ಗೋಮಾತೆಯೇ....ಇವರನ್ನು ಮನ್ನಿಸು....!

Update: 2021-04-04 06:27 GMT

ಗುಡ್ ಫ್ರೈಡೆ ದಿನ ಕೇರಳ ನಗರವೊಂದರ ಬೀದಿಯಲ್ಲಿ ಯಾರೋ ಶಿಲುಬೆ ಹೊತ್ತುಕೊಂಡು ಸಾಗುತ್ತಿರುವುದನ್ನು ನೋಡಿದ ಎಂಜಲು ಕಾಸಿ ಅತ್ತ ಧಾವಿಸಿದ. ಬಾಗಿ ನೋಡಿದರೆ ಚೌಕೀದಾರರು! ಅವರ ಸುತ್ತ ಮುತ್ತ ಛಾಯಾಗ್ರಾಹಕರು ನೆರೆದಿದ್ದರು.

‘‘ಸಾರ್...ಇದೇನು ಸಾರ್...ಗುಡ್‌ಫ್ರೈಡೆ ದಿನ ಸ್ವತಃ ನೀವೇ ಶಿಲುಬೆ ಹೊತ್ತು ಕೊಂಡು ನಡೆಯುತ್ತಿದ್ದೀರಿ?’’

ಚೌಕೀದಾರರು ತಮ್ಮ ನೀಳವಾದ ಗಡ್ಡವನ್ನು ನೇವರಿಸಿಕೊಂಡು ‘‘ಕೇರಳಕ್ಕೆ ಜೂದಾಸನಿಂದ ವಂಚನೆಯಾಗಿದೆ. ಎಲ್‌ಡಿಎಫ್‌ನ ಪಿಣರಾಯಿಯೇ ಆ ಜೂದಾಸ....’’ ಎಂದು ಹೇಳಿದರು.

‘‘ಸಾರ್...ಯಾವ ರೀತಿಯಲ್ಲಿ ಕೇರಳಕ್ಕೆ ವಂಚನೆಯಾಗಿದೆ ಹೇಳಿ ಸಾ....’’ ಕಾಸಿ ಚೌಕೀದಾರರನ್ನು ಕರುಣಾಜನಕವಾಗಿ ನೋಡಿ ಕೇಳಿದ.

‘‘ನನ್ನನ್ನು ನೋಡಿದರೆ ಗೊತ್ತಾಗುವು ದಿಲ್ಲವೇ?... ಈ ಗಡ್ಡವನ್ನು ನೋಡಿದರೆ ಗೊತ್ತಾಗುವುದಿಲ್ಲವೇ?’’ ಚೌಕೀದಾರರು ಶಿಲುಬೆಯನ್ನು ಹೊತ್ತುಕೊಂಡು ಒಮ್ಮೆಗೆ ನರಳಿದರು. ಚೌಕೀದಾರರನ್ನು ನೋಡಿ ಕಾಸಿಗೆ ತುಂಬಾ ಸಂಕಟವಾಯಿತು. ‘‘ಆದರೆ ಇದು ರವೀಂದ್ರ ನಾಥ ಠಾಗೋರರ ಗಡ್ಡವಲ್ಲವೇ?’’ ಕಾಸಿ ಅನುಮಾನದಿಂದ ಕೇಳಿದ.

 ‘‘ಅದು ಪಶ್ಚಿಮ ಬಂಗಾಳದಲ್ಲಿ. ಕೇರಳದಲ್ಲಿರುವಾಗ ಈ ಗಡ್ಡಕ್ಕ್ಕೆ ಠಾಗೋರರ ಜೊತೆ ಯಾವ ಸಂಬಂಧವಿಲ್ಲ. ಏನಿದ್ದರೂ ಜೂದಾಸನ ಜೊತೆಗೆ ಮಾತ್ರ ಸಂಬಂಧ...’’

‘‘ಆದರೆ ತಮಿಳುನಾಡಿನಲ್ಲಿ ಪೆರಿಯಾರ್ ಗಡ್ಡ ಎಂದು ಹೇಳುತ್ತಿದ್ದರು...’’

‘‘ಅದು ತಮಿಳು ನಾಡಿನಲ್ಲಿ. ಅದಕ್ಕೂ ಇದಕ್ಕೂ ಯಾವ ಸಂಬಂಧವೂ ಇಲ್ಲ....ನಾನು ಜೂದಾಸನಿಂದ ವಂಚನೆಗೊಳಗಾಗಿರುವ ಕೇರಳವನ್ನು ರಕ್ಷಿಸಲು ಬಂದಿದ್ದೇನೆ...’’ ಚೌಕೀದಾರ ಸ್ಪಷ್ಟಪಡಿಸಿದರು. ‘‘ಕೇರಳ ಅದು ಹೇಗೆ ವಂಚಿಸಲ್ಪಟ್ಟಿದೆ ಎನ್ನುವುದನ್ನು ವಿವರಿಸುತ್ತೀರಾ ಸಾರ್...’’ ಕಾಸಿ ಕೇಳಿದ.

