ಕ್ಯಾನ್ಸರ್ ನಿಂದ ಬಳಲುತ್ತಿರುವ ಸಂಸದೆ, ಖ್ಯಾತ ನಟಿ ಕಿರಣ್ ಖೇರ್
ಹೊಸದಿಲ್ಲಿ: ಚಂಡಿಗಢದ ಬಿಜೆಪಿ ಸಂಸದೆ ಹಾಗೂ ಖ್ಯಾತ ನಟಿ ಕಿರಣ್ ಖೇರ್ ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಸದ್ಯ ಅವರು ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಿರಣ್ ಖೇರ್ ಅವರ ಸಹೋದ್ಯೋಗಿ ಅರುಣ್ ಸೂದ್ ಅವರು ಬುಧವಾರ (ಮಾ.31)ಪತ್ರಿಕಾಗೋಷ್ಟಿಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದರು.
68ರ ವಯಸ್ಸಿನ ಬಾಲಿವುಡ್ ನಟಿ ಹಾಗೂ ರಾಜಕಾರಣಿಗೆ ಕಳೆದೆ ವರ್ಷ ಈ ಕಾಯಿಲೆಗೆ ಚಿಕಿತ್ಸೆ ಪ್ರಾರಂಭಿಸಿದ ನಂತರ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸೂದ್ ತಿಳಿಸಿದ್ದಾರೆ.
ಕಿರಣ್ ಖೇರ್ ಅವರ ಪತಿ, ನಟ ಅನುಪಮ್ ಖೇರ್ ಟ್ವಿಟರ್ ಮೂಲಕ ಈ ಸುದ್ದಿಯನ್ನು ದೃಢಪಡಿಸಿದ್ದಾರೆ.
ವೆಬ್ ನಲ್ಲಿ ಹರಿದಾಡುತ್ತಿರುವ ಎಲ್ಲ ವದಂತಿಗಳಿಗೆ ಅಂತ್ಯ ಹಾಡಿದ ಅನುಪಮ್ ಖೇರ್, ಕಿರಣ್ ಖೇರ್ ಗೆ ರಕ್ತ ಕಾನ್ಸರ್ ಇರುವುದು ಪತ್ತೆಯಾಗಿದೆ. ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದೃಢಪಡಿಸುವ ಟಿಪ್ಪಣಿಯನ್ನುಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಮಗ ಸಿಕಂದರ್ ಹಾಗೂ ತನ್ನ ಪರವಾಗಿ ಹೇಳಿಕೆಯನ್ನು ಬಿಡುಗಡೆ ಮಾಡಿದ ಖೇರ್,
ಕಿರಣ್ ಗೆ ರಕ್ತ ಕ್ಯಾನ್ಸರ್ ಇರುವುದು ದೃಢಪಟ್ಟಿದ್ದು, ಆಕೆ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕೆ ಮೊದಲಿಗಿಂತ ಬಲಶಾಲಿಯಾಗಿ ಹೊರಬರುತ್ತಾಳೆ ಎಂಬ ಖಾತ್ರಿ ನಮಗಿದೆ. ಉತ್ತಮ ವೈದ್ಯರ ಗುಂಪು ಆಕೆಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಅನುಪಮ್ ಖೇರ್ ಹೇಳಿದ್ದಾರೆ.
ಕಿರಣ್ ಖೇರ್ 2014ರಲ್ಲಿ ಬಿಜೆಪಿ ಸೇರುವುದರೊಂದಿಗೆ ರಾಜಕೀಯಕ್ಕೆ ಪ್ರವೇಶಿಸಿದರು. ರಾಜಕೀಯಕ್ಕೆ ಸೇರಿದರೂ ಟಿವಿ ಕಾರ್ಯಕ್ರಮಗಳಲ್ಲಿ ಅವರು ಸಕ್ರಿಯರಾಗಿದ್ರು. ಇಂಡಿಯಾ ಗಾಟ್ ಟ್ಯಾಲೆಂಟ್ ಎಂಬ ರಿಯಾಲಿಟಿ ಕಾರ್ಯಕ್ರಮದಲ್ಲಿ ಕರಣ್ ಜೋಹರ್ ಹಾಗೂ ಮಲೈಕಾ ಅರೋರಾರೊಂದಿಗೆ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ.