ಕೇರಳ: 2020ರಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡವರೇ ಅಧಿಕ !

Update: 2021-04-05 18:16 GMT

ತಿರುವನಂತಪುರ, ಎ. 5: ಹಿಂದೂ ಹಾಗೂ ಕ್ರಿಶ್ಚಿಯನ್ ಮತದಾರರನ್ನು ಸೆಳೆಯಲು ಕೇರಳದಲ್ಲಿ ಬಲವಂತದ ಮತಾಂತರ ಹಾಗೂ ‘ಲವ್ ಜಿಹಾದ್’ ವಿರುದ್ಧ ಉತ್ತರಪ್ರದೇಶದ ಮಾದರಿಯಲ್ಲಿ ಕಾನೂನು ಜಾರಿಗೊಳಿಸಲಾಗುವುದು ಎಂದು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಆದರೆ, ‘The New Indian Express’ ಆಂಗ್ಲ ದಿನಪತ್ರಿಕೆಯು ಸರಕಾರದ ಗೆಝೆಟ್‌ನಿಂದ ಪಡೆದುಕೊಂಡ ದತ್ತಾಂಶ ಇದಕ್ಕಿಂತ ಭಿನ್ನ ಚಿತ್ರಣ ನೀಡಿದೆ.

 2020 ವರ್ಷದ ಅಧಿಕೃತ ಅಂಕಿ-ಅಂಶಗಳ ಪ್ರಕಾರ ಕೇರಳದಲ್ಲಿ ನಡೆದಿರುವ ಹೊಸ ಮತಾಂತರದಲ್ಲಿ ಅತಿ ಹೆಚ್ಚು ಲಾಭ ಮಾಡಿಕೊಂಡಿರುವುದು ಹಿಂದೂ ಧರ್ಮವಾಗಿದೆ. ಒಂದು ವರ್ಷ ಅವಧಿಯ ಸಂದರ್ಭ ಕೇರಳದಲ್ಲಿ ಮತಾಂತರಗೊಂಡವರ ಪೈಕಿ ಶೇ. 47 ಮಂದಿ ಹಿಂದೂ ಧರ್ಮವನ್ನು ಅಪ್ಪಿಕೊಂಡಿದ್ದಾರೆ.

ಮತಾಂತರಕ್ಕೆ ಅನುಮತಿ ಕೋರಿ ಒಟ್ಟು 506 ಜನರು ಸರಕಾರದಲ್ಲಿ ಹೆಸರು ನೋಂದಾಯಿಸಿದ್ದಾರೆ. ಇವರಲ್ಲಿ 241 ಮಂದಿ ಕ್ರಿಶ್ಚಿಯನ್ ಧರ್ಮ ಅಥವಾ ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಹೆಸರು ನೋಂದಾಯಿಸಿದ್ದಾರೆ.

ಇದೇ ವರ್ಷ ಒಟ್ಟು 141 ಮಂದಿ ಇಸ್ಲಾಂ ಧರ್ಮ ಸ್ವೀಕರಿಸಿದ್ದಾರೆ. 119 ಮಂದಿ ಹೊಸಬರು ಕ್ರಿಶ್ಚಿಯನ್ ಧರ್ಮ ಸ್ವೀಕರಿಸಿದ್ದಾರೆ ಎಂದು ದತ್ತಾಂಶ ಹೇಳಿದೆ. ಕಾನೂನಿನ ಪ್ರಕಾರ ಅಪ್ರಾಪ್ತ ವಯಸ್ಕರು ಸೇರಿದಂತೆ ಜನರು ತಮ್ಮ ಧರ್ಮವನ್ನು ಅಧಿಕೃತವಾಗಿ ಬದಲಾಯಿಸಲು ಬಯಸುವವರು ಗೆಝೆಟ್‌ನಲ್ಲಿ ಜಾಹೀರಾತು ನೀಡಬೇಕು. ಹಿಂದೂ ಧರ್ಮಕ್ಕೆ ಹೊಸತಾಗಿ ಮತಾಂತರವಾದವರಲ್ಲಿ ಶೇ. 72 ದಲಿತ ಕ್ರೈಸ್ತರಾಗಿದ್ದು, ಅವರಲ್ಲಿ ಕ್ರೈಸ್ತ ಚೇರಮಾರರು, ಕ್ರೈಸ್ತ ಸಾಂಬವ ಹಾಗೂ ಕ್ರೈಸ್ತ ಪುಲಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಮೀಸಲಾತಿ ಸೌಲಭ್ಯದ ಕೊರತೆಯ ಕಾರಣಕ್ಕಾಗಿ ದಲಿತ ಕ್ರೈಸ್ತರು ಹಿಂದೂ ಧರ್ಮವನ್ನು ಅಪ್ಪಿಕೊಳ್ಳುತ್ತಿದ್ದಾರೆ. 32 ಜನರು ಇಸ್ಲಾಂ ಅನ್ನು ತ್ಯಜಿಸಿ ಹಿಂದೂ ಧರ್ಮ ಸ್ವೀಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News