ಮತದಾರರಿಗೆ ಮೋದಿ ಭಾವಚಿತ್ರವಿರುವ 1,000ರೂ. ಕೂಪನ್‌ ವಿತರಿಸುತ್ತಿರುವ ಬಿಜೆಪಿ: ಆರೋಪ

Update: 2021-04-07 10:34 GMT

ಕೊಲ್ಕತ್ತಾ: ಮಂಗಳವಾರ ಮೂರನೇ ಹಂತದ ವಿಧಾನಸಭಾ ಚುನಾವಣೆ ನಡೆದ ಸೌತ್ 24 ಪರಗಣ ಜಿಲ್ಲೆಯ ರಾಯ್ದಿಘಿ ಕ್ಷೇತ್ರದಲ್ಲಿ ಕ್ಯಾಶ್ ಕೂಪನ್‍ಗಳು ವಿವಾದಕ್ಕೀಡಾಗಿವೆ. ಬಿಜೆಪಿಯ ಚಿಹ್ನೆಯಿರುವ ಈ ಕೂಪನ್‍ನಲ್ಲಿ  ರೂ 1,000 ಎಂದು ನಮೂದಿಸಲಾಗಿದೆ. ಸೌತ್ 24 ಪರಗಣದಲ್ಲಿರುವ ಜೋಯ್ನಗರ್ ಎಂಬಲ್ಲಿ ಸಭೆಯೊಂದನ್ನು ಆಯೋಜಿಸಲು ಪಕ್ಷ ದೇಣಿಗೆ ಪಡೆದ ರಶೀದಿ ಇದೆಂದು ಬಿಜೆಪಿ ಹೇಳುತ್ತಿದೆ.

ಆದರೆ ಮತದಾರರ ಬೆಂಬಲವನ್ನು 'ಖರೀದಿಸುವ' ಉದ್ದೇಶದಿಂದ  ಈ ರೂ 1,000 ಮುಖಬೆಲೆಯ ಕೂಪನ್  ಅನ್ನು ಬಿಜೆಪಿ ವಿತರಿಸಿದೆ ಎಂದು ತೃಣಮೂಲ ಕಾಂಗ್ರೆಸ್ ಮತ್ತು ಸಿಪಿಎಂ ಆರೋಪಿಸುತ್ತಿವೆ. ಜೋಯ್ ನಗರ್‌ ನಲ್ಲಿ ಎಪ್ರಿಲ್ 1ರಂದು ನಡೆದ ಪ್ರಧಾನಿ ನರೇಂದ್ರ ಮೋದಿಯ ರ್ಯಾಲಿಯಲ್ಲಿ ಭಾಗವಹಿಸಿ ಬಿಜೆಪಿಗೆ ಮತ ನೀಡಿದರೆ ರೂ 1000 ನೀಡುವ ಭರವಸೆಯನ್ನು ಸ್ಥಳೀಯ ಬಿಜೆಪಿ ನಾಯಕತ್ವ ನೀಡಿದೆ ಎಂದು ತೃಣಮೂಲ ಮತ್ತು ಸಿಪಿಎಂ ಬೆಂಬಲಿಗರು ಹೇಳುತ್ತಿದ್ದಾರೆ.

ಸಭೆಯೊಂದರಲ್ಲಿ ಭಾಗವಹಿಸಿದ್ದಕ್ಕೆ ಹಾಗೂ ಬಿಜೆಪಿಗೆ ಮತ ನೀಡಿದ್ದಕ್ಕೆ "ಖಾತರಿ ಉಡುಗೊರೆ" ಆಫರ್ ಮಾಡಿ  ಈ ಕೂಪನ್ ತಮಗೆ ನೀಡಲಾಗಿತ್ತೆಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಪ್ರಧಾನಿಯ ರ್ಯಾಲಿಗಾಗಿ ಸಂಗ್ರಹಿಸಲಾದ ದೇಣಿಗೆಗಾಗಿ ನೀಡಲಾದ ರಶೀದಿ ಈ ಕೂಪನ್ ಆಗಿದೆ ಎಂದು ಬಿಜೆಪಿ ನಾಯಕ ಹಾಗೂ ಪಕ್ಷದ ರಾಯ್ದಿಘಿ ಅಭ್ಯರ್ಥಿ ಶಂತನು ಬಪುಲಿ ಹೇಳಿದ್ದಾರೆ. ಇವರು ತೃಣಮೂಲದಿಂದ ಬಿಜೆಪಿಗೆ ವಲಸೆ ಬಂದವರಾಗಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತದ ದೇಣಿಗೆ ಜನರು ಹೇಗೆ ನೀಡಬಲ್ಲರು ಎಂದು ಕೇಳಿದಾಗ ವೇತನ ಪಡೆಯುವವರು ಹಾಗೂ ವರ್ತಕರಿಂದ ಸಂಗ್ರಹಿಸಲಾಗುತ್ತದೆ ಎಂದರು ಆದರೆ ಹಲವಾರು ರೈತರ ಬಳಿಯೂ ಇಂತಹ ಕೂಪನ್ ಇದೆ ಎಂದು ಹೇಳಿದಾಗ ಈ ಕುರಿತು ಪರಿಶೀಲಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಬಿಜೆಪಿ ರ್ಯಾಲಿಗೆ ವಾಹನಗಳಲ್ಲಿ ಜನರನ್ನು ತರುವವರಿಗೆ ಕೂಡ ಬಾಡಿಗೆ ಮೊತ್ತದ ಕೂಪನ್ ನೀಡಲಾಗುತ್ತದೆ. ನಂತರ ಆ ಕೂಪನ್ ಹಾಜರು ಪಡಿಸಿದವರಿಗೆ ನಗದು ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಬಿಜೆಪಿಯ ಮಥುರಾಪುರ ಜಿಲ್ಲಾ ಸಮಿತಿ ಮುದ್ರಿಸಿರುವ ಈ ಕೂಪನ್‍ಗಳಲ್ಲಿ ರೂ 1,000 ಸ್ಪಷ್ಟವಾಗಿ ಬರೆಯಲಾಗಿದ್ದರೂ 'ದೇಣಿಗೆ' ಎಂಬ ಪದ ಎಲ್ಲಿಯೂ ಉಲ್ಲೇಖವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News