ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಪಿ ಮಸೀದಿ ಸಂಕೀರ್ಣ ಸಮೀಕ್ಷೆ ನಡೆಸಲು ಕೋರ್ಟ್‌ ಅನುಮತಿ

Update: 2021-04-08 13:52 GMT

ಹೊಸದಿಲ್ಲಿ: ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಪಿ ಮಸೀದಿ ಸಂಕೀರ್ಣದ ಸಮೀಕ್ಷೆ ನಡೆಸಲು ಉತ್ತರ ಪ್ರದೇಶದ ವಾರಣಾಸಿ ನಗರದ ನ್ಯಾಯಾಲಯವು ಗುರುವಾರ ಭಾರತೀಯ ಪುರಾತತ್ವ ಸಮೀಕ್ಷೆಗೆ ಅನುಮತಿ ನೀಡಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.

ನ್ಯೂಸ್ 18 ರ ಪ್ರಕಾರ, ವಕೀಲ ವಿ.ಎಸ್.ರಸ್ತೋಗಿ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಈ ನಿರ್ದೇಶನ ಬಂದಿದೆ. ಜ್ಞಾನವಪಿ ಮಸೀದಿ ಇರುವ ಭೂಮಿಯನ್ನು ಹಿಂದೂಗಳಿಗೆ ನೀಡಬೇಕು ಎಂದು ಅವರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ. 1664 ರಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ್ 2,000 ವರ್ಷಗಳಷ್ಟು ಹಳೆಯದಾದ ಕಾಶಿ ವಿಶ್ವನಾಥ ದೇವಾಲಯದ ಒಂದು ಭಾಗವನ್ನು ಮಸೀದಿ ನಿರ್ಮಿಸುವ ಸಲುವಾಗಿ ಧ್ವಂಸಗೈದಿದ್ದಾನೆ ಎಂದು ರಸ್ತೋಗಿ ಅರ್ಜಿಯಲ್ಲಿ ಹೇಳಿದ್ದಾರೆ.

ಸಮೀಕ್ಷೆಯ ವೆಚ್ಚವನ್ನು ಉತ್ತರ ಪ್ರದೇಶ ಸರ್ಕಾರ ಭರಿಸಲಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ದೇವಾಲಯದ ಮುಖ್ಯ ದೇವತೆ ವಿಶ್ವೇಶ್ವರ ಪರವಾಗಿ ರಸ್ತೋಗಿಯ ಅರ್ಜಿಯನ್ನು 2019 ರ ಡಿಸೆಂಬರ್‌ನಲ್ಲಿ ಸಲ್ಲಿಸಲಾಗಿದ್ದು, ಪುರಾತತ್ವ ಸರ್ವೇಕ್ಷಣಾ ಸಮೀಕ್ಷೆ ಕೈಗೊಳ್ಳುವಂತೆ ಕೋರಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಜನವರಿಯಲ್ಲಿ ಅಂಜುಮನ್‌ ಇಂತಿಝಾಮಿಯಾ ಮಸೀದಿ ಕಮಿಟಿಯು ರಸ್ತೋಗಿಯ ಅರ್ಜಿಯ ಕುರಿತಾದಂತೆ ಆಕ್ಷೇಪಣೆ ಸಲ್ಲಿಸಿತ್ತು. 1991ರಲ್ಲಿ ಈ ಕುರಿತಾದಂತೆ ಮೊದಲ ಅರ್ಜಿ ಸಲ್ಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News