ಮಾರ್ಚ್‌ನಲ್ಲಿ 1.24 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹಿಸಿ ದಾಖಲೆ ನಿರ್ಮಿಸಿದ ಕೇಂದ್ರ
ಹೊಸದಿಲ್ಲಿ, ಎ.1: ಮಾರ್ಚ್ ತಿಂಗಳಲ್ಲಿ 1,23,902 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಂಗ್ರಹಿಸಿದ್ದು ಇದು ಸಾರ್ವಕಾಲಿಕ ದಾಖಲೆಯಾಗಿದೆ. ಇದರೊಂದಿಗೆ ಸತತ 6ನೇ ತಿಂಗಳೂ ಮಾಸಿಕ ಜಿಎಸ್‌ಟಿ ಸಂಗ್ರಹ 1 ಲಕ್ಷ ಕೋಟಿ ರೂ. ಗಡಿ ದಾಟಿದೆ ಎಂದು ವಿತ್ತ ಸಚಿವಾಲಯ ಹೇಳಿದೆ.
2021ರ ಜನವರಿಯಲ್ಲಿ 1.19 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದರೆ ಫೆಬ್ರವರಿಯಲ್ಲಿ 1.13 ಲಕ್ಷ ಕೋಟಿ ಸಂಗ್ರಹವಾಗಿತ್ತು. ಕಳೆದ ವರ್ಷದ ಮಾರ್ಚ್‌ಗೆ ಹೋಲಿಸಿದರೆ ಈ ವರ್ಷದ ಮಾರ್ಚ್‌ನಲ್ಲಿ 27% ಹೆಚ್ಚುವರಿ ಜಿಎಸ್‌ಟಿ ಸಂಗ್ರಹವಾಗಿದೆ ಎಂದು ಇಲಾಖೆ ಹೇಳಿದೆ.
ಫೆಬ್ರವರಿಯ ಜಿಎಸ್‌ಟಿಯಲ್ಲಿ 22,973 ಕೋಟಿ ರೂ. ಕೇಂದ್ರ ಜಿಎಸ್‌ಟಿ, 29,329 ಕೋಟಿ ರೂ. ರಾಜ್ಯ ಜಿಎಸ್‌ಟಿ ವಿಭಾಗದಲ್ಲಿ ಸಂಗ್ರಹವಾಗಿದೆ. ಸಂಯೋಜಿತ ವಿಭಾಗದಲ್ಲಿ 62,842 ಕೋಟಿ ರೂ. ಸಂಗ್ರಹವಾಗಿದೆ. ಮಾರ್ಚ್‌ನಲ್ಲಿ ಸರಕುಗಳ ಆಮದು ಪ್ರಕ್ರಿಯೆಯಿಂದ 70% ಹೆಚ್ಚು ತೆರಿಗೆ ಸಂಗ್ರಹವಾಗಿದೆ. ಅಲ್ಲದೆ ದೇಶೀಯ ವಹಿವಾಟಿನಲ್ಲಿ ಕಳೆದ ವರ್ಷದ ಮಾರ್ಚ್‌ಗೆ ಹೋಲಿಸಿದರೆ 17% ಏರಿಕೆಯಾಗಿದೆ.
ಈ ಆರ್ಥಿಕ ವರ್ಷದಲ್ಲಿ ಪ್ರಥಮ, ದ್ವಿತೀಯ, ತೃತೀಯ ಮತ್ತು ಚತುರ್ಥ ತ್ರೈಮಾಸಿಕ ಅವಧಿಯಲ್ಲಿ ಜಿಎಸ್‌ಟಿ ಆದಾಯದಲ್ಲಿ ಕ್ರಮವಾಗಿ (-)41%, (-)8%, 8% ಮತ್ತು 14% ಏರಿಕೆ ದರ ದಾಖಲಾಗಿದೆ. ಕಳೆದ 6 ತಿಂಗಳಿಂದ ಜಿಎಸ್‌ಟಿ ಸಂಗ್ರಹ ಹೆಚ್ಚಳವಾಗಿರುವುದು ಕೊರೋನ ಸೋಂಕಿನ ಬಳಿಕ ಅರ್ಥ ವ್ಯವಸ್ಥೆಯಲ್ಲಿ ತೀವ್ರ ಚೇತರಿಕೆಯಾಗಿರುವ ದ್ಯೋತಕವಾಗಿದೆ ಎಂದು ವಿತ್ತ ಸಚಿವಾಲಯ ಹೇಳಿದೆ.