ಯೋಗಿ ಆದಿತ್ಯನಾಥ್ ಅವಹೇಳನಕಾರಿ ಪದ ಬಳಸಿಲ್ಲವೇ?: ಇಲ್ಲಿದೆ ವಾಸ್ತವಾಂಶ

Update: 2021-04-06 07:41 GMT

Photo: Twitter (@AamAadmiParty)

ಹೊಸದಿಲ್ಲಿ: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ANI ಸುದ್ದಿ ಸಂಸ್ಥೆಯ ಜತೆ ಕೋವಿಡ್ ಲಸಿಕೆ ಅಭಿಯಾನದ ಕುರಿತು  ಮಾತನಾಡುತ್ತಾ ಕ್ಯಾಮರಾದೆದುರೇ ಅವಹೇಳನಕಾರಿ ಪದ ಪ್ರಯೋಗ ಮಾಡಿದ್ದಾರೆನ್ನಲಾದ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಪತ್ರಕರ್ತರೊಬ್ಬರ ವಿರುದ್ಧ ಈ ರೀತಿ ಹರಿಹಾಯ್ದ ಆದಿತ್ಯನಾಥ್ ರನ್ನು ವಿಪಕ್ಷಗಳು ಹಾಗೂ ಹಲವು ಮಾಧ್ಯಮ ಮಂದಿ ಟೀಕಿಸಿದ್ದಾರೆ.

ಇದರ ಬೆನ್ನಲ್ಲೇ ತಾನು ಶೇರ್ ಮಾಡಿದ ವೀಡಿಯೋ ಬೈಟ್ ವಾಪಸ್ ಪಡೆದ ಎಎನ್‍ಐ ಮತ್ತೊಂದು ವೀಡಿಯೋ ಬೈಟ್ ಪೋಸ್ಟ್ ಮಾಡಿದೆ. ಅದರಲ್ಲಿ ಆದಿತ್ಯನಾಥ್ ಅವರು ನಿಂದನಾತ್ಮಕ ಪದಗಳನ್ನು ಬಳಸಿರುವುದು ಕೇಳಿಸುವುದಿಲ್ಲ. ತನ್ನ ಎರಡನೇ ಪೋಸ್ಟ್ ನಲ್ಲಿ ಎಎನ್‍ಐ ಟಿಪ್ಪಣಿಯೊಂದನ್ನೂ ನೀಡಿ ಈ ಹಿಂದೆ ಪ್ರಕಟಿಸಿದ್ದ ಲೈವ್ ಸೌಂಡ್ ಬೈಟ್ ವಾಪಸ್ ಪಡೆಯಲಾಗಿದೆ ಎಂದು ಹೇಳಿಕೊಂಡಿದೆ.

ಈ ಕುರಿತು altnews.in ಎಎನ್‍ಐ ಮುಖ್ಯ ಸಂಪಾದಕಿ ಸ್ಮಿತಾ ಪ್ರಕಾಶ್ ಅವರನ್ನು ಸಂಪರ್ಕಿಸಿ ಅವರ ಪ್ರತಿಕ್ರಿಯೆ ಕೇಳಿದಾಗ. "ನಿಮ್ಮ ಜತೆ ಮಾತನಾಡಲು ನನಗೆ ಆಸಕ್ತಿಯಿಲ್ಲ,'' ಎಂದು ಅವರು ಕರೆ ಕಟ್ ಮಾಡಿದ್ದಾರೆ. ಎಎನ್‍ಐ ಯುಪಿ ಬ್ಯುರೋ ಮುಖ್ಯಸ್ಥ ಕಾಮ್ನಾ ಹಜೀಲಾ ಕೂಡ ವೀಡಿಯೋ ಕುರಿತು ಕೇಳಿದಾಗ ಕಾಲ್ ಕಟ್ ಮಾಡಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಕಾರ್ಯಾಲಯ ಸ್ಪಷ್ಟೀಕರಣ ನೀಡಿ ವೈರಲ್ ಆಗಿರುವ ವೀಡಿಯೋ ಕ್ಲಿಪ್‍ನ ಕೊನೆಯ ಮೂರು ಸೆಕೆಂಡ್‍ಗಳನ್ನು ತಿರುಚಲಾಗಿದೆ ಎಂದು ಆರೋಪಿಸಿದೆಯಲ್ಲದೆ, ಈ ರೀತಿ ಮಾಡಿ ಮುಖ್ಯಮಂತ್ರಿಯ ವರ್ಚಸ್ಸಿಗೆ ಧಕ್ಕೆ ತಂದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದೆ.

