ಲೈಂಗಿಕ ದೌರ್ಜನ್ಯ ಸಂತ್ರಸ್ತೆ, ಸಾಕ್ಷಿಗಳಿಗೆ ಪೊಲೀಸ್ ರಕ್ಷಣೆಯೊದಗಿಸಲು ಬಾಂಬೆ ಹೈಕೋರ್ಟ್ ಸೂಚನೆ

Update: 2021-04-08 11:25 GMT

ಮುಂಬೈ: ಉತ್ತರ ಪ್ರದೇಶದ ಕೆಲವೊಂದು ಘಟನಾವಳಿಗಳಲ್ಲಿ ಲೈಂಗಿಕ ಹಲ್ಲೆ ಪ್ರಕರಣಗಳ ಸಂತ್ರಸ್ತರ ಹಾಗೂ ಸಾಕ್ಷಿಗಳ  ಜೀವಕ್ಕೆ ಉಂಟಾದ ಅಪಾಯದ ಕುರಿತು ಕಳವಳ ವ್ಯಕ್ತಪಡಿಸಿದ ಬಾಂಬೆ ಹೈಕೋರ್ಟ್ ಇದೇ  ಪರಿಸ್ಥಿತಿ ಮಹಾರಾಷ್ಟ್ರದಲ್ಲಿ ಪುನರಾವರ್ತಿಸುವುದು ತನಗೆ ಬೇಕಿಲ್ಲ ಎಂದು ಹೇಳಿ ರಕ್ಷಣೆ ಕೋರಿ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯೊಬ್ಬರಿಗೆ ಉಚಿತವಾಗಿ ರಕ್ಷಣೆಯೊದಗಿಸುವಂತೆ ಮೀರಾ-ಭಾಯಂದರ್ ಠಾಣೆಯ ಡಿಸಿಪಿಗೆ ಸೂಚಿಸಿದೆ.

ಸಂತ್ರಸ್ತೆ ಸಲ್ಲಿಸಿದ ಅಪೀಲನ್ನು ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಹಾಗೂ ಮನೀಶ್ ಪಿತಾಲೆ ಅವರನ್ನೊಳಗೊಂಡ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ. ಈ ಸಂದರ್ಭ  ಸಂತ್ರಸ್ತೆ ಪರ ವಕೀಲೆ ತೃಪ್ತಿ ಭರಡಿ ಅವರು ನ್ಯಾಯಾಲಯಕ್ಕೆ ಪ್ರಕರಣದ ಕುರಿತು ಮಾಹಿತಿ ನೀಡಿದರಲ್ಲದೆ ತಮ್ಮ ಕಕ್ಷಿಗಾರರಾದ ಮಹಿಳೆ ರಾಜಸ್ಥಾನದವರಾಗಿದ್ದು  2011ರಲ್ಲಿ ಆಕೆಯ ಹೆತ್ತವರು ಆಕೆಯನ್ನು ಬಲವಂತದಿಂದ ಮುಂಬೈಯ ಡ್ಯಾನ್ಸ್ ಬಾರ್‍ನಲ್ಲಿ  ಆಕೆ 17 ವರ್ಷದವಳಿರುವಾಗ ಕೆಲಸ ಮಾಡುವಂತೆ ಮಾಡಿದ್ದರು. ನಂತರ  ಆಕೆಯ ಮೂವರು ಸೋದರಿಯರು ಹಾಗೂ ನಾಲ್ಕು ಅಪ್ರಾಪ್ತರನ್ನು ವೇಶ್ಯಾವಾಟಿಕೆಗೆ ತಳ್ಳಲಾಗಿತ್ತು ಹಾಗೂ ಅವರನ್ನು ಏಜಂಟನೊಬ್ಬ 2012 ಹಾಗೂ 2014ರ ನಡುವೆ ಮೂರು ಬಾರಿ ದುಬೈಗೆ ಕಳುಹಿಸಿದ್ದ. ಸಂತ್ರಸ್ತೆಗೆ ಮಾರ್ಚ್ 2020ರಲ್ಲಿ ತಾನು ಗರ್ಭಿಣಿ ಎಂದು ತಿಳಿದ ನಂತರವೂ  ಆಕೆ ವೇಶ್ಯಾವಾಟಿಕೆ ಮುಂದುವರಿಸದೇ ಇದ್ದರೆ ಆಕೆಯನ್ನು ಕೊಲೆಗೈಯ್ಯಯವುದಾಗಿ ಆಕೆಯ ತಂದೆ ಬೆದರಿಸಿದ್ದರು ಎಂದು ತಿಳಿದು ಬಂದಿದೆ.

ಮುಂದೆ ಆಗಸ್ಟ್ 2020ರಲ್ಲಿ ಮಗುವಿಗೆ ಜನ್ಮ ನೀಡಿದ ಆಕೆ ತಂದೆಯ ಬೆದರಿಕೆ ಹಿನ್ನೆಲೆಯಲ್ಲಿ  ಸ್ನೇಹಿತೆಯೊಬ್ಬರ ಜತೆ ನೆಲೆಸಿದ್ದರು ಎಂದು ವಿವರಿಸಿದ್ದಾರೆ. ಆದರೆ ಆಕೆಯ ತಂದೆ ಆಕೆ ಇರುವೆಡೆ ಇಬ್ಬರನ್ನು ಕಳುಹಿಸಿ ಮತ್ತೆ ಆಕೆಗೆ ವೇಶ್ಯಾವಾಟಿಕೆ ನಡೆಸುವಂತೆ ಬಲವಂತ ಪಡಿಸಿ ಆಕೆಯ ಸ್ನೇಹಿತೆಗೂ ಬೆದರಿಕೆಯೊಡ್ಡಿದ ನಂತರ ಆಕೆ ಭಾಯಂದರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಇದ್ದ ನಂತರ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News