಾಗಿ ರಾಷ್ಟ್ರೀಯ ನೀತಿಗಳಲ್ಲಿ ಇದು ಕಾಣಿಸುವುದೇ ಇಲ್ಲ.

 ಇದು ಪ್ರತಿಫಲ, ವೇತನ, ಭಡ್ತಿಗಳು ಅಥವಾ ನಿವೃತ್ತಿ ಸವಲತ್ತುಗಳು ಯಾವುದೂ ಇಲ್ಲದ 24 ಗಂಟೆಗಳ ಒಂದು ನೌಕರಿ. ಇದು ದೇಶದ ಅರ್ಥ ವ್ಯವಸ್ಥೆಯಲ್ಲಿ ಹಾಗೂ ಮಹಿಳೆಯರ ಬದುಕಿನಲ್ಲಿ ಅವರಿಗೆ ಸಿಗಬೇಕಾದ ಅವಕಾಶಗಳಿಂದ ಅವರನ್ನು ವಂಚಿತರನ್ನಾಗಿಸುತ್ತದೆ. ಮಹಿಳೆಯರು ಇಷ್ಟಪಟ್ಟು ಮಾಡುವ ಕೆಲಸವಲ್ಲ ಇದು. ಪಿತೃಪ್ರಧಾನ ನಡಾವಳಿಗಳು ಈ ಕೆಲಸವನ್ನು ಅವರ ಮೇಲೆ ಹೇರುತ್ತವೆ.

ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಮಹಿಳೆಯರ ದುಡಿಮೆಯನ್ನು ಗುರುತಿಸಲಾರಂಭಿಸಿರುವುದು ಒಂದು ಧನಾತ್ಮಕ ಬೆಳವಣಿಗೆ. ಪರಿಣಾಮವಾಗಿ ಗೃಹಿಣಿಯರಿಗೆ ಅವರ ದುಡಿಮೆಗೆ ವೇತನ ನೀಡಬೇಕೆಂಬ ಬೇಡಿಕೆ ಕೇಳಿಬರುತ್ತಿದೆ. ಆದರೆ ಈ ಬೇಡಿಕೆಯ ಅನುಷ್ಠಾನ ಸುಲಭಸಾಧ್ಯವಲ್ಲ. ಅಲ್ಲದೆ ಇಂತಹ ವೇತನಗಳು ಮಹಿಳೆಯರ ಈಗಿನ ವೇತನರಹಿತ ಕೆಲಸಗಳು ಅವರೇ ಮಾಡಬೇಕಾದ ಕೆಲಸಗಳೆಂಬುದನ್ನು ಖಾಯಂ ಆಗಿ ದೃಢಪಡಿಸಬಹುದು. ಇದರಿಂದಾಗಿ ಬಾಹ್ಯ ಜಗತ್ತಿನಲ್ಲಿ ಮಹಿಳೆಯರು ಹಲವಾರು ಅವಕಾಶಗಳಿಂದ ವಂಚಿತರಾಗಬಹುದು.

ಹಾಗಾದರೆ ಸರಕಾರಗಳು ಏನು ಮಾಡಬಹುದು? ಸರಕಾರಗಳು ಈ ವೇತನರಹಿತ ದುಡಿಮೆಯನ್ನು ರಾಷ್ಟ್ರೀಯ ದತ್ತಾಂಶಗಳಲ್ಲಿ ಪರಿಗಣಿಸಿ ರಾಷ್ಟ್ರದ ನೀತಿಗಳ ನಿರೂಪಣೆಯಲ್ಲಿ ಈ ದತ್ತಾಂಶಗಳನ್ನು ಬಳಸಿಕೊಳ್ಳಬಹುದು. ಅಲ್ಲದೆ ಸರಕಾರಗಳು ತಂತ್ರಜ್ಞಾನ ಹಾಗೂ ಮೂಲ ಚೌಕಟ್ಟನ್ನು ಸುಧಾರಿಸುವ ಮೂಲಕ ಕೆಲವು ರೀತಿಯ ವೇತನ ರಹಿತ ಕೆಲಸವನ್ನು ಅರ್ಥ ವ್ಯವಸ್ಥೆಯ ಮುಖ್ಯವಾಹಿನಿಗೆ ಸ್ಥಳಾಂತರಿಸುವ ಮೂಲಕ ಅವರ ಹೊರೆಯನ್ನು ಕಡಿಮೆ ಮಾಡಬಹುದು. ಉದಾಹರಣೆಗೆ ಅಡುಗೆ ಕೆಲಸಕ್ಕೆ ಈಗ ಇರುವುದಕ್ಕಿಂತ ಉತ್ತಮವಾದ ಇಂಧನ, ಮನೆಬಾಗಿಲಿಗೆ ನೀರು ಪೂರೈಕೆ ಹಾಗೂ ಶಿಶು ಆರೈಕೆ, ವಿಕಲಾಂಗರ ಆರೈಕೆೆ ಪರ್ಯಾಯ ವ್ಯವಸ್ಥೆ ಮಾಡುವುದು ಇತ್ಯಾದಿ. ಅದೇ ರೀತಿಯಾಗಿ ಪುರುಷರಿಗೆ ವಿಭಿನ್ನ ರೀತಿಯ ಪ್ರೋತ್ಸಾಹಗಳನ್ನು ನೀಡಿ ಗೃಹ ಕೆಲಸವನ್ನು ಪುರುಷರ ಹಾಗೂ ಮಹಿಳೆಯರ ನಡುವೆ ಮರು ಹಂಚಿಕೆ ಮಾಡಬಹುದು. ಉದಾಹರಣೆಗೆ ಮನೆ ಕೆಲಸ, ಮಕ್ಕಳ ಆರೈಕೆ ಇತ್ಯಾದಿಗಳಲ್ಲಿ ಪುರುಷರಿಗೆ ತರಬೇತಿ ಹಾಗೂ ಈ ಕೆಲಸಗಳನ್ನು ಹಂಚಿಕೊಂಡು ಮಾಡಿದಲ್ಲಿ ಅವರಿಗೆ ಆರ್ಥಿಕ ಪ್ರೋತ್ಸಾಹ ಇತ್ಯಾದಿ.

