ಮಲಯಾಳಂ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಪಿ. ಬಾಲಚಂದ್ರನ್‌ ನಿಧನ

Update: 2021-04-05 13:41 GMT
Photo: Twitter

ಕೊಲ್ಲಂ: ಮಲಯಾಳಂ ಚಿತ್ರರಂಗದ ಖ್ಯಾತ ನಟ, ನಾಟಕಕಾರ ಮತ್ತು ಲೇಖಕ ಪಿ.ಬಾಲಚಂದ್ರನ್ ತಮ್ಮ 62 ನೇ ವಯಸ್ಸಿನಲ್ಲಿ ನಿಧನರಾದರು. ಮಲಯಾಳಂ ಚಿತ್ರರಂಗ ಮತ್ತು ಸಾಹಿತ್ಯಕ್ಕೆ ಭಾರೀ ಕೊಡುಗೆ ನೀಡಿದ್ದ ಅವರು ಹಲವಾರು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಸೋಮವಾರ ಮುಂಜಾನೆ ನಿಧನರಾದರು ಎಂದು ವರದಿಗಳು ತಿಳಿಸಿವೆ.

ಪದ್ಮನಾಭನ್ ಬಾಲಚಂದ್ರನ್ ನಾಯರ್ ಅವರು ಫೆಬ್ರವರಿ 2, 1952 ರಂದು ಕೇರಳದ ಕೊಲ್ಲಂ ಜಿಲ್ಲೆಯ ಸಾಸ್ತಂಕೋಟ ಗ್ರಾಮದಲ್ಲಿ ಪದ್ಮನಾಭ ಪಿಳ್ಳೈ ಮತ್ತು ಸರಸ್ವತಿ ಭಾಯ್ ದಂಪತಿಯ ಪುತ್ರನಾಗಿ ಜನಿಸಿದರು. ಮಲಯಾಳಂ ಚಿತ್ರರಂಗದಲ್ಲಿ ಚಿತ್ರಕಥೆಗಾರ ಮತ್ತು ನಟರಾಗಿ ಅವರು ಕಾರ್ಯ ನಿರ್ವಹಿಸಿದರು.

ರಿಚರ್ಡ್ ಅಟೆನ್‌ ಬರೋ ಅವರ ಹೆಗ್ಗುರುತಾದ 1982 ರ ಗಾಂಧಿ ಸಿನಿಮಾದೊಂದಿಗೆ ಅವರು ತಮ್ಮ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದರು. ತಿರುವನಂತಪುರ ಲಾಡ್ಜ್, ಥ್ಯಾಂಕ್ ಯು, ಸೈಲೆನ್ಸ್ ಮುಂತಾದ ಚಿತ್ರಗಳಲ್ಲಿಯೂ ಅವರು ಕಾಣಿಸಿಕೊಂಡರು.

ಅವರು ಅಂಕಲ್ ಬನ್, ಕಲ್ಲ್ ಕೊಂಡೊರು ಪೆನ್ನ್, ಪೊಲೀಸ್ ಮುಂತಾದ ಸಿನಿಮಾಗಳಿಗೆ ಚಿತ್ರಕಥೆಗಳನ್ನು ಬರೆದಿದ್ದಾರೆ. 2012 ರಲ್ಲಿ, ಇವನ್ ಮೇಘರೂಪನ್ ಸಿನಿಮಾವನ್ನು ನಿರ್ದೇಶಿಸಿದರು. ಅವರ ವೃತ್ತಿಜೀವನದ ಏಕೈಕ ನಿರ್ದೇಶನವಾದ ಈ ಸಿನಿಮಾ ಕವಿ ಟಿ ಪಿ. ಕುಂಞಿರಾಮನ್ ನಾಯರ್ ಅವರ ಜೀವನವನ್ನು ಆಧರಿಸಿದೆ.

ನಾಟಕಕಾರನಾಗಿ, ʼಪಾವಮ್ ಉಸ್ಮಾನ್ʼ ಅವರಿಗೆ ಖ್ಯಾತಿ ನೀಡಿತು. ಇದಕ್ಕಾಗಿ ಅವರಿಗೆ 1989 ರಲ್ಲಿ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಕೇರಳ ವೃತ್ತಿಪರ ನಾಟಕ ಪ್ರಶಸ್ತಿ ನೀಡಲಾಯಿತು.

ಈ ವರ್ಷದ ಆರಂಭದಲ್ಲಿ ಮಮ್ಮುಟ್ಟಿ ನೇತೃತ್ವದ ರಾಜಕೀಯ ಥ್ರಿಲ್ಲರ್ ಸಿನಿಮಾ ʼಒನ್ʼ ‌ನಲ್ಲಿ ಬಾಲಚಂದ್ರನ್ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದಾರೆ. ಬಾಲಚಂದ್ರನ್‌ ರವರು ಪತ್ನಿ ಶ್ರೀಲತಾ ಮತ್ತು ಇಬ್ಬರು ಮಕ್ಕಳಾದ ಶ್ರೀಕಾಂತ್ ಮತ್ತು ಪಾರ್ವತಿಯವರನ್ನು ಅಗಲಿದ್ದಾರೆ.

ಪಿ. ಬಾಲಚಂದ್ರನ್‌ ರವರ ನಿಧನಕ್ಕೆ ಚಿತ್ರರಂಗದ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News