ಪಿಎಂ ಕೇರ್ಸ್ ನಿಧಿಯಡಿ ನೀಡಿದ ವೆಂಟಿಲೇಟರ್ ದೋಷಯುಕ್ತ: ರಾಜಸ್ತಾನ ಸರಕಾರ

Update: 2021-04-08 16:15 GMT

ಜೈಪುರ, ಎ.8: ಕೊರೋನ ಸೋಂಕು ಚಿಕಿತ್ಸೆಯಲ್ಲಿ ಬಳಸಲು ಪಿಎಂ ಕೇರ್ಸ್ ನಿಧಿಯಡಿ ಪೂರೈಸಿರುವ ವೆಂಟಿಲೇಟರ್‌ಗಳು ದೋಷಯುಕ್ತವಾಗಿವೆ ಎಂದು ರಾಜಸ್ತಾನ ಸರಕಾರ ಕೇಂದ್ರ ಸರಕಾರಕ್ಕೆ ಪತ್ರ ಬರೆದಿರುವುದಾಗಿ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಗುರುವಾರ ವರದಿ ಮಾಡಿದೆ.

ರಾಜ್ಯದಾದ್ಯಂತದ ಮೆಡಿಕಲ್ ಕಾಲೇಜು ಆಸ್ಪತ್ರೆಗಳಿಂದ ಮಾಹಿತಿ ಪಡೆದ ಬಳಿಕ ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿರುವುದಾಗಿ ರಾಜಸ್ತಾನದ ವೈದ್ಯಕೀಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ವೈಭವ್ ಗಾಲ್ರಿಯಾ ಹೇಳಿದ್ದಾರೆ.

ಸೋಮವಾರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚಿಸಲಾಗಿದೆ. ಪಿಎಂ ಕೇರ್ಸ್ ನಿಧಿಯಡಿ ಒದಗಿಸಲಾದ 85 ವೆಂಟಿಲೇಟರ್‌ಗಳು ದೋಷಪೂರ್ಣವಾಗಿದೆ. 1ರಿಂದ 2 ಗಂಟೆಯವರೆಗೆ ಕಾರ್ಯ ನಿರ್ವಹಿಸಿದ ಬಳಿಕ ವೆಂಟಿಲೇಟರ್‌ಗಳು ಸ್ತಬ್ಧವಾಗುತ್ತವೆ. ತುರ್ತು ಸೇವಾ ವಿಭಾಗದಡಿ ಕಾರ್ಯನಿರ್ವಹಿಸುವ ವೈದ್ಯರಿಗೆ ಪಿಎಂ ಕೇರ್ಸ್ ವೆಂಟಿಲೇಟರ್‌ಗಳ ಬಗ್ಗೆ ವಿಶ್ವಾಸವಿಲ್ಲ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಉದಯ್‌ಪುರದ ಟಾಗೋರ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಲಖನ್ ಪೊಸ್ವಾಲ್ ಹೇಳಿದ್ದಾರೆ.

 ಬಿಕಾನೇರ್‌ನ ಸರ್ದಾರ್ ಪಟೇಲ್ ಮೆಡಿಕಲ್ ಕಾಲೇಜು ಹಾಗೂ ಪ್ರಿನ್ಸ್ ಬಿಜಯ್ ಸಿಂಗ್ ಸ್ಮಾರಕ ಆಸ್ಪತ್ರೆಯ ಪ್ರಾಂಶುಪಾಲರೂ ದೋಷಯುಕ್ತ ವೆಂಟಿಲೇಟರ್‌ನಿಂದ ಆಗಿರುವ ಸಮಸ್ಯೆಯನ್ನು ವಿವರಿಸಿದ್ದಾರೆ ಎಂದು ವರದಿಯಾಗಿದೆ. ವೆಂಟಿಲೇಟರ್‌ಗಳನ್ನು ಬಳಿಕ ಸುಧಾರಣೆಗೊಳಿಸಿದರೂ ಇವುಗಳನ್ನು ಬಳಸಿಲ್ಲ ಎಂದು ಸಭೆಯಲ್ಲಿ ಪಾಲ್ಗೊಂಡವರು ಹೇಳಿದ್ದಾರೆ. ಕಾರ್ಯ ನಿರ್ವಹಿಸುವಾಗ ಇದ್ದಕ್ಕಿದ್ದಂತೆ ಒತ್ತಡ ಕುಸಿಯುವ ಸಮಸ್ಯೆ ವೆಂಟಿಲೇಟರ್‌ನಲ್ಲಿದೆ. ವೆಂಟಿಲೇಟರ್‌ನಲ್ಲಿ ವ್ಯಕ್ತಿಗಳನ್ನು ಇಡುವ ಸಂದರ್ಭ ಏಕರೀತಿಯ ಒತ್ತಡದ ಅಗತ್ಯವಿದೆ. ಯಾಕೆಂದರೆ ಇದು ಬದುಕು ಮತ್ತು ಸಾವಿನ ಪ್ರಶ್ನೆಯಾಗಿದೆ.

 ಆದ್ದರಿಂದ ಈಗ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಡಿ ಪಡೆಯಲಾದ ಹಳೆಯ ವೆಂಟಿಲೇಟರ್‌ಗಳನ್ನು ಬಳಸಲಾಗುತ್ತಿದೆ ಎಂದು ವೈಭವ್ ಗಾಲ್ರಿಯಾ ಹೇಳಿದ್ದಾರೆ. ಸಮಸ್ಯೆಯ ಬಗ್ಗೆ ಕಳೆದ ಡಿಸೆಂಬರ್‌ನಲ್ಲಿ ಕೋವಿಡ್ ಕ್ರಿಯಾಪಡೆಯ ಮುಖ್ಯಸ್ಥ ವಿಕೆ ಪಾಲ್ ಹಾಗೂ ಕೇಂದ್ರ ಸರಕಾರದ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದು ಅವರು ವೆಂಟಿಲೇಟರ್‌ಗಳ ಉತ್ಪಾದಕರೊಂದಿಗೆ ಮಾತನಾಡಿದ ಬಳಿಕ ಸಾಫ್ಟ್‌ವೇರ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ ಏನೂ ಪ್ರಯೋಜನವಾಗಿಲ್ಲ ಎಂದು ಗಾಲ್ರಿಯಾ ಹೇಳಿದ್ದಾರೆ. ಸಮಸ್ಯೆಯ ಬಗ್ಗೆ ಕೇಂದ್ರಕ್ಕೆ ಮಾಹಿತಿ ನೀಡುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಕೇಂದ್ರ ಸರಕಾರ ನಮಗೆ 1000 ವೆಂಟಿಲೇಟರ್‌ಗಳನ್ನು ರವಾನಿಸಿದ್ದು ನಾವು ಅವನ್ನು ಅಳವಡಿಸಿದ್ದೇವೆ. ಆದರೆ ಎರಡು ಗಂಟೆಯೊಳಗೆ ಕೆಟ್ಟುಹೋಗಿದೆ ಎಂದು ರಾಜ್ಯದ ಆರೋಗ್ಯ ಸಚಿವ ರಘು ಶರ್ಮ ಹೇಳಿದ್ದಾರೆ. ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ‘ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಯಂತ್ರದಲ್ಲಿರುವ ದೋಷದ ಬಗ್ಗೆ ನಾವು ಹೇಳುತ್ತಿದ್ದೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News