‘‘ಆರೆಸ್ಸೆಸ್‌ನ ರಾಷ್ಟ್ರೀಯ ಸಂದೇಶವನ್ನು ಹರಡಲು ನಾನು ಬಂದಿದ್ದೇನೆ. ಆದರೆ ಪಿಣರಾಯ್ ವಿಜಯನ್ ನನ್ನನ್ನು ಶಿಲುಬೆಗೇರಿಸಲು ಯತ್ನಿಸುತ್ತಿದ್ದಾರೆ. ಆದುದರಿಂದ ಈ ಬಾರಿ ಕೇರಳದ ಕ್ರಿಶ್ಚಿಯನ್ನರೆಲ್ಲ ನನಗೆ ಮತ ನೀಡಲಿದ್ದಾರೆ...’’

‘‘ಆ ಸಂದೇಶದ ಕುರಿತಂತೆ ತುಸು ವಿವರಣೆ ನೀಡಬಹುದೇ...’’

 ‘‘ಹಿಂದಿಯನ್ನು ಹಿಡಿದುಕೊಂಡು ಕೇರಳಕ್ಕೆ ಬಂದರೆ.... ‘ಪೋಡಾ ಮೋನೆ ದಿನೇಶ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ನನ್ನನ್ನು ನಿಂದಿಸಿದರು. ಲವ್‌ಜಿಹಾದ್‌ನಂತಹ ಪವಾಡ ಭರಿತವಾದ ಕಾನೂನುಗಳನ್ನು ನಿಮಗೆ ಕೊಡುತ್ತೇನೆ ಎಂದರೂ ಅದರ ಬಗ್ಗೆ ಈ ಜೂದಾಸರು ಅಪಪ್ರಚಾರ ಮಾಡುತ್ತಿದ್ದಾರೆ. ದೇಶಾದ್ಯಂತ ಲಾಕ್‌ಡೌನ್‌ನ್ನು ಜನರು ಅತ್ಯಂತ ಆರಾಮಭರಿತವಾಗಿ ಅನುಭವಿಸುತ್ತಿದ್ದರೆ, ಕೇರಳದಲ್ಲಿ ಲಾಕ್‌ಡೌನ್‌ನ್ನು ಅನುಭವಿಸುವುದಕ್ಕೇ ಬಿಡುತ್ತಿಲ್ಲ. ನಾನು ಜನರ ಕೈಯಲ್ಲಿದ್ದ ಒಂದು ರೊಟ್ಟಿಯನ್ನು ಕಿತ್ತು ಅದನ್ನು ಹರಿದು ಅದರ ಒಂದು ಚೂರನ್ನು ಅವರಿಗೆ ಕೊಟ್ಟು ಉಳಿದುದನ್ನು ದೇಶಕ್ಕಾಗಿ ಮೀಸಲಿಟ್ಟರೆ, ಇಲ್ಲಿ ಜನರ ಕೈಗೆ ಇಡೀ ರೊಟ್ಟಿಯನ್ನೇ ಪುಕ್ಕಟೆಯಾಗಿ ಹಂಚಿ, ನನ್ನ ಆತ್ಮನಿರ್ಭರ ಸಂದೇಶಕ್ಕೆ ಘಾಸಿಯನ್ನುಂಟು ಮಾಡುತ್ತಿದ್ದಾರೆ....’’ ಚೌಕೀದಾರರು ಶಿಲುಬೆಯ ಭಾರವನ್ನು ತಾಳಲಾರದೆ ಕುಸಿದರು.

‘‘ಆರೋಗ್ಯ ಕ್ಷೇತ್ರದಲ್ಲಿ ಕೇರಳ ಭಾರೀ ಸಾಧನೆ ಮಾಡಿದೆ ಎಂದು ಹೇಳುತ್ತಿದ್ದಾರೆ. ಕೊರೋನವನ್ನು ಕೇರಳ ಎದುರಿಸಿದ ರೀತಿಗೆ ವಿಶ್ವ ಪ್ರಶಂಸಿಸಿದೆ....’’ ಕಾಸಿ ವಿವರಿಸುತ್ತಿರುವಾಗ ಚೌಕೀದಾರರುಹಿಂಸೆಯನ್ನು ತಡೆಯಲಾರದೆ.... ‘‘ಗೋಮಾತೆಯೇ ಇವರನ್ನು ಮನ್ನಿಸು...ಇವರು ಏನು ಹೇಳುತ್ತಿದ್ದಾರೆ ಎನ್ನುವುದು ಇವರಿಗೆ ಚೆನ್ನಾಗಿ ಗೊತ್ತಿದೆ....’’ ಎಂದರು.

‘‘ಯಾಕೆ ಸಾರ್? ಏನಾಯಿತು?’’ ಕಾಸಿ ಆತಂಕದಿಂದ ಕೇಳಿದ. ‘‘ಕೊರೋನವನ್ನು ಎದುರಿಸಲು ನಾನು ಭಾರೀ ಪ್ರಮಾಣದ ಗೋಮೂತ್ರವನ್ನು ಕೇರಳಕ್ಕೆ ರವಾನಿಸಲು ಯೋಜನೆ ಹಾಕಿಕೊಂಡಿದ್ದೆ. ಆದರೆ ಕೇರಳ ಸರಕಾರ ಅದನ್ನು ಬೇಡ ಅಂದಿತು. ಇಲ್ಲವಾದರೆ ಕೇರಳದಲ್ಲಿ ಕೊರೋನವನ್ನು ಎದುರಿಸಿ ಗೆದ್ದ ಹೆಗ್ಗಳಿಕೆ ನಮಗೂ, ನಮ್ಮ ಗೋಮೂತ್ರಕ್ಕೂ ಸಿಗುತ್ತಿತ್ತು’’

‘‘ಶಿಕ್ಷಣದಲ್ಲೂ ಕೇರಳ ಉನ್ನತ ಸಾಧನೆ ಮಾಡಿದೆ. ಹೀಗಿರುವಾಗ ಕೇರಳಕ್ಕೆ ಪಿಣರಾಯಿ ವಂಚನೆ ಮಾಡಿದ್ದು ಹೇಗೆ?’’ ಕಾಸಿ ಅರ್ಥವಾಗದೆ ಕೇಳಿದ.

‘‘ನೋಡಿ...ಕೇರಳದಲ್ಲಿರುವ ಶಿಕ್ಷಣ ಎಡಪಂಥೀಯರ ಶಿಕ್ಷಣ. ಆದನ್ನು ಕಲಿತ ಜನರು ಆರೆಸ್ಸೆಸ್‌ಗರನ್ನು ಕಂಡಲ್ಲಿ ಓಡಿಸುತ್ತಿದ್ದಾರೆ. ನಮ್ಮ ಗೆಲುವಿಗೆ ಇದು ದೊಡ್ಡ ಅಡ್ಡಿಯಾಗಿದೆ. ಪಾಶ್ಚಾತ್ಯ ಶಿಕ್ಷಣದಿಂದ ವಿದ್ಯಾರ್ಥಿಗಳ ಮೇಲೆ ಒತ್ತಡಗಳು ಹೇರಲ್ಪಟ್ಟಿವೆ. ಆದುದರಿಂದ ನಾವು ಈಗ ದೇಶಾದ್ಯಂತ ವಿದ್ಯಾರ್ಥಿಗಳಿಗೆ ಶಿಕ್ಷಣದ ಭಾರವೇ ಇಲ್ಲದಂತೆ ಮಾಡಿದ್ದೇವೆ. ಯಾವುದಾದರೂ ಶಾಲೆ ಮಕ್ಕಳಿಗೆ ಗುಟ್ಟಾಗಿ ಶಿಕ್ಷಣ ನೀಡುತ್ತಿದ್ದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಆದರೆ ಕೇರಳದಲ್ಲಿ ವಿದ್ಯಾರ್ಥಿಗಳಿಗೆ ಕೊರೋನ ಕಾಲದಲ್ಲಿ ಗುಟ್ಟಾಗಿ ಶಿಕ್ಷಣ ನೀಡಲಾಗುತ್ತಿದೆ. ಹೀಗೆ ಶಿಕ್ಷಣವನ್ನು ನೀಡಿ ಇವರೆಲ್ಲ ಪದವೀಧರರಾಗಿ ಹೊರಗೆ ಬಂದರೆ ಉದ್ಯೋಗವನ್ನು ಕೊಡುವುದು ಹೇಗೆ? ಶಿಕ್ಷಣದಿಂದಾಗಿ ನಿರುದ್ಯೋಗಗಳು ಹೆಚ್ಚುತ್ತಿವೆ. ಆದುದರಿಂದ ಈ ಲಾಕ್‌ಡೌನ್ ಸಮಯದಲ್ಲಿ ಎಲ್ಲ ಶಾಲೆಗಳನ್ನು ಮುಚ್ಚಿ, ನಿರುದ್ಯೋಗಿ ಪದವೀಧರರ ಸಂಖ್ಯೆಯನ್ನು ಇಳಿಸಲು ಮುಂದಾಗಿದ್ದೇವೆ....’’

‘‘ಈಗ ಈ ಶಿಲುಬೆಯನ್ನು ಯಾಕೆ ಹೊತ್ತುಕೊಂಡು ಹೋಗುತ್ತಿದ್ದೀರಿ...ಇದರಲ್ಲಿ ನೀವು ಏರಲಿದ್ದೀರಾ...?’’ ಕಾಸಿ ಕೇಳಿದ. ‘‘ಹ್ಹೆ ಹ್ಹೆ....ನಾನೇಕೆ ಶಿಲುಬೆಯೇರಲಿ. ಈ ಚುನಾವಣೆಯಲ್ಲಿ ಬಿಜೆಪಿಯೇನಾದರೂ ಗೆದ್ದರೆ, ಇಡೀ ಕೇರಳವನ್ನು ಈ ಶಿಲುಬೆಗೇರಿಸಲಿದ್ದೇನೆ....ಆ ಮೂಲಕ ನನ್ನ ಕೃತಜ್ಞತೆಯನ್ನು ಸಲ್ಲಿಸಲಿದ್ದೇನೆ....’’ ಚೌಕೀದಾರರು ನೋವಿನ ನಡುವೆಯೂ ನಕ್ಕರು.

‘‘ಕೇರಳದ ಮುಸ್ಲಿಮರಿಗೆ ನಿಮ್ಮ ಕೊರ್ುಗೆಯೇನಾದರೂ ಇದೆಯೇ?’’

‘‘ಲವ್ ಜಿಹಾದ್ ಕಾನೂನು ಮೂಲಕ ಕೇರಳದ ಮುಸ್ಲಿಮರಿಗೆ ಪ್ರೀತಿಯನ್ನು ಹಂಚಲಿದ್ದೇನೆ...ಸಿಎಎ ಕಾಯ್ದೆಯ ಮೂಲಕ ಅವರ ಪೌರತ್ವವನ್ನು ಕಿತ್ತುಕೊಂಡು ಅವರನ್ನು ಮತದಾನ ಮಾಡುವ ಹೊಣೆಗಾರಿಕೆಯಿಂದ ಮುಕ್ತಿಗೊಳಿಸಿ ನಿರಾಳ ಮಾಡಲಿದ್ದೇನೆ...ಈ ಮೂಲಕ ಮುಸ್ಲಿಮರು ರಾಜಕೀಯ ಕಾರಣಕ್ಕಾಗಿ ಬಲಿಪಶುಗಳಾಗುವುದು ನಿಲ್ಲುತ್ತದೆ’’

‘‘ಕೇರಳದಲ್ಲಿ ಗೋಮಾಂಸ ನಿಷೇಧ ಮಾಡುವ ಉದ್ದೇಶವೇನಾದರೂ ಇದೆಯೆ?’’ ಕಾಸಿ ಮೆಲ್ಲಗೆ ಇನ್ನೊಂದು ಪ್ರಶ್ನೆ ಕೇಳಿದ.

 ‘‘ಹ್ಹೆ ಹ್ಹೆ....ಕೇರಳದ ಗೋವುಗಳಲ್ಲಿ ಯಾವುದೇ ದೇವತೆಗಳು ಇಲ್ಲ ಎನ್ನುವುದು ಪತಂಜಲಿ ಪ್ರಯೋಗಾಲಯದಲ್ಲಿ ಸಾಬೀತಾಗಿರುವುದರಿಂದ....ನಿಷೇಧದ ಪ್ರಶ್ನೆಯೇ ಇಲ್ಲ....’’ ಚೌಕೀದಾರರು ಘೋಷಿಸಿದರು.

‘‘ಒಂದು ವೇಳೆ ಕೇರಳದ ಜನರೆಲ್ಲ ಸೇರಿ ನಿಮ್ಮನ್ನೇ ಈ ಶಿಲುಬೆಗೇರಿಸಿದರೆ?’’ ಕಾಸಿ ಅನುಮಾನದಿಂದ ಕೇಳಿದ.

‘‘ಹ್ಹೆ...ಹ್ಹೆ...ಕೇರಳದ ಜನರ ಬಗ್ಗೆ ನನಗೆ ಗೊತ್ತಿಲ್ಲವೇ? ಇದು ಮರದ ಶಿಲುಬೆಯೇ ಅಲ್ಲ. ಪ್ಲಾಸ್ಟಿಕ್ ಶಿಲುಬೆ...’’ ಎನ್ನುತ್ತಾ ಒಮ್ಮೆಲೆ ಎದ್ದು ನಿಂತು ಶಿಲುಬೆಯನ್ನು ಒಂದೇ ಕೈಯಲ್ಲಿ ಎತ್ತಿದರು. ಯಾಕೋ ಕಣ್ಣೆದುರು ಜೂದಾಸನೇ ಬಂದು ನಿಂತಂತಾಗಿ ಕಾಸಿ ಅಲ್ಲಿಂದ ಓಟಕ್ಕಿತ್ತ.

Similar News