ಲಂಡನ್: ಮ್ಯಾನ್ಮಾರ್ ರಾಯಭಾರಿಯನ್ನು ಕಚೇರಿಯಿಂದ ದಬ್ಬಿದ ಸೇನಾ ಪ್ರತಿನಿಧಿ

Update: 2021-04-08 15:50 GMT

ಲಂಡನ್, ಎ. 8: ಮ್ಯಾನ್ಮಾರ್ ಸೇನೆಗೆ ಸಂಬಂಧಿಸಿದ ವ್ಯಕ್ತಿಯೊಬ್ಬರು ರಾಯಭಾರ ಕಚೇರಿಯನ್ನು ಆಕ್ರಮಿಸಿಕೊಂಡಿದ್ದಾರೆ ಹಾಗೂ ನನ್ನನ್ನು ಕಟ್ಟಡದೊಳಗೆ ಪ್ರವೇಶಿಸಲು ಬಿಡುತ್ತಿಲ್ಲ ಎಂದು ಬ್ರಿಟನ್‌ಗೆ ಮ್ಯಾನ್ಮಾರ್ ರಾಯಭಾರಿ ಕ್ಯಾವ್ ಝ್ವಾರ್ ಮಿನ್ ಬುಧವಾರ ಆರೋಪಿಸಿದ್ದಾರೆ.

ಮ್ಯಾನ್ಮಾರ್‌ನ ಪದಚ್ಯುತ ನಾಯಕಿ ಆಂಗ್ ಸಾನ್ ಸೂ ಕಿಯನ್ನು ಬಿಡುಗಡೆ ಮಾಡುವಂತೆ ಸೇನಾ ಜನರಲ್‌ಗಳಿಗೆ ಅವರು ಕರೆ ನೀಡಿದ ಒಂದು ತಿಂಗಳ ಬಳಿಕ ಈ ಬೆಳವಣಿಗೆ ನಡೆದಿದೆ.

ಬುಧವಾರ ಮ್ಯಾನ್ಮಾರ್ ರಾಯಭಾರಿಯ ಸಹಾಯಕರೊಬ್ಬರು ಸೇನೆಯ ಆದೇಶದಂತೆ ರಾಯಭಾರಿಯನ್ನು ಕಚೇರಿಯಿಂದ ಹೊರಗೆ ಹಾಕಿ ಕಚೇರಿಯ ಬಾಗಿಲಿಗೆ ಬೀಗ ಹಾಕಿದ್ದಾರೆ.

ಮ್ಯಾನ್ಮಾರ್ ರಾಯಭಾರಿಯನ್ನು ಕಚೇರಿಯಿಂದ ಹೊರಹಾಕಲಾಗಿದೆ ಎಂಬ ಸುದ್ದಿ ಹಬ್ಬಿದ ಬಳಿಕ ಲಂಡನ್‌ನ ಮೇಫೇರ್ ಉಪನಗರದಲ್ಲಿರುವ ಮ್ಯಾನ್ಮಾರ್ ರಾಯಭಾರ ಕಚೇರಿಯ ಹೊರಗಡೆ ಜನರು ರಾಯಭಾರಿಯ ಜೊತೆಗೆ ಪ್ರತಿಭಟನೆ ನಡೆಸಿದರು.

ರಾಯಭಾರ ಕಚೇರಿಯ ಒಳಗೆ ಯಾರಿದ್ದಾರೆ ಎಂಬ ಪ್ರಶ್ನೆಗೆ, ‘‘ರಕ್ಷಣಾ ಇಲಾಖೆಯ ಪ್ರತಿನಿಧಿಯಿದ್ದಾರೆ. ಅವರು ನನ್ನ ರಾಯಭಾರ ಕಚೇರಿಯನ್ನು ಆಕ್ರಮಿಸಿಕೊಂಡಿದ್ದಾರೆ’’ ಎಂದು ಕ್ಯಾವ್ ಝ್ವಾರ್ ಮಿನ್ ಹೇಳಿದರು.

‘‘ಇದು ನನ್ನ ಕಚೇರಿ’’ ಎಂದು ಹೇಳಿದ ಅವರು, ‘‘ಇಡೀ ರಾತ್ರಿ ನಾನು ರಾಯಭಾರ ಕಚೇರಿಯ ಹೊರಗೆ ಕುಳಿತುಕೊಳ್ಳುತ್ತೇನೆ’’ ಎಂದು ಎಎಫ್‌ಪಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದರು.

ಸೇನಾ ರಾಯಭಾರಿಯನ್ನು ತಿರಸ್ಕರಿಸಿ: ಬ್ರಿಟನ್‌ಗೆ ಮ್ಯಾನ್ಮಾರ್ ರಾಯಭಾರಿ ಕರೆ

ಮ್ಯಾನ್ಮಾರ್ ರಾಯಭಾರಿಯಾಗಿ ಸೇನೆಯ ಪ್ರತಿನಿಧಿಗೆ ಮಾನ್ಯತೆ ನೀಡಬೇಡಿ ಹಾಗೂ ಅವರನ್ನು ವಾಪಸ್ ಮ್ಯಾನ್ಮಾರ್‌ಗೆ ಕಳುಹಿಸಿ ಎಂದು ಬ್ರಿಟನ್‌ಗೆ ಮ್ಯಾನ್ಮಾರ್ ರಾಯಭಾರಿ ಕ್ಯಾವ್ ಝ್ವಾರ್ ಮಿನ್ ಬ್ರಿಟಿಶ್ ಸರಕಾರವನ್ನು ಗುರುವಾರ ಒತ್ತಾಯಿಸಿದ್ದಾರೆ.

ಸೇನೆಯ ಪ್ರತಿನಿಧಿಯು ರಾಯಭಾರ ಕಚೇರಿಯಿಂದ ಅವರನ್ನು ಹೊರದಬ್ಬಿದ ಒಂದು ದಿನದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

‘‘ಸೇನಾ ಸರಕಾರಕ್ಕಾಗಿ ಕೆಲಸ ಮಾಡುವ ವ್ಯಕ್ತಿಗಳನ್ನು ಬ್ರಿಟನ್ ಸರಕಾರ ಬೆಂಬಲಿಸುವುದಿಲ್ಲ ಎಂದು ನಾವು ಭಾವಿಸುತ್ತೇವೆ. ಅವರನ್ನು ವಾಪಸ್ ಕಳುಹಿಸುವಂತೆಯೂ ನಾವು ಬ್ರಿಟನ್ ಸರಕಾರವನ್ನು ಒತ್ತಾಯಿಸುತ್ತೇವೆ’’ ಎಂದು ತನ್ನ ವಕ್ತಾರರ ಮೂಲಕ ನೀಡಿದ ಹೇಳಿಕೆಯಲ್ಲಿ ಮ್ಯಾನ್ಮಾರ್ ರಾಯಭಾರಿ ಹೇಳಿದ್ದಾರೆ.

ಸೇನೆಯ ಪ್ರತಿನಿಧಿಗೆ ಅಂಗೀಕಾರ ನೀಡುವುದು ಅನಿವಾರ್ಯ: ಬ್ರಿಟನ್

ಮ್ಯಾನ್ಮಾರ್ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿದೆ ಎಂಬುದಾಗಿ ಅಲ್ಲಿನ ಸೇನಾ ಸರಕಾರ ಅಧಿಕೃತ ಅಧಿಸೂಚನೆ ಹೊರಡಿಸಿದ ಬಳಿಕ, ರಾಯಭಾರಿಗೆ ನೀಡಲಾಗಿರುವ ಮಾನ್ಯತೆಯನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ ಎಂದು ಬ್ರಿಟನ್ ಗುರುವಾರ ಹೇಳಿದೆ.

ರಾಜತಾಂತ್ರಿಕ ನೀತಿಗೆ ಅನುಸಾರವಾಗಿ, ರಾಯಭಾರಿ ಕ್ಯಾವ್ ಝ್ವಾರ್ ಮಿನ್‌ಗೆ ಸಂಬಂಧಿಸಿ ಮ್ಯಾನ್ಮಾರ್ ಸೇನಾಡಳಿತ ತೆಗೆದುಕೊಂಡಿರುವ ನಿರ್ಧಾರವನ್ನು ಬ್ರಿಟನ್ ಅಂಗೀಕರಿಸಬೇಕಾಗುತ್ತದೆ ಎಂಬುದಾಗಿ ಸರಕಾರದ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News