ಎಎನ್‍ಐ ತಾನು ಮೊದಲು ಪೋಸ್ಟ್ ಮಾಡಿದ್ದ ವೀಡಿಯೋವನ್ನು ವಾಪಸ್ ಪಡೆದಿದೆಯಾದರೂ ಆ ನಿರ್ದಿಷ್ಟ ವೀಡಿಯೋ ಕೆಲ ವಾಹಿನಿಗಳಲ್ಲಿ ಈಗಲೂ ಲಭ್ಯವಿದೆ. ಎಬಿಪಿ ಗಂಗಾ ಸುದ್ದಿ ವಾಹಿನಿಯಲ್ಲಿ ಕೂಡ ಆದಿತ್ಯನಾಥ್ ಅವರು ಬಳಸಿದ ನಿಂದನಾತ್ಮಕ ಪದಗಳನ್ನು ಕೇಳಬಹುದಾಗಿದೆ. ನ್ಯೂಸ್18 ಉತ್ತರ ಪ್ರದೇಶ ಕೂಡ ಇದೇ ವೀಡಿಯೋ ಪ್ರಸಾರ ಮಾಡಿದೆ.

ತರುವಾಯ ಬಿಜೆಪಿ ಪರ ಟ್ವಿಟರ್ ಹ್ಯಾಂಡಲ್‍ಗಳಾದ  @SocialTamasha ಹಾಗೂ @BefittingFacts ಆದಿತ್ಯನಾಥ್ ಬೆಂಬಲಕ್ಕೆ ನಿಂತಿವೆ. ವೈರಲ್ ವೀಡಿಯೋ ತಿರುಚಲ್ಪಟ್ಟಿದೆ ಎಂದು ತೋರಿಸುವ ಯತ್ನದ ಭಾಗವಾಗಿ  ಇನ್ನೊಂದು ವೀಡಿಯೋ ಪೋಸ್ಟ್ ಮಾಡಿದೆ. ಆದರೆ ಕೊನೆಯ ಮೂರು ಸೆಕೆಂಡ್ ಹೊರತು ಪಡಿಸಿ ಎಎನ್‍ಐ ಎರಡನೇ ಬಾರಿ ಪೋಸ್ಟ್ ಮಾಡಿದ ವೀಡಿಯೋದಂತೆಯೇ ಇದು ಇದೆ.

ಎಎನ್‍ಐ ವಾಪಸ್ ಪಡೆದಿರುವ ವೀಡಿಯೋ ಬೈಟ್ ನಲ್ಲಿ ಆದಿತ್ಯನಾಥ್ ಅವರು  ಮಾತನಾಡುತ್ತಾ "ನಾನು ಮಾನ್ಯ ಪ್ರಧಾನಿ, ಕೇಂದ್ರ ಆರೋಗ್ಯ ಸಚಿವಾಲಯಕ್ಕೆ  ಕೋವಿಡ್ ಲಸಿಕೆ ಉಚಿತವಾಗಿ ಒದಗಿಸಿದ್ದಕ್ಕೆ ನನ್ನ ಹೃದಯಾಂತರಾಳದಿಂದ ಧನ್ಯವಾದ ತಿಳಿಸುತ್ತೇನೆ. ದೇಶದ ವಿಜ್ಞಾನಿಗಳಿಗೆ ಧನ್ಯವಾದ ತಿಳಿಸುತ್ತೇನೆ. ಏನು ಮಾಡುತ್ತಿದ್ದೀಯಾ....(ಅವಾಚ್ಯ ಪದ) ''

ಆದರೆ ಎಎನ್‍ಐ ಎರಡನೇ ಬಾರಿ ಪೋಸ್ಟ್ ಮಾಡಿದ ವೀಡಿಯೋದಲ್ಲಿ  ಆದಿತ್ಯನಾಥ್ ಅವರು ಆರೋಗ್ಯ  ಸಚಿವಾಲಯವನ್ನು ಉಲ್ಲೇಖಿಸುವುದಿಲ್ಲ.

ವಾಸ್ತವವಾಗಿ ಆದಿತ್ಯನಾಥ್ ಅವರು ಎಎನ್‍ಐ ಸಿಬ್ಬಂದಿಯ ಎದುರೇ ನಿಂದನಾತ್ಮಕ ಪದ ಪ್ರಯೋಗಿಸಿದ್ದಾರೆ. ಆ ವೀಡಿಯೋ ಎಡಿಟ್ ಮಾಡಲಾಗಿದೆ ಎಂಬ ವಾದ ಸುಳ್ಳು. ಈ ಕುರಿತು ಸ್ಪಷ್ಟೀಕರಣ ನೀಡಬೇಕಾಗಿರುವ ಎಎನ್‍ಐ ಏನನ್ನೂ ಹೇಳುತ್ತಿಲ್ಲ.

ಕೃಪೆ: altnews.in

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News