ದೇಶದಲ್ಲಿ ಒಂದೇ ದಿನ 1.26 ಲಕ್ಷ ಮಂದಿಗೆ ಕೋವಿಡ್ ಸೋಂಕು

Update: 2021-04-08 03:42 GMT

ಹೊಸದಿಲ್ಲಿ : ದೇಶದಲ್ಲಿ ಸತತ ಎರಡನೇ ದಿನ ಕೂಡಾ ಗರಿಷ್ಠ ಪ್ರಮಾಣದ ಕೋವಿಡ್-19 ಪ್ರಕರಣಗಳು ಸೇರ್ಪಡೆಯಾಗಿದ್ದು, ಬುಧವಾರ ದಾಖಲಾದ 1,26,260 ಸೋಂಕು ಪ್ರಕರಣ ಸರ್ವಕಾಲಿಕ ದಾಖಲೆಯಾಗಿದೆ. ಹಲವೆಡೆಗಳಲ್ಲಿ ಸಾಮಾಜಿಕ ಚಲನೆ ಮೇಲೆ ನಿರ್ಬಂಧ ವಿಧಿಸಲಾಗಿದೆ.

ಛತ್ತೀಸ್‌ಗಢದ ರಾಜಧಾನಿಯಲ್ಲಿ ಈ ತಿಂಗಳ 9ರಿಂದ 19ರವರೆಗೆ ಸಂಪೂರ್ಣ ಲಾಕ್‌ಡೌನ್ ವಿಧಿಸಲಾಗಿದ್ದು, ಪಂಜಾಬ್ ಸರ್ಕಾರ ರಾತ್ರಿ ಕರ್ಫ್ಯೂವನ್ನು ಮಾಸಾಂತ್ಯದವರೆಗೆ ವಿಸ್ತರಿಸಿದೆ.

ಬೆಂಗಳೂರಿನಲ್ಲಿ ಕೂಡಾ ಈಜುಕೊಳ, ಜಿಮ್ ಸೇರಿದಂತೆ ಹಲವೆಡೆ ನಿರ್ಬಂಧ ವಿಧಿಸಲಾಗಿದೆ. ಕೋವಿಡ್ ಎರಡನೇ ಅಲೆಯ ಅಬ್ಬರದ ಹಿನ್ನೆಲೆಯಲ್ಲಿ ಜನ ಗುಂಪು ಸೇರುವುದನ್ನು ತಡೆಯುವ ನಿಟ್ಟಿನಲ್ಲಿ ಲಾಕ್‌ಡೌನ್ ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ 1.26 ಲಕ್ಷ ಕೋವಿಡ್ ಪ್ರಕರಣಗಳ ಸೇರ್ಪಡೆಯೊಂದಿಗೆ ದೇಶದಲ್ಲಿ ಏಳು ದಿನಗಳ ಸರಾಸರಿ ದೈನಿಕ ಪ್ರಕರಣ 1,00,761ಕ್ಕೇರಿದಂತಾಗಿದೆ. ಅಂದರೆ ಮೊದಲ ಅಲೆಯ ಉತ್ತುಂಗವನ್ನು ಎರಡನೇ ಅಲೆ ಮೀರಿಸಿರುವುದು ಇದರಿಂದ ಸ್ಪಷ್ಟವಾಗುತ್ತದೆ.

2020ರ ಸೆಪ್ಟೆಂಬರ್ 16ರಂದು ಕೊನೆಗೊಂಡ ವಾರದಲ್ಲಿ ಪ್ರಕರಣಗಳ ಸರಾಸರಿ ಸಂಖ್ಯೆ 93,617 ಆಗಿತ್ತು. ಪ್ರಕರಣ ಏರಿಕೆ ತಡೆ ಪ್ರಯತ್ನವಾಗಿ ಪಂಜಾಬ್, ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರ ರಾತ್ರಿ ಕರ್ಫ್ಯೂ ವಿಧಿಸಿವೆ. ಮಹಾರಾಷ್ಟ್ರ ಬಳಿಕ ಗರಿಷ್ಠ ಪ್ರಕರಣಗಳು ವರದಿಯಾಗಿರುವ ಛತ್ತೀಸ್‌ಗಢದ ರಾಯಪುರದಲ್ಲಿ ಜಿಲ್ಲಾಡಳಿತ 11 ದಿನಗಳ ಲಾಕ್‌ಡೌನ್ ಘೋಷಿಸಿದೆ. ರಾಯಪುರದಲ್ಲಿ ಇದುವರೆಗೆ 76,427 ಪ್ರಕರಣಗಳು ವರದಿಯಾಗಿದ್ದು, 1001 ಮಂದಿ ಸಾವನ್ನಪ್ಪಿದ್ದಾರೆ. ಕಳೆದ ಆರು ದಿನಗಳಲ್ಲಿ 10,755 ಪ್ರಕರಣಗಳು ವರದಿಯಾಗಿದ್ದು, 93 ಮಂದಿ ಮೃತಪಟ್ಟಿದ್ದಾರೆ. ಬುಧವಾರ ರಾಜ್ಯದಲ್ಲಿ ದಾಖಲೆ ಸಂಖ್ಯೆಯ ಅಂದರೆ 10310 ಪ್ರಕರಣಗಳು ವರದಿಯಾಗಿವೆ.

ಬೆಂಗಳೂರಿನಲ್ಲಿ ಕೂಡಾ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಪಾರ್ಟಿ ಹಾಲ್‌ಗಳಲ್ಲಿ, ಅಪಾರ್ಟ್‌ಮೆಂಟ್ ಮತ್ತು ವಸತಿ ಸಂಕೀರ್ಣಗಳಲ್ಲಿ ಜನ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ನಗರ ವ್ಯಾಪ್ತಿಯ ಈಜುಕೊಳಗಳು ಹಾಗೂ ಜಿಮ್‌ಗಳನ್ನು ಮುಚ್ಚಲು ಆದೇಶಿಸಲಾಗಿದೆ. ರಾಜ್ಯದಲ್ಲಿ ಬುಧವಾರ ದಾಖಲಾದ 6976 ಪ್ರಕರಣಗಳ ಪೈಕಿ ಬೆಂಗಳೂರಿನಲ್ಲೇ 4991 ಪ್ರಕರಣಗಳು ಸೇರ್ಪಡೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News