ಮುಖ್ಯ ವಿಷಯವೆಂದರೆ ವೇತನರಹಿತ ಕೆಲಸ ಹಾಗೂ ದೇಶದ ಅರ್ಥ ವ್ಯವಸ್ಥೆಯ ನಡುವೆ ಇರುವ ಕೊಂಡಿಗಳನ್ನು ಸರಕಾರಗಳು ಅರ್ಥಮಾಡಿಕೊಳ್ಳಬೇಕು. ರಾಷ್ಟ್ರಮಟ್ಟದಲ್ಲಿ ಕೆಲಸಗಾರರ ಒಂದು ತಲೆಮಾರನ್ನು (ಹ್ಯೂಮನ್ ಕ್ಯಾಪಿಟಲ್) ಪೂರೈಸುವ ಮೂಲಕ ವೇತನ ರಹಿತ ಕೆಲಸ ಖಾಸಗಿ ರಂಗಕ್ಕೆ ಬಹಳ ನೆರವು ನೀಡುತ್ತದೆ. ಅದೇ ರೀತಿಯಾಗಿ ಆರೋಗ್ಯ ಹಾಗೂ ಸಾರಿಗೆಯಂತಹ ಮೂಲಭೂತ ಸೌಕರ್ಯಗಳು ಮಹಿಳೆಯರಿಗೆ ಲಭ್ಯವಾಗುವಂತೆ ಮಾಡಿ ಅವರ ಕೆಲಸದ ಹೊರೆಯನ್ನು ಕಡಿಮೆ ಮಾಡಬಹುದು. ಮಹಿಳೆಯರ ವೇತನ ರಹಿತ ದುಡಿಮೆ ಅರ್ಥವ್ಯವಸ್ಥೆಯ ಮುಖ್ಯವಾಹಿನಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಖಾಸಗಿಯಾಗಿ ಉತ್ಪಾದಿಸಲಾಗುವ ಸಾರ್ವಜನಿಕ ಒಳಿತಿನ ಅವಿಭಾಜ್ಯ ಅಂಗ. ಈ ದುಡಿಮೆಯ ಹೊರತಾಗಿ ಸಾರ್ವಜನಿಕ/ಸಮಾಜಕಲ್ಯಾಣ ಸಾಧ್ಯವಾಗಲಾರದು. ಹಾಗಾಗಿ ಈ ದುಡಿಮೆಯನ್ನು ಸರಕಾರಗಳು ಗಂಭೀರವಾಗಿ ಪರಿಗಣಿಸಬೇಕಾಗಿದೆ. ವೇತನರಹಿತ ದುಡಿಮೆಗಾರರ (ಮಹಿಳೆಯರ) ಉತ್ಪಾದಕತೆಯನ್ನು ಹೆಚ್ಚಿಸಿ, ಅವರ ಹೊರೆಯನ್ನು ಕಡಿಮೆ ಮಾಡಿ ದೇಶದ ಅಭಿವೃದ್ಧಿಯಲ್ಲಿ ಅವರ ಸಾಮರ್ಥ್ಯವನ್ನು ಹೇಗೆ ಬಳಸಿಕೊಳ್ಳಬಹುದೆಂದು ಯೋಚಿಸುವುದು ಸರಕಾರಗಳಿಗೆ ಬಿಟ್ಟ ವಿಚಾರ. ಯಾಕೆಂದರೆ ಮನೆ ಕೆಲಸ ಕೂಡ ಮುಖ್ಯವಾದ ಒಂದು ಆರ್ಥಿಕ ರಂಗವಾಗಬಹುದು. ಈ ಕೆಲಸವನ್ನು ಅರ್ಥವ್ಯವಸ್ಥೆಯಿಂದ ಹೊರಗಿಡುವ ಮೂಲಕ ಅರ್ಥಶಾಸ್ತ್ರವು ಸ್ಪಷ್ಟವಾಗಿ ಪುರುಷ ಪೂರ್ವಾಗ್ರಹವನ್ನು ಅಭಿವ್ಯಕ್ತಿಸುತ್ತದೆ. ಆದ್ದರಿಂದ ಅರ್ಥಶಾಸ್ತ್ರದ ಪರಿಧಿಯೊಳಗೆ ಲಿಂಗ ನ್ಯಾಯವನ್ನಷ್ಟೇ ತರುವುದಲ್ಲದೆ ಅರ್ಥಶಾಸ್ತ್ರವು ವಾಸ್ತವಿಕವಾದ ಒಂದು ಅರ್ಥಶಾಸ್ತ್ರವಾಗುವಂತೆ ಅದರ ವ್ಯಾಪ್ತಿಯನ್ನು ವಿಸ್ತರಿಸುವ ತುರ್ತು ಅವಶ್ಯಕತೆ ಇದೆ.

TheHindu

ಕೃಪೆ: (ಲೇಖಕರು ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಲ್ಟರ್ನೇಟಿವ್ಸ್‌ನಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದಾರೆ.)

Writer - ಇಂದಿರಾ ಹಿರ್ವೆ

contributor

Editor - ಇಂದಿರಾ ಹಿರ್ವೆ

contributor

Similar News