"ನನ್ನ ಕರ್ನಾಟಕದ ಮುಖ ಇಲ್ಲಿ ತೋರಿಸುವುದಿಲ್ಲ" ಎಂದು ಬೆದರಿಸಿದ ಬಿಜೆಪಿ ಅಭ್ಯರ್ಥಿ ಅಣ್ಣಾಮಲೈ

Update: 2021-04-03 13:23 GMT

ಚೆನ್ನೈ: ತಮಿಳುನಾಡಿನ ಅರವಕುರುಚಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಅವರು ಡಿಎಂಕೆ ಕಾರ್ಯಕರ್ತರು ಹಿಂಸೆಯನ್ನು ಪ್ರಚೋದಿಸುತ್ತಿದ್ದಾರೆಂದು ಆರೋಪಿಸಿ ಅವರಿಗೆ ಬೆದರಿಕೆ ನೀಡಿದ್ದಕ್ಕೆ ಪ್ರತಿಯಾಗಿ ತೀಕ್ಷ್ಣವಾಗಿ ಉತ್ತರಿಸಿರುವ ಡಿಎಂಕೆ ಸಂಸದೆ ಕನಿಮೋಳಿ "ತಮ್ಮ ಪಕ್ಷದವರನ್ನು ಯಾರೂ ಬೆದರಿಸಲು ಸಾಧ್ಯವಿಲ್ಲ, ನಾನು ಸದಾ ಪಕ್ಷ ಕಾರ್ಯಕರ್ತರಿಗಾಗಿ  ಬೆಂಗಾವಲಾಗಿದ್ದೇನೆ" ಎಂದು ಹೇಳಿದ್ದಾರೆ.

ತಮ್ಮ ಕ್ಷೇತ್ರದಲ್ಲಿ ನಡೆದ ಪ್ರಚಾರ ರ್ಯಾಲಿಯಲ್ಲಿ ಮಾತನಾಡುತ್ತಾ ಅಣ್ಣಾಮಲೈ ಆಡಿದ ಮಾತುಗಳಿಂದ ಈ ವಾಕ್ಸಮರ ಹುಟ್ಟಿಕೊಂಡಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ಡಿಎಂಕೆ  ಮಂದಿ ದಾಳಿ ನಡೆಸಿದ್ದಾರೆ ಹಾಗೂ ಈ ಕುರಿತು ಹಲವಾರು ಎಫ್‍ಐಆರ್ ದಾಖಲಾಗಿದೆ ಎಂದು ಅಣ್ಣಾಮಲೈ ಹೇಳಿದರಲ್ಲದೆ "ಕನಿಮೋಳಿ ಅವರು ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಕೂಡ ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಥಳಿಸಲಾಗಿದೆ" ಎಂದು  ಅವರು ದೂರಿದರು.

"ನಾನು  ಸೆಂಥಿಲ್ ಬಾಲಾಜಿಯ ಮೂಳೆ ಮುರಿಯಬಲ್ಲೆ, ಆದರೆ ಹಿಂಸೆಯ ಹಾದಿಯನ್ನು ನಾನು ಬಯಸುವುದಿಲ್ಲ. ನಾನು ಅಹಿಂಸೆಯ ಮಾರ್ಗ ಅನುಸರಿಸುತ್ತಿದ್ದೇನೆ. ನನಗೆ ಇನ್ನೊಂದು ಮುಖವಿದೆ, ಕರ್ನಾಟಕದ ಮುಖ ಅದನ್ನು ಇಲ್ಲಿ ಅನಾವರಣಗೊಳಿಸಲು ಬಯಸುವುದಿಲ್ಲ, ನೀವು ವೀಡಿಯೋ ತೆಗೆದು ಚುನಾವಣಾ ಆಯೋಗಕ್ಕೆ ದೂರು ನೀಡಿದರೂ ಚಿಂತೆಯಿಲ್ಲ" ಎಂದು ಅಣ್ಣಾಮಲೈ ಹೇಳಿದರು.

ಡಿಎಂಕೆ ಮಹಿಳಾ ಘಟಕದ ಅಧ್ಯಕ್ಷೆಯೂ ಆಗಿರುವ ಕನಿಮೋಳಿ ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ "ನಮ್ಮ ಪಕ್ಷ ಅಣ್ಣಾಮಲೈ ಅವರಂತಹ ಬಹಳಷ್ಟು ಜನರನ್ನು ನೋಡಿದೆ. ಅವರು ತಮಿಳುನಾಡಿನಲ್ಲಿ ತನ್ನ ಗಿಮಿಕ್ ತೋರಿಸುವುದು ಬೇಡ" ಎಂದು ಕಟುವಾಗಿ ಹೇಳಿಕೆ ನೀಡಿದ್ದಾರೆ.

"ಅಣ್ಣಾಮಲೈ ಅವರು ತಮ್ಮ ಕರ್ನಾಟಕ ಮುಖ ಇಲ್ಲಿ ತೋರಿಸುವುದಾಗಿ ಹೇಳಿದ್ದಾರೆ. ಅವರು ಸೆಂಥಿಲ್ ಬಾಲಾಜಿ ಅವರಿಗೆ  ಥಳಿಸುವ ಬೆದರಿಕೆ ಹಾಕಿದ್ದಾರೆ.  ನೀವು ನಮ್ಮ ಕಾರ್ಯಕರ್ತರನ್ನು ಧೈರ್ಯವಿದ್ದರೆ ಮುಟ್ಟಿ. ನಮ್ಮನ್ನು ಯಾರೂ ಬೆದರಿಸಲು ಸಾಧ್ಯವಿಲ್ಲ. ನೀವು ಹಾಗೆ  ಮಾಡಿದರೆ ನಾವು ನಿಮ್ಮ ವಿರುದ್ಧ ನಿಲ್ಲುತ್ತೇವೆ ಹಾಗೂ ಅದನ್ನು ಸಹಿಸಲು ನಿಮಗೆ ಸಾಧ್ಯವಿಲ್ಲ" ಎಂದು ಕನಿಮೋಳಿ ಗುಡುಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News