ಕೊರೋನ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ: ತಾಯ್ನಾಡಿನತ್ತ ಮುಖ ಮಾಡುತ್ತಿರುವ ವಲಸೆ ಕಾರ್ಮಿಕರು

Update: 2021-04-08 16:26 GMT
ಸಾಂದರ್ಭಿಕ ಚಿತ್ರ 

ಹೊಸದಿಲ್ಲಿ, ಎ. 8: ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವಂತೆ ಹಲವು ರಾಜ್ಯಗಳು ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯದ ಲಾಕ್‌ಡೌನ್ ಜಾರಿಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭವಿಷ್ಯದ ಬಗೆಗಿನ ಅನಿಶ್ಚಿತತೆಯಿಂದಾಗಿ ವಲಸೆ ಕಾರ್ಮಿಕರು ತಮ್ಮ ತಾಯ್ನಿಡಿನತ್ತ ಮುಖ ಮಾಡುತ್ತಿದ್ದಾರೆ. ಕೊರೋನ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿರುವುದರಿಂದ ಮಹಾರಾಷ್ಟ್ರ, ಮಧ್ಯಪ್ರದೇಶ, ದಿಲ್ಲಿ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳು ರಾತ್ರಿ ಕರ್ಫ್ಯೂ ಹಾಗೂ ಲಾಕ್‌ಡೌನ್ ಸೇರಿದಂತೆ ಹಲವು ನಿರ್ಬಂಧಗಳನ್ನು ಘೋಷಿಸುತ್ತಿವೆ.

ದಿಲ್ಲಿಯ ಆನಂದ್ ವಿಹಾರ್ ಬಸ್ ಟರ್ಮಿನಲ್‌ನಿಂದ ಹಲವು ವಲಸೆ ಕಾರ್ಮಿಕರು ತಮ್ಮ ರಾಜ್ಯಕ್ಕೆ ಮರಳುತ್ತಿರುವುದು ಕಂಡು ಬಂದಿದೆ. ಇನ್ನೊಂದು ಲಾಕ್‌ಡೌನ್ ಭೀತಿಯಿಂದ ತಾವು ತಮ್ಮ ತಾಯ್ನೊಡಿಗೆ ಮರಳುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಗುಜರಾತ್‌ನ ಸೂರತ್ ಹಾಗೂ ಅಹ್ಮದಾಬಾದ್‌ನಿಂದ ಹಲವು ವಲಸೆ ಕಾರ್ಮಿಕರು ತಮ್ಮ ಕುಟುಂಬದೊಂದಿಗೆ ತಾಯ್ನಾಡಿಗೆ ಮರಳುತ್ತಿದ್ದಾರೆ. ಆದರೆ, ಸರಕಾರಿ ಅಧಿಕಾರಿಗಳು, ‘‘ನಗರ ತ್ಯಜಿಸುತ್ತಿರುವ ವಲಸೆ ಕಾರ್ಮಿಕರ ಸಂಖ್ಯೆ ಅತಿ ಕಡಿಮೆ ಇದೆ. ಜನರು ಒಂದು ಕಡೆಯಿಂದ ಇನ್ನೊಂದು ಕಡೆಗೆ ತೆರಳುತ್ತಿರುವುದನ್ನು ತಡೆಯಲು ಸಾಧ್ಯವಿಲ್ಲ’’ ಎಂದು ಗುರುವಾರ ಹೇಳಿದ್ದಾರೆ. ‘‘ವಲಸೆ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿ ತಾಯ್ನೆಡಿಗೆ ಮರಳುತ್ತಿದ್ದಾರೆ ಎಂಬುದಕ್ಕೆ ಯಾವುದೇ ಔಪಚಾರಿಕ ವರದಿ ಇಲ್ಲ. ಆದರೆ, ವಲಸೆ ಕಾರ್ಮಿಕರು ತೆರಳುವ ಸಂದರ್ಭ ಯಾವುದೇ ಸಮಸ್ಯೆಗೆ ಸಿಲುಕದಂತೆ ಖಾತರಿ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದೇವೆ’’ ಎಂದು ರಾಜ್ಯ ಕಾರ್ಮಿಕ ಹಾಗೂ ಉದ್ಯೋಗ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿಫುಲ್ ಮಿತ್ರಾ ಹೇಳಿದ್ದಾರೆ.

ಮುಂಬೈಯಿಂದಲೂ ಹಲವು ವಲಸೆ ಕಾರ್ಮಿಕರು ತಮ್ಮ ತಾಯ್ನಾಡಿಗೆ ಮರಳುತ್ತಿದ್ದಾರೆ. ಹೆಚ್ಚಿನವರು ಕೊರೋನ ಭೀತಿಯಿಂದ ತೆರಳುವ ಬದಲು, ಇಲ್ಲೇ ಇದ್ದರೆ ದೈನಂದಿನ ಜೀವನ ದುಸ್ತರವಾಗಬಹುದು ಎಂದು ಮರಳುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪುಣೆಯ ಹೋಟೆಲ್ ಮಾಲಕರ ಸಂಘಟನೆಯ ಅಧ್ಯಕ್ಷ ಗಣೇಶ್ ಶೆಟ್ಟಿ, ನಗರದಲ್ಲಿ ಹೊಟೇಲ್, ಬಾರ್ ಹಾಗೂ ರೆಸ್ಟೋರೆಂಟ್‌ಗಳು ಮುಚ್ಚುತ್ತಿರುವುದರಿಂದ ಕನಿಷ್ಠ ಶೇ. 50 ವಲಸೆ ಕಾರ್ಮಿಕರು ತಮ್ಮ ತಾಯ್ನಾಡಿಗೆ ಮರಳಲು ಚಿಂತಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಿರು ಬಿಸಿಲಿನ ನಡುವೆ ಸಾವಿರಾರು ವಲಸೆ ಕಾರ್ಮಿಕರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದುಕೊಂಡ, ಸೈಕಲ್‌ನಲ್ಲಿ ಸಾವಿರಾರು ಕಿ.ಮೀ. ಕ್ರಮಿಸಿ ತಮ್ಮ ತಾಯ್ನಾಡಿಗೆ ಮರಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News