ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನ ಮೈದಾನ ಸಿಬ್ಬಂದಿಗೆ ಕೊರೋನ, ಫ್ರಾಂಚೈಸಿಗಳಿಗೆ ಆತಂಕ

Update: 2021-04-03 07:03 GMT

ಮುಂಬೈ: ವಾಂಖೆಡೆ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಹೈವೋಲ್ಟೇಜ್ ಐಪಿಎಲ್ ಹಣಾಹಣಿಗೆ ಏಳು ದಿನಗಳು ಬಾಕಿ ಇರುವಾಗ ಮೈದಾನದ ಸಿಬ್ಬಂದಿಗೆ ಕೊರೋನ ಪಾಸಿಟಿವ್ ಪತ್ತೆಯಾಗಿದೆ.

ಮಹಾರಾಷ್ಟ್ರ ರಾಜ್ಯದಲ್ಲಿ ಕೊರೋನ ಕೇಸ್ ಗಳು ಏರಿಕೆಯಾಗುತ್ತಿದ್ದು, ಐಪಿಎಲ್ ಫ್ರಾಂಚೈಸಿಗಳಲ್ಲಿ ಆತಂಕ ಶುರುವಾಗಿದೆ. ಎಪ್ರಿಲ್ 9ರಿಂದ 14ನೇ ಆವೃತ್ತಿಯ ಐಪಿಎಲ್ ಆರಂಭವಾಗುವ ಕುರಿತಂತೆ ಸಂಶಯ ಮನೆಮಾಡಿದೆ.

ಟೂರ್ನಮೆಂಟ್ ಆರಂಭಕ್ಕೆ ಮೊದಲು ಇಂತಹ ವಿಚಾರಗಳನ್ನು ಕೇಳಿದಾಗ ಸ್ವಲ್ಪ ಆತಂಕವಾಗುತ್ತದೆ. ನಾವೆಲ್ಲರೂ ಶಿಷ್ಟಾಚಾರಗಳನ್ನು ಪಾಲಿಸುತ್ತಿದ್ದೇವೆ. ಆದರೆ, ಈ ರೀತಿಯ ಸುದ್ದಿಗಳು ಬಂದಾಗ ಚಿಂತೆ ಕಾಡಲಾರಂಭಿಸುತ್ತದೆ. ಆದಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ಎದುರು ನೋಡುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಾಂಖೆಡೆ ಸ್ಟೇಡಿಯಂ ಈ ಋತುವಿನಲ್ಲಿ ಎಪ್ರಿಲ್ 10ರಿಂದ 25ರ ತನಕ 10 ಐಪಿಎಲ್ ಪಂದ್ಯಗಳ ಆತಿಥ್ಯವಹಿಸಲು ಸಜ್ಜಾಗಿದೆ. ಮುಂಬೈ ಸ್ಟೇಡಿಯಂನಲ್ಲಿ ಮೊದಲ ಪಂದ್ಯವು ಎಪ್ರಿಲ್ 10ರಂದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ. ನಾಲ್ಕು ತಂಡಗಳಾದ-ಡೆಲ್ಲಿ, ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಮುಂಬೈನಲ್ಲಿ ಬೀಡುಬಿಟ್ಟಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News