ಬಿಜೆಪಿ ಆಡಳಿತದ ರಾಜ್ಯಗಳಿಗೆ ಕೊರೋನ ಲಸಿಕೆಯ ಅಧಿಕ ಡೋಸ್: ಮಹಾರಾಷ್ಟ್ರ ಸಚಿವ ಆರೋಪ

Update: 2021-04-08 16:17 GMT

ಮುಂಬೈ, ಎ. 8: ಅನುಮೋದಿತ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆಗಳ ಪೂರೈಕೆಯಲ್ಲಿ ಕೇಂದ್ರ ಸರಕಾರ ತಾರತಮ್ಯ ಎಸಗಿದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಗುರುವಾರ ಆರೋಪಿಸಿದ್ದಾರೆ.

ಬಿಜೆಪಿ ಆಡಳಿತ ಇರುವ ರಾಜ್ಯಗಳು ಕೋವಿಡ್-19 ಲಸಿಕೆಗಳ ಹೆಚ್ಚು ಡೋಸ್‌ಗಳನ್ನು ಪಡೆದುಕೊಂಡಿವೆ. ‘‘ನಾವು ಹೆಚ್ಚುವರಿ ದಾಸ್ತಾನು ಪಡೆದಿದ್ದೇವೆ ಎಂಬ ಮಾಹಿತಿಯನ್ನು ಈಗಷ್ಟೇ ಪಡೆದಿದ್ದೇವೆ. ನಾವು 17 ಲಕ್ಷ ಡೋಸ್‌ಗಳನ್ನು ಪಡೆದಿದ್ದೇವೆ. ನಮಗೆ 40 ಲಕ್ಷ ಡೋಸ್‌ಗಳ ಬೇಡಿಕೆ ಇದೆ. ಆದರೆ, ಈ ಬೇಡಿಕೆಗೆ ಹೋಲಿಸಿದರೆ, ಪಡೆದಿರುವುದು ಇದು ತುಂಬಾ ಕಡಿಮೆ’’ ಎಂದ ರಾಜೇಶ್ ಟೋಪೆ ಹೇಳಿದ್ದಾರೆ. ಕೋವಿಡ್-19 ಲಸಿಕೆ ನೀಡುವುದರಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿದ್ದರೂ ಇತರ ರಾಜ್ಯಗಳಿಗೆ ಬೃಹತ್ ದಾಸ್ತಾನು ನೀಡಲಾಗಿದೆ. ಬಿಜೆಪಿ ಆಡಳಿತ ಇರುವ ಉತ್ತರಪ್ರದೇಶಕ್ಕೆ ಒಂದು ವಾರಕ್ಕೆ 48 ಲಕ್ಷ ಡೋಸ್‌ಗಳನ್ನು ಪೂರೈಸಲಾಗಿದೆ.

ಆದರೆ, ಮಧ್ಯಪ್ರದೇಶಕ್ಕೆ 40 ಲಕ್ಷ, ಗುಜರಾತ್‌ಗೆ 30 ಲಕ್ಷ, ಹರ್ಯಾಣಕ್ಕೆ 24 ಲಕ್ಷ ಡೋಸ್‌ಗಳನ್ನು ಪೂರೈಸಲಾಗಿದೆ. ಗುಜರಾತ್‌ನಲ್ಲಿ 6 ಕೋಟಿ ಜನಸಂಖ್ಯೆ ಇದೆ. ಅದು 1 ಕೋಟಿ ಡೋಸ್‌ಗಳನ್ನು ಪಡೆದುಕೊಂಡಿದೆ. ನಮ್ಮಲ್ಲಿ 12 ಕೋಟಿ ಜನಸಂಖ್ಯೆ ಇದೆ. ನಾವು 1.04 ಡೋಸ್‌ಗಳನ್ನು ಪಡೆದುಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ. ನಾನು ಈ ತಾರತಮ್ಯದ ಬಗ್ಗೆ ಡಾ. ಹರ್ಷವರ್ಧನ್ ಅವರಲ್ಲಿ ಪ್ರಶ್ನಿಸಿದೆ.

ನಮ್ಮಲ್ಲಿ ಅತ್ಯಧಿಕ ಜನಸಂಖ್ಯೆ, ಅತ್ಯಧಿಕ ಪ್ರಕರಣಗಳು ಇವೆ. 57 ಸಾವಿರ ಸಾವು ಸಂಭವಿಸಿದೆ. ಹಾಗಿದ್ದರೂ ಈ ತಾರತಮ್ಯ ಯಾಕೆ? ಎಂದು ಪ್ರಶ್ನಿಸಿದ್ದೆ. ಅದಕ್ಕೆ ಅವರು ಈ ಬಗ್ಗೆ ಸಂಬಂಧಿತ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು ಎಂದರು. ರಾಜ್ಯದಲ್ಲಿ ಕೊರೋನ ಲಸಿಕೆಯ ಕೊರತೆಯ ಕುರಿತು ಈ ಹಿಂದೆ ಮಾಡಿದ ಪ್ರತಿಪಾದನೆಯನ್ನು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ನಿರಾಕರಿಸಿದ ಬಳಿಕ ಟೋಪೆ ಈ ಆರೋಪ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News