ಜೂದಾಸ್ ಪಾತ್ರವನ್ನು ಯಾರು ವಹಿಸಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು: ಮೋದಿಗೆ ಪಿಣರಾಯಿ ತಿರುಗೇಟು

Update: 2021-04-04 15:35 GMT

ಪಿಣರಾಯಿ (ಕೇರಳ),ಎ.4: ‘ನಮ್ಮ ದೇಶದಲ್ಲಿ ಜೂದಾಸ್‌ನ ಪಾತ್ರವನ್ನು ವಹಿಸಿರುವವರು ಯಾರು ಎನ್ನುವುದು ಪ್ರಧಾನಿ ನರೇಂದ್ರ ಮೋದಿಯವರಿಗೆ ಗೊತ್ತಿರಲೇಬೇಕು ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರವಿವಾರ ಇಲ್ಲಿ ಹೇಳಿದರು.

ಕಳೆದ ವಾರ ಪಾಲಕ್ಕಾಡ್‌ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಂದರ್ಭ ಮೋದಿ ಅವರು, ಕೆಲವೇ ಬೆಳ್ಳಿಯ ತುಣುಕುಗಳಿಗಾಗಿ ಜೂದಾಸ್ ಯೇಸುಕ್ರಿಸ್ತನನ್ನು ವಂಚಿಸಿದ್ದಂತೆ ಎಡರಂಗ ಸರಕಾರವು ರಾಜ್ಯದ ಜನತೆಯನ್ನು ವಂಚಿಸುತ್ತಿದೆ ಎಂದು ಕುಟುಕಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಪಿಣರಾಯಿ,‘ನಮ್ಮ ದೇಶದಲ್ಲಿ ಜುದಾಸ್ ಪಾತ್ರವನ್ನು ವಹಿಸಿರುವವರು ಯಾರು ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತು.ನಮ್ಮ ಸಂವಿಧಾನವು ಜಾತ್ಯತೀತತೆಯ ಖಾತರಿಯನ್ನು ನೀಡಿದೆ. ಈ ಜಾತ್ಯತೀತತೆಯ ವಿರುದ್ಧ ದೇಶದಲ್ಲಿಯ ಯಾವ ಶಕ್ತಿ ಕಾರ್ಯಾಚರಿಸುತ್ತಿದೆ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿದೆ ’ ಎಂದರು.

ಎ.6ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸಿರುವ ಧರ್ಮಡಂ ವಿಧಾನಸಭಾ ಕ್ಷೇತ್ರದಲ್ಲಿಯ ತನ್ನ ಸ್ವಗ್ರಾಮ ಪಿಣರಾಯಿಯಲ್ಲಿ ಸುದ್ದಿ ಜಾಲತಾಣ ‘ದಿ ಪ್ರಿಂಟ್’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಪಿಣರಾಯಿ ಅವರು,1999ರಲ್ಲಿ ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಅಸ್ತಿತ್ವದಲ್ಲಿದ್ದಾಗ ಒಡಿಶಾದಲ್ಲಿ ಕ್ರೈಸ್ತ ಮಿಷನರಿ ಗ್ರಹಾಂ ಸ್ಟೇನ್ಸ್ ಮತ್ತು ಅವರ ಇಬ್ಬರು ಪುತ್ರರ ಹತ್ಯೆಗಳನ್ನು ಪ್ರಸ್ತಾಪಿಸಿ,ಕ್ರೈಸ್ತರ ವಿರುದ್ಧ ದಾಳಿಗಳನ್ನು ಯಾರು ನಡೆಸುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತು. ಸಂಘ ಪರಿವಾರವು ಈ ದಾಳಿಗಳಿಗೆ ನೇತೃತ್ವವನ್ನು ನೀಡಿದೆ. ಸಂಘ ಪರಿವಾರವನ್ನು ಯಾರು ರಕ್ಷಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News