ಖಾಸಗಿತನದ ಆತಂಕದ ಹೊರತಾಗಿಯು ವಾಹನಗಳ ದತ್ತಾಂಶವನ್ನು ಖಾಸಗಿ ಕಂಪೆನಿಯೊಂದಿಗೆ ಹಂಚಿಕೊಂಡ ಕೇಂದ್ರ: ವರದಿ

Update: 2021-04-08 16:42 GMT

ಹೊಸದಿಲ್ಲಿ, ಎ. 8: ಅಧಿಕಾರಿಗಳು ಖಾಸಗಿತನ ಹಾಗೂ ದತ್ತಾಂಶ ಬಳಕೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಬಳಿಕವೂ ಭಾರತ ಸರಕಾರ 2014ರಲ್ಲಿ ವಾಹನ ನೋಂದಣಿ ದತ್ತಾಂಶವನ್ನು ಭಾರತದ ಖಾಸಗಿ ಕಂಪೆನಿಗೆ ಮಾರಾಟ ಮಾಡಿದೆ ಎಂದು ‘ದಿ ವೈರ್’ ವರದಿ ಹೇಳಿದೆ.

ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಸಲ್ಲಿಸಲಾದ ಅರ್ಜಿಗೆ ದೊರಕಿದ ಮಾಹಿತಿ ಪ್ರಕಾರ, ಅಧಿಕಾರಿಗಳ ಆಕ್ಷೇಪದ ಹೊರತಾಗಿಯೂ ದೇಶಾದ್ಯಂತ ವಾಹನಗಳ ನೋಂದಣಿ ದತ್ತಾಂಶವನ್ನು ಕೇಂದ್ರ ಸರಕಾರ ಫಾಸ್ಟ್ ಲೇನ್ ಅಟೋಮೋಟಿವ್ ಪ್ರೈವೇಟ್ ಲಿಮಿಟೆಡ್ (ಎಫ್‌ಎಲ್‌ಎ) ಎಂದು ಕರೆಯಲಾಗುವ ಭಾರತೀಯ ಕಂಪೆನಿಯೊಂದಿಗೆ 2014 ಸೆಪ್ಟಂಬರ್‌ನಲ್ಲಿ ಹಂಚಿಕೊಂಡಿದೆ. ದತ್ತಾಂಶವನ್ನು ಈ ಕಂಪೆನಿಗೆ ಅತಿ ಅಗ್ಗದ ಬೆಲೆಗೆ ಮಾರಾಟ ಮಾಡಲಾಗಿದೆ ಎಂದು ವರದಿ ಹೇಳಿದೆ.

ಫಾಸ್ಟ್ ಲೇನ್‌ನೊಂದಿಗಿನ ಕೇಂದ್ರ ಸರಕಾರದ 2014ರ ಒಪ್ಪಂದ ಎರಡು ವರ್ಷಗಳ ಕಾಲ ಚಾಲ್ತಿಯಲ್ಲಿತ್ತು. ಆದರೆ, ಅದರ ನಂತರವೂ ದತ್ತಾಂಶ ಕಂಪೆನಿಯ ವಶದಲ್ಲಿತ್ತು. ನಾಗರಿಕರ ಖಾಸಗಿ ದತ್ತಾಂಶ ಕಂಪೆನಿಗೆ ಲಭ್ಯವಾಗದೇ ಇದ್ದರೂ ಈ ಒಪ್ಪಂದ ಫಾಸ್ಟ್ ಲೇನ್ ಹಲವು ವರ್ಷಗಳ ಕಾಲ ಕೋಟ್ಯಂತರ ರೂಪಾಯಿ ಗಳಿಸಲು ನೆರವಾಯಿತು ಎಂದು ವರದಿ ಹೇಳಿದೆ.

ದೇಶದಲ್ಲಿ ಸಂಕೀರ್ಣ ಸೈಬರ್ ಮೂಲಭೂತ ಸೌಕರ್ಯದ ಭದ್ರತೆಯ ಹೊಣೆ ಹೊತ್ತ ಸರಕಾರದ ನೋಡಲ್ ಏಜೆನ್ಸಿಯಾಗಿರುವ ನ್ಯಾಷನಲ್ ಇನ್‌ಫಾರ್ಮೆಟಿಕ್ ಸೆಂಟರ್ (ಎನ್‌ಐಸಿ) ಖಾಸಗಿ ಖರೀದಿದಾರರಿಗೆ ಬೃಹತ್ ದತ್ತಾಂಶವನ್ನು ಹಂಚಿಕೊಳ್ಳುವುದರಿಂದ ಆಗುವ ಸಾಮಾನ್ಯ ಭದ್ರತೆ ಹಾಗೂ ಖಾಸಗಿತನನದ ಸಮಸ್ಯೆಗಳ ಬಗ್ಗೆ ಪ್ರಶ್ನೆ ಎತ್ತಿತ್ತು. ಖರೀದಿದಾರರ ಬಗ್ಗೆ ತೀವ್ರ ಒಲವುಳ್ಳ ಈ ಒಪ್ಪಂದಕ್ಕೆ ಸರಕಾರಿ ಅಧಿಕಾರಿಗಳು ಕೂಡ ಹಸಿರು ನಿಸಾನೆ ತೋರಿಸಿದ್ದರು. ಎನ್‌ಐಸಿ ಹಾಗೂ ರಸ್ತೆ ಸಾರಿಗೆ ಸಚಿವಾಲಯದ ಆಕ್ಷೇಪದ ಹೊರತಾಗಿಯೂ ದತ್ತಾಂಶ ಉಚಿತವಾಗಿ ಪಡೆಯಲು ಸಚಿವಾಲಯ ಹೆಚ್ಚುವರಿ ಅವಧಿಯನ್ನು ಕಂಪೆನಿಗೆ ನೀಡಿತ್ತು ಎಂಬುದನ್ನು ಸ್ವತಂತ್ರ ಪತ್ರಕರ್ತ ಶ್ರೀಗಿರೀಶ್ ಜಲಿಹಾಲ್ ಹಾಗೂ ದತ್ತಾಂಶ ಭದ್ರತಾ ವಿಶ್ಲೇಷಕ ಶ್ರೀನಿವಾಸ ಕೊಡಾಲಿ ಅವರಿಗೆ ಲಭ್ಯವಾದ ದಾಖಲೆಗಳು ಬಹಿರಂಗಪಡಿಸಿದೆ ಎಂದು ವರದಿ ಹೇಳಿದೆ.

ದಿ ವೈರ್‌ಗೆ ಲಭ್ಯವಾದ ಮಾಹಿತಿ ಪ್ರಕಾರ ಕಂಪೆನಿಯ ವಹಿವಾಟು 2014-15ರಲ್ಲಿ 2.25 ರೂಪಾಯಿ ಇದ್ದುದು 2015-16ರಲ್ಲಿ 163 ಪಟ್ಟು ಅಂದರೆ 3.70 ಕೋಟಿ ರೂಪಾಯಿಗೆ ಏರಿಕೆಯಾಯಿತು. ಈ ದತ್ತಾಂಶದಿಂದ ಕಂಪೆನಿ ನಿರಂತರ ಲಾಭ ಮಾಡಿಕೊಂಡಿತು